ಮಂಡ್ಯ: ಗ್ರಾಮಸ್ಥರ ಸಾಕು ಪ್ರಾಣಿಗಳನ್ನು ತಿಂದು ಜನಸಾಮಾನ್ಯರಿಗೆ ತೊಂದರೆ ನೀಡುತ್ತಿದ್ದ 5ವರ್ಷದ ಗಂಡು ಚಿರತೆಯನ್ನು ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಕೃಷ್ಣರಾಜಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಗುಬ್ಬಹಳ್ಳಿ ಗ್ರಾಮದಲ್ಲಿ ಚಿರತೆ ಸಾಕು ಪ್ರಾಣಿಗಳನ್ನು ಕೊಲ್ಲುತ್ತಿದ್ದ ಬಗ್ಗೆ ಗ್ರಾಮಸ್ಥರು ನೀಡಿದ್ದ ದಾಖಲೆ ಮೇರೆಗೆ ಅರಣ್ಯ ಇಲಾಖೆಯ ಸಿಬ್ಬಂಧಿಗಳು ಬೋನು ಇರಿಸಿದ್ದರು. ಶುಕ್ರವಾರ (ಆ.28) ಮುಂಜಾನೆ ಚಿರತೆ ಆ ಬೋನಿನಲ್ಲಿ ಸಿಕ್ಕಿಬಿದ್ದಿದ್ದು ಗ್ರಾಮಸ್ಥರು ನೆಮ್ಮದಿಯ ನಿಟ್ಟಿಸಿರು ಬಿಡುವಂತಾಗಿದೆ.
ಚಿರತೆಯು (Leopard) ತಮ್ಮ ಸಾಕು ಪ್ರಾಣಿಗಳನ್ನು ತಿಂದು ತೊಂದರೆ ಕೊಡುತ್ತಿರುವ ಬಗ್ಗೆ ಗುಬ್ಬಹಳ್ಳಿ ಗ್ರಾಮಸ್ಥರು ಕೃಷ್ಣರಾಜಪೇಟೆ ತಾಲೂಕು ವಲಯ ಅರಣ್ಯಾಧಿಕಾರಿ ಹೆಚ್.ಎಸ್.ಗಂಗಾಧರ ಅವರಿಗೆ ಮನವಿ ನೀಡಿ ಗ್ರಾಮದ ಹೊರ ವಲಯದಲ್ಲಿ ಬೋನನ್ನು ಇರಿಸಿ ಚಿರತೆಯನ್ನು ಬಂಧಿಸುವಂತೆ ಮನವಿ ಮಾಡಿದ್ದರು.
ಗ್ರಾಮಸ್ಥರ ಮನವಿಗೆ ಸ್ಪಂದಿಸಿ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆಯ ಸಿಬ್ಬಂಧಿಗಳು ಗುಬ್ಬಹಳ್ಳಿ ಗ್ರಾಮದ ಚಂದ್ರಪ್ಪ ಅವರ ಕಬ್ಬಿನ ಗದ್ದೆಯ ಪಕ್ಕದಲ್ಲಿ ಬೋನನ್ನು ಇರಿಸಿದ್ದರು. ಶುಕ್ರವಾರ ಮುಂಜಾನೆ ಬೋನಿನೊಳಗಿದ್ದ ನಾಯನ್ನು ತಿನ್ನಲು ಬಂದ ಚಿರತೆಯು ಬೋನಿನೊಳಗೆ ಸಿಕ್ಕುಬಿದ್ದಿದೆ.
ಗ್ರಾಮದ ಹೊರವಲಯದಲ್ಲಿ ಚಿರತೆಯು ಗುಟುರು ಹಾಕುತ್ತಿದ್ದ ಸದ್ದನ್ನು ಅನುಸರಿಸಿಕೊಂಡು ಹೋಗಿ ನೋಡಿದಾಗ ಚಿರತೆಯು ಚಂದ್ರಪ್ಪ ಅವರ ಕಬ್ಬಿನ ಗದ್ದೆಯ ಬಳಿ ಬೋನಿನೊಳಗೆ ಸಿಕ್ಕಿಬಿದ್ದಿರುವುದನ್ನು ಗಮನಿಸಿ ಅರಣ್ಯ ಇಲಾಖೆಯ ಸಿಬ್ಬಂಧಿಗಳಿಗೆ ವಿಷಯ ಮುಟ್ಟಿಸಿದರು. ವಲಯ ಅರಣ್ಯಾಧಿಕಾರಿ ಗಂಗಾಧರ, ಸಹಾಯಕ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಮತ್ತು ಸಿಬ್ಬಂಧಿಗಳು ಸ್ಥಳಕ್ಕೆ ಭೇಟಿ ನೀಡಿ ಚಿರತೆಯಿರುವ ಬೋನನ್ನು ಮುತ್ತತ್ತಿ ಬಳಿಯ ಕಾವೇರಿ ವನ್ಯಧಾಮಕ್ಕೆ ಕೊಂಡೊಯ್ದು ಚಿರತೆಯನ್ನು ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟಿದ್ದಾರೆ.
ಚಿರತೆ ಹಾವಳಿಯನ್ನು ನಿಯಂತ್ರಿಸಿ, ಚಿರತೆಯನ್ನು ಬಂಧಿಸುವಂತೆ ಗ್ರಾಮಸ್ಥರು ಮಾಡಿದ್ದ ಮನವಿಗೆ ಪ್ರಾಮಾಣಿಕ ಸ್ಪಂದನೆ ಮಾಡಿ ಬೋನನ್ನು ಇರಿಸಿ ಚಿರತೆಯನ್ನು ಬಂಧಿಸಿದ ತಾಲೂಕು ವಲಯ ಅರಣ್ಯಾಧಿಕಾರಿ ಹೆಚ್.ಎಸ್.ಗಂಗಾಧರ ಮತ್ತು ಸಿಬ್ಬಂಧಿಗಳ ಕಾರ್ಯದಕ್ಷತೆಯನ್ನು ಗ್ರಾಮಸ್ಥರು ಅಭಿನಂದಿಸಿದ್ದಾರೆ.