ಬೆಂಗಳೂರು: ರಾಜ್ಯದಲ್ಲಿ ಬುಗಿಲೆದ್ದಿರುವ ಡ್ರಗ್ಸ್ ಪ್ರಕರಣದ ವಿಚಾರವಾಗಿ ಪ್ರತಿಕ್ರಿಯಿಸಿರುವ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ನಿಷ್ಪಕ್ಷಪಾತ ತನಿಖೆ ಮೂಲಕ ಕಠಿಣ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಮಾದಕ ವಸ್ತುಗಳ ಮಾರಾಟ ಸಂಬಂಧ ನಿಷ್ಪಕ್ಷಪಾತ ತನಿಖೆ ನಡೆಸಿ, ಸೂಕ್ತ ಸಾಕ್ಷ್ಯಗಳಿದ್ದಲ್ಲಿ ಯಾರೇ ಆದರೂ ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಿ. ಡ್ರಗ್ಸ್ ಮಾರಾಟ, ಉತ್ಪಾದನೆ, ಸೇವನೆ ಎಲ್ಲವೂ ಶಿಕ್ಷಾರ್ಹವೇ. ಈ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಅದು ಅಪರಾಧ ಎಂಬುದರಲ್ಲಿ ಎರಡು ಮಾತಿಲ್ಲ ಎಂದರು.
ಕೇಂದ್ರ ಸರ್ಕಾರದ ಬಳಿ ಜನ ಕಲ್ಯಾಣ ಯೋಜನೆಗಳಿಗೆ ಹಣವಿಲ್ಲದಿದ್ದರೆ ವಿಶ್ವಬ್ಯಾಂಕ್, ಏಷಿಯನ್ ರಾಷ್ಟ್ರಗಳ ಅಭಿವೃದ್ಧಿ ಬ್ಯಾಂಕ್ಗಳಿಂದ ಸಾಲ ತರಬೇಕಿತ್ತು. ಕೊರೊನಾ ಬಂದಿದ್ದಕ್ಕೆ ನಮ್ಮ ಬಳಿ ಹಣವಿಲ್ಲ, ಇದೆಲ್ಲಾ ದೇವರ ಆಟ ಅಂತ ಹೇಳಲು ಜನ ಇವರನ್ನು ಗೆಲ್ಲಿಸಿ ಅಧಿಕಾರ ನೀಡಿದ್ದಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
2017-18 ರಲ್ಲಿ ಉದ್ಯಮಸ್ನೇಹಿ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ 8ನೇ ಸ್ಥಾನದಲ್ಲಿತ್ತು. ಈಗ 17ನೇ ಸ್ಥಾನಕ್ಕೆ ಕುಸಿದಿದೆ. ಕಳೆದ ಒಂದೂಕಾಲು ವರ್ಷದಿಂದ ಆಡಳಿತ ನಡೆಸುತ್ತಿರೋದು ಬಿಜೆಪಿ ಸರ್ಕಾರ ಅಂದಮೇಲೆ ಬೇರೆಯವರು ಹೇಗೆ ಹೊಣೆಯಾಗ್ತಾರೆ. ಇದು 'ಕುಣಿಯೋಕೆ ಬಾರದವರು ನೆಲ ಡೊಂಕು' ಅಂದ ಹಾಗಿದೆ' ಎಂದು ಹೇಳಿದರು