ನವದೆಹಲಿ: ವ್ಯಾಪಾರ ಮತ್ತು ದ್ವಿಪಕ್ಷೀಯ ಸಂಬಂಧಗಳನ್ನು ಹೆಚ್ಚಿಸಲು ಅಗತ್ಯವಾದ ಆರು ಪ್ರಮುಖ ಒಪ್ಪಂದಗಳಿಗೆ ಇಂದು ಭಾರತ ಮತ್ತು ಕೆನಡಾ ಸಹಿ ಹಾಕಿವೆ.
ಭಾರತ ಪ್ರವಾಸ ಕೈಗೊಂಡಿರುವ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡಿಯೊ ಅವರು ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ನಡೆದ ಮತವಾದ ಸಭೆಯಲ್ಲಿ ಈ ದ್ವಿಪಕ್ಷೀಯ ಒಪ್ಪಂದಕ್ಕೆ ಎರಡು ರಾಷ್ಟ್ರಗಳ ನಾಯಕರು ಸಹಿ ಹಾಕಿದರು.
ನಂತರ ಕೆನಡಾ ಪ್ರಧಾನಿ ಟ್ರುಡಿಯೋ ಅವರೊಂದಿಗೆ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ತಾವು ಮತ್ತು ಕೆನಡಾ ಪ್ರಧಾನಿ ಹಲವು ವಿಷಯಗಳ ಕುರಿತು ಮಾತುಕತೆ ನಡೆಸಿದ್ದು ರಕ್ಷಣಾ ಕಾರ್ಯ, ಭಯೋತ್ಪಾದನೆ ಮತ್ತು ತೀವ್ರಗಾಮಿತ್ವಗಳು ಇಂದು ದೇಶಗಳ ಬೆಳವಣಿಗೆಗೆ ಹೇಗೆ ಬೆದರಿಕೆಯಾಗಿವೆ ಮತ್ತು ಅವುಗಳನ್ನು ಹೊಡೆದೋಡಿಸಲು ಒಗ್ಗಟ್ಟಿನಿಂದ ಹೋರಾಡುವ ಅಗತ್ಯಗಳ ಕುರಿತು ಚರ್ಚೆ ನಡೆಸಿದ್ದೇವೆ ಎಂದು ಹೇಳಿದರು.
ಕೆನಡಾ ದೇಶ ಅತಿ ಹೆಚ್ಚು ಇಂಧನ ಶಕ್ತಿ ಹೊಂದಿರುವ ದೇಶವಾಗಿದ್ದು ನಮ್ಮ ದೇಶದ ಹೆಚ್ಚುತ್ತಿರುವ ಇಂಧನ ಬೇಡಿಕೆಗಳನ್ನು ಕೂಡ ಪೂರೈಸಲಿದೆ. ಅಲ್ಲದೆ ಉನ್ನತ ಶಿಕ್ಷಣ ಪಡೆಯಲು ಇಚ್ಛಿಸುವ ಭಾರತೀಯ ವಿದ್ಯಾರ್ಥಿಗಳಿಗೆ ಕೆನಡಾ ಒಂದು ಅತ್ಯುತ್ತಮ ದೇಶ, ಇಂದು 1 ಲಕ್ಷದ 20 ಸಾವಿರಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಅಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಉನ್ನತ ಶಿಕ್ಷಣಕ್ಕೆ ಸಂಬಂಧಪಟ್ಟಂತೆ ನಿಲುವಳಿ ಒಪ್ಪಂದವನ್ನು ನವೀಕರಿಸಿದ್ದು ಉನ್ನತ ಶಿಕ್ಷಣ ಕ್ಷೇತ್ರದಲ್ಲಿನ ಪರಸ್ಪರ ಸಹಕಾರವನ್ನು ವಿಸ್ತರಿಸಲು ಸಹಾಯವಾಗಲಿದೆ ಎಂದು ಪ್ರಧಾನಿ ಹೇಳಿದರು.
ನಂತರ ಮಾತನಾಡಿದ ಕೆನಡಾ ಪ್ರಧಾನಿ ಟ್ರುಡಿಯೋ, ನಾವು ಕೇವಲ ಶ್ರೀಮಂತ ಇತಿಹಾಸವನ್ನು ಮಾತ್ರ ಹಂಚಿಕೊಳ್ಳುತ್ತಿಲ್ಲ, ಎರಡೂ ರಾಷ್ಟ್ರಗಳ ನಡುವೆ ಸಹಜ ಸ್ನೇಹವನ್ನು ಪ್ರೋತ್ಸಾಹಿಸುವ ಮೌಲ್ಯಗಳನ್ನೂ ಹೊಂದಿದ್ದೇವೆ. ತನ್ನ ಗಡಿಯನ್ನೂ ಮೀರಿ ವಾಣಿಜ್ಯೋದ್ಯಮದಲ್ಲಿ ನೂತನ ಅವಕಾಶಗಳನ್ನು ಎದುರು ನೋಡುತ್ತಿದೆ. ವಾಣಿಜ್ಯ ಸಹಕಾರಕ್ಕೆ ಭಾರತ ದೇಶ ಸಹಜ ಪಾಲುದಾರವಾಗಿದ್ದು ನಂಬಿಕೆಯುಳ್ಳ ಸ್ನೇಹ ರಾಷ್ಟ್ರವಾಗಿದೆ ಎಂದು ಶ್ಲಾಘಿಸಿದರು.
ಇದಕ್ಕೂ ಮುನ್ನ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಕೆನಡಿಯನ್ ಪ್ರಧಾನಿ ಅವರೊಂದಿಗೆ ಪರಸ್ಪರ ಆಸಕ್ತಿ ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ. ಈ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.
Taking the relationship forward! PM @narendramodi and Canadian PM @JustinTrudeau discussed strengthening cooperation in trade & investment, energy, education, healthcare, IT, start up, science & technology, defence and security, tourism and people-to-people contacts. pic.twitter.com/OS7wj84IcE
— Raveesh Kumar (@MEAIndia) February 23, 2018
ಸಭೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಗ್ಗೆ ಕೆನಡ ಪ್ರದಾನಿ ಜಸ್ಟಿನ್ ಟ್ರುಡಿಯೋ ಅವರಿಗೆ ಆತ್ಮೀಯ ಅಪ್ಪುಗೆಯ ಸ್ವಾಗತ ನೀಡಿದರು. ಟ್ರೂಡಿಯೋ ಮತ್ತು ಅವರ ಕುಟುಂಬದವರನ್ನು ಪ್ರಧಾನಿ ಮೋದಿ ರಾಷ್ಟ್ರಪತಿ ಭವನಕ್ಕೆ ಆದರದಿಂದ ಸ್ವಾಗತಿಸಿದರು. ಟ್ರೂಡಿಯೋ ಅವರಿಗೆ ರಾಷ್ಟ್ರಪತಿ ಭವನದಲ್ಲಿ ಅಭಿನಂದನೆಯನ್ನೂ ಸಲ್ಲಿಸಲಾಯಿತು.