ಬೆಂಗಳೂರು : ಡಾ.ಸ್ವಾಮಿನಾಥನ್ ವರದಿ ಜಾರಿಗೆ ಆಗ್ರಹಿಸಿ ಮಾರ್ಚ್ 23ರಂದು ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುತ್ತಿದ್ದು, ದೇಶದ ಎಲ್ಲ ಜೈಳುಗಲೂ ಭರ್ತಿಯಾಗುವಂತೆ ಹೋರಾಟ ಮಾಡೋಣ ಎಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಎಲ್ಲಾ ರೈತರಿಗೆ ಕರೆ ನೀಡಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಂಟಿಯಾಗಿ ಇಲ್ಲಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಬುಧವಾರ ಆಯೋಜಿಸಿದ್ದ ರೈತರ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅಣ್ಣಾ ಹಜಾರೆ, ಸಂವಿಧಾನವನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ ಹೇಳಿದರು.
ಮುಂದುವರೆದು ಮಾತನಾಡಿದ ಅವರು, ಪ್ರಸ್ತುತ ಕೇಂದ್ರ ಸರ್ಕಾರವು ಕೇವಲ ಉದ್ಯಮಿಗಳ ಕುರಿತು ಚಿಂತನೆ ಮಾಡುತ್ತಿದ್ದು ರೈತರ ಪರ ಕಾಳಜಿ ಇಲ್ಲದಂತಾಗಿದೆ. ಇದಕ್ಕೆ ಅವರು ಅಧಿಕಾರಕ್ಕೆ ಬರುವ ಮೊದಲು ನೀಡಿದ್ದ ಭರವಸೆಗಳು ಇಂದಿಗೂ ಭರವಸೆಗಳಾಗಿಯೇ ಉಳಿದಿರುವುದೇ ಸಾಕ್ಷಿ ಎಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.
ಈ ಸಂಬಂಧ ಡಾ.ಸ್ವಾಮಿನಾಥನ್ ವರದಿ ಜಾರಿಗೆ ಆಗ್ರಹಿಸಿ ಮಾರ್ಚ್ 23ರಂದು ದೆಹಲಿ ರಾಮಲೀಲಾ ಮೈದಾನದಲ್ಲಿ ಉಪವಾಸ ಕೂರುವುದು ಖಚಿತವಾಗಿದ್ದು, ತಮ್ಮ ಪ್ರಾಣ ಹೋದರೂ ಚಿಂತೆಯಿಲ್ಲ. ರೈತರಿಗೆ ನ್ಯಾಯ ದೊರೆಯಬೇಕು ಎಂದು ಅವರು ಹೇಳಿದರು.