ಉಡುಪಿ : ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಬೆನ್ನಲೇ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ರಾಹುಲ್ ಗಾಂಧಿ ಒಬ್ಬ 'ಬಚ್ಚಾ' ಎಂದಿದ್ದಾರೆ.
ಮುಂಬರಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿರುವ ಬಿ.ಎಸ್.ಯಡಿಯೂರಪ್ಪ, ಕಾಂಗ್ರೆಸ್ ಅಧ್ಯಕ್ಷ 'ಬಚ್ಚಾ' ರಾಹುಲ್ ಗಾಂಧಿ ರಾಜ್ಯಕ್ಕೆ ಬರುತ್ತಿರುವುದು ಬಿಜೆಪಿಗೆ ಸಹಾಯವಾಗಲಿದೆ ಹೇಳಿದ್ದಾರೆ.
ಉಡುಪಿಯ ಬಿಜೆಪಿ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, "ಕರ್ನಾಟಕಕ್ಕೆ ಆ 'ಬಚ್ಚ' ಆಗಮಿಸುವುದರಿಂದ ನಾವು ಇಲ್ಲಿ 150 ಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಗಳಿಸಲಿದ್ದೇವೆ ಎಂಬುದು ಈಗ ನಮಗೆ ತಿಳಿದಿದೆ" ಎಂದು ಯಡಿಯೂರಪ್ಪ ಹೇಳಿದ್ದಾರೆ.
ಈ ತಿಂಗಳ ಆರಂಭದಲ್ಲಿ, ಯಡಿಯೂರಪ್ಪ, ರಾಹುಲ್ ಗಾಂಧಿಯಯನ್ನು 'ಚುನಾವಣಾ ಹಿಂದು' ಅಪಹಾಸ್ಯ ಮಾಡಿದ್ದರಲ್ಲದೆ, ಅವರ ಆಗಮನವು ಕೇಸರಿ ಪಕ್ಷಕ್ಕೆ ಅದೃಷ್ಟವನ್ನು ತರಲಿದೆ ಎಂದರು. ಮುಂದುವರೆದು ಮಾತನಾಡಿದ ಅವರು, ರಾಹುಲ್ ಗಾಂಧಿ ಅಭಿಯಾನ ಬಿಜೆಪಿಯ 'ಕಾಂಗ್ರೆಸ್ ಮುಕ್ತ ಕರ್ನಾಟಕ'ದ ಕನಸನ್ನು ನನಸಾಗಿಸಲಿದೆ ಎಂದು ಹೇಳಿದರು.
ಕೆಲ ದಿನಗಳ ಹಿಂದೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ 3 ದಿನಗಳ ಕರ್ನಾಟಕ ರಾಜ್ಯ ಪ್ರವಾಸ ಕೈಗೊಂಡು, ಉತ್ತರ ಕರ್ನಾಟಕ ಭಾಗದ ವಿವಿಧ ಪ್ರದೇಶಗಳಲ್ಲಿ ವಿಶೇಷ ವಾಹನದಲ್ಲಿ ಜನಾಶೀರ್ವಾದ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯಿಲಿ, ದಿನೇಶ್ ಗುಂಡೂರಾವ್ ಮುಂತಾದವರು ಭಾಗವಹಿಸಿದ್ದರು.
ಈ ಪ್ರವಾಸದಲ್ಲಿ ರಾಹುಲ್ ಗಾಂಧಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ರಸ್ತೆ ಮಧ್ಯೆ ಹೋಟೆಲೊಂದರಲ್ಲಿ ಮಿರ್ಚಿ ಬಜ್ಜಿ ತಿಂದಿದ್ದ ಫೋಟೋಗಳು, ವೀಡಿಯೋಗಳು ಹೆಚ್ಚು ವೈರಲ್ ಆಗಿತ್ತು.