ಬೆಂಗಳೂರು: ಕಾಂಗ್ರೆಸ್ ಚುನಾವಣೆ ಸಮಿತಿ ಸಭೆ ಬೆನ್ನಲ್ಲೇ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಗೆ ಪ್ರಯಾಣ ಬೆಳೆಸುತ್ತಿದ್ದು, ಈ ಪ್ರಯಾಣ ತುಂಬಾ ಮಹತ್ವ ಪಡೆದುಕೊಂಡಿದೆ.
ಬುಧವಾರ ದೇವನಹಳ್ಳಿಯ ಖಾಸಗಿ ರೆಸಾರ್ಟ್‌ನಲ್ಲಿ ಕಾಂಗ್ರೆಸ್ ಟಿಕೆಟ್ ಹಂಚಿಕೆ ವಿಚಾರವಾಗಿ ಚರ್ಚೆ ನಡೆಸಲಾಗಿದ್ದು, ಹಾಲಿ ಇರುವ ಶಾಸಕರಿಗೆ ಟಿಕೆಟ್ ನೀಡಬೇಕು, ಹಾಗೇ ಕಳೆದ ಚುನಾವಣೆಯಲ್ಲಿ 15 ಸಾವಿರಕ್ಕೂ ಹೆಚ್ಚು ಅಂತರದಲ್ಲಿ ಸೋಲನುಭವಿಸಿದ ಅಭ್ಯರ್ಥಿಗಳಿಗೆ ಟಿಕೇಟ್ ನೀಡುವುದು ಎಷ್ಟು ಸರಿ... ಹೀಗೆ ಮೊದಲಾದ ಅಂಶಗಳ ಬಗ್ಗೆ ಸಿದ್ದರಾಮಯ್ಯ ನೇತೃತ್ವದ ಸಭೆಯಲ್ಲಿ ಚರ್ಚೆ ನಡೆಸಲಾಗಿತ್ತು. ಈ ಚುನಾವಣಾ ಸಮಿತಿ ಸಭೆ ವರದಿಯೊಂದಿಗೆ ಪೂರ್ವ ನಿಗದಿಯಂತೆ ಇಂದು ಸಿದ್ದರಾಮಯ್ಯ ಮತ್ತು ತಂಡ ದೆಹಲಿಗೆ ತೆರಳಲಿದೆ.
ದೆಹಲಿಯಲ್ಲಿ ಮಾರ್ಚ್ 16,17 ಮತ್ತು 18ರಂದು ಮೂರು ದಿನಗಳ ಕಾಲ ಎಐಸಿಸಿ ಅಧಿವೇಶನ ನಡೆಯಲಿದ್ದು, ಸಚಿವರಾದ ಕೆ.ಜೆ.ಜಾರ್ಜ್, ದಿನೇಶ್ ಗುಂಡುರಾವ್, ರೋಶನ್ ಬೇಗ್, ರಾಜ್ಯಾಧ್ಯಕ್ಷ ಜಿ.ಪರಮೇಶ್ವರ್ ಸೇರಿದಂತೆ ಪಕ್ಷದ ಹಲವು ಮುಖಂಡರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ. ಈ ಅಧಿವೇಶನದಲ್ಲಿ ಪ್ರಸಕ್ತ ರಾಜಕೀಯ ಸ್ಥಿತಿ ಗತಿ ಹಾಗೂ ಕಾಂಗ್ರೆಸ್ ಪಕ್ಷ ಬಲವರ್ಧನೆ ಬಗ್ಗೆ ಚರ್ಚೆ ನಡೆಯಲಿದೆ. ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಹೈಕಮಾಂಡ್ ಭೇಟಿಯಾಗಿ ಕರ್ನಾಟಕ ಚುನಾವಣೆ ಹಾಗೂ ಟಿಕೆಟ್ ಹಂಚಿಕೆ ವಿಚಾರವಾಗಿ ಚರ್ಚೆ ನಡೆಸುವ ಸಾಧ್ಯತೆ ಇದೆ.