KSRTC Strike: ಇಂದಿನಿಂದ ಸಾರಿಗೆ ನೌಕರರ ಮುಷ್ಕರ, ಬಸ್ ಸಂಚಾರದಲ್ಲಿ ವ್ಯತ್ಯಯ

ರಾಜ್ಯದ ಹಲವೆಡೆ ನೆನ್ನೆಯಿಂದಲೇ ಸಾರಿಗೆ ಮುಷ್ಕರದ ಬಿಸಿ ತಟ್ಟಿದ್ದು ಸಾರ್ವಜನಿಕರು ಪರದಾಡುವಂತಾಗಿದೆ. 

Written by - Yashaswini V | Last Updated : Apr 7, 2021, 07:30 AM IST
  • ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಸೇರಿದಂತೆ ನಾಲ್ಕು ವಲಯಗಳ ಸಾರಿಗೆ ನೌಕರರ ಮುಷ್ಕರ
  • ಆರನೇ ವೇತನ ಜಾರಿಗೆ ತರಲು ಹಿಂದೇಟು ಹಾಕಿರುವ ಸರ್ಕಾರದ ನಡೆಯ ವಿರುದ್ಧ ಸಾರಿಗೆ ನೌಕರರ ಅನಿರ್ಧಿಷ್ಟಾವಧಿ ಮುಷ್ಕರ
  • ಸಾರಿಗೆ ನೌಕರರು ಕೇಳುವುದರಲ್ಲಿ ನ್ಯಾಯವಿದೆ, ಆದರೆ...
KSRTC Strike: ಇಂದಿನಿಂದ ಸಾರಿಗೆ ನೌಕರರ ಮುಷ್ಕರ, ಬಸ್ ಸಂಚಾರದಲ್ಲಿ ವ್ಯತ್ಯಯ title=
File Image

ಬೆಂಗಳೂರು:  ಆರನೇ ವೇತನ ಆಯೋಗದ (6th Pay Commission) ಶಿಫಾರಸ್ಸು ಜಾರಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಾರಿಗೆ ನೌಕರರು ಇಂದಿನಿಂದ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ಮಂಗಳವಾರದಿಂದಲೇ ಸಾರಿಗೆ ನೌಕರರ ಮುಷ್ಕರದ ಬಿಸಿ ತಟ್ಟಿದ್ದು ಪ್ರಯಾಣಿಕರು ಪರದಾಡುವಂತಾಗಿದೆ.

ಕೆಎಸ್‌ಆರ್‌ಟಿಸಿ (KSRTC), ಬಿಎಂಟಿಸಿ, ಸೇರಿದಂತೆ ನಾಲ್ಕು ವಲಯಗಳ ಸಾರಿಗೆ ನೌಕರರ ಮುಷ್ಕರದಿಂದ ಪ್ರಯಾಣಿಕರಿಗೆ ಆಗುತ್ತಿರುವ ಅನಾನುಕೂಲವನ್ನು ತಪ್ಪಿಸುವ ಉದ್ದೇಶದಿಂದ ಪರ್ಯಾಯ ವ್ಯವಸ್ಥೆ ಮಾಡುತ್ತಿರುವ ಸರ್ಕಾರ ಖಾಸಗಿ ವಾಹನಗಳ ಸಂಚಾರಕ್ಕೆ ಮುಕ್ತ ಅವಕಾಶ ಕಲ್ಪಿಸಿದೆ. 

ಈ ಹಿಂದೆ ಡಿಸೆಂಬರ್ 2020ರಲ್ಲಿ ಪ್ರತಿಭಟನೆ ನಡೆಸಿದ್ದ ಕರ್ನಾಟಕ ರಾಜ್ಯ ಸಾರಿಗೆ ನೌಕರರು 9 ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದರು. ಆದರೆ ಅವುಗಳಲ್ಲಿ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಹಿಂದೇಟು ಹಾಕಿದೆ. ಅದರಲ್ಲೂ ಮುಖ್ಯವಾಗಿ ಆರನೇ ವೇತನ ಜಾರಿಗೆ ತರಲು ಹಿಂದೇಟು ಹಾಕಿರುವ ಸರ್ಕಾರದ ನಡೆಯ ವಿರುದ್ಧ ಸಾರಿಗೆ ನೌಕರರು ಇಂದಿನಿಂದ ಅನಿರ್ಧಿಷ್ಟಾವಧಿ ಮುಷ್ಕರ ನಡೆಸುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ - Karnataka Congress: 'ಬಿಜೆಪಿ ಸರ್ಕಾರ ಸಾರಿಗೆ ನೌಕರರ ಧ್ವನಿ ಹತ್ತಿಕ್ಕುವ ಕೆಲಸ ಮಾಡುತ್ತಿದೆ' 

ವಾಸ್ತವವಾಗಿ ಡಿಸೆಂಬರ್ ನಲ್ಲಿ ಮುಷ್ಕರ ನಡೆಸಿದ್ದ ಸಾರಿಗೆ ನೌಕರರು ಸರ್ಕಾರದ ಮುಂದೆ ಒಂಬತ್ತು ಬೇಡಿಕೆಗಳನ್ನು ಇಟ್ಟಿದ್ದರು. ಅದರಲ್ಲಿ ಎಂಟು ಬೇಡಿಕೆಗಳನ್ನು ಈಡೇರಿಸಲಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ನಮ್ಮ ಪ್ರಮುಖ ಬೇಡಿಕೆಯಾದ ಆರನೇ ವೇತನ ಆಯೋಗವನ್ನು ಜಾರಿಗೆ ತರಲು ಸರ್ಕಾರ ಹಿಂದೇಟು ಹಾಕುತ್ತಿದೆ. ಈ ಹಿನ್ನಲೆಯಲ್ಲಿ ತಾವು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ತೆರಳುತ್ತಿರುವುದಾಗಿ ನೌಕರರು ಹೇಳುತ್ತಿದ್ದಾರೆ.

ಆದರೆ ಕೋವಿಡ್-19 (COVID-19) ರ ಕಾರಣದಿಂದಾಗಿ ಹಣಕಾಸಿನ ಮುಗ್ಗಟ್ಟಿನ ಹೊರತಾಗಿಯೂ ನೌಕರರ ಹೆಚ್ಚಿನ ಬೇಡಿಕೆಗಳನ್ನು ಪರಿಹರಿಸಲಾಗಿದೆ. ರಸ್ತೆ ಸಾರಿಗೆ ನಿಗಮದ ಕಾರ್ಮಿಕರಿಗಾಗಿ ಆರನೇ ವೇತನ ಆಯೋಗದ ವರದಿಯನ್ನು ಅನುಷ್ಠಾನಗೊಳಿಸುವ ಅವರ ಬೇಡಿಕೆಯನ್ನು ಈಡೇರಿಸಲಾಗುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿತು.

ಈ ವಿಷಯಕ್ಕೆ ಸಂಬಂಧಿಸಿದಂತೆ ನಿನ್ನೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa) ಅವರ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯ ಕಾರ್ಯದರ್ಶಿ ರವಿ ಕುಮಾರ್,  ಈ ಹಿಂದೆ ಮುಷ್ಕರ ನಡೆಸಿದ್ದ ಸಾರಿಗೆ ನೌಕರರು ಸರ್ಕಾರದ ಮುಂದೆ ಒಟ್ಟು ಒಂಬತ್ತು ಬೇಡಿಕೆಗಳನ್ನು ಇಟ್ಟಿದ್ದರು. ಅವುಗಳಲ್ಲಿ ಎಂಟು ಬೇಡಿಕೆಗಳನ್ನು ಈಡೇರಿಸಲಾಗಿದೆ ಮತ್ತು ಅನುಷ್ಠಾನಗೊಳಿಸಲಾಗಿದೆ ಎಂದಿದ್ದಾರೆ. 

ಇದನ್ನೂ ಓದಿ - "ಬಿಜೆಪಿ ಸರಕಾರದ ವೈಫಲ್ಯವೇ ಕಾಂಗ್ರೆಸ್ ಪಕ್ಷದ ಯಶಸ್ಸು"

ಸಾರಿಗೆ ನೌಕರಿಗೆ ಮುಖ್ಯಮಂತ್ರಿ ಮನವಿ:
ರಾಜ್ಯ ಸರ್ಕಾರವು ಸಾರಿಗೆ ನೌಕರರ ಎಂಟು ಬೇಡಿಕೆಗಳನ್ನು ಈಡೇರಿಸಿರುವುದರ ಹೊರತಾಗಿಯೂ ಈ ರೀತಿ ಹಠ ಮಾಡುವುದು ಸೂಕ್ತವಲ್ಲ. ದಯಮಾಡಿ ಹಠ ಮಾಡದೆಯೇ ಜನರ ಹಿತದೃಷ್ಟಿಯಿಂದ ಕೆಲಸ ಮಾಡಬೇಕು. ಸರ್ಕಾರ ಬಿಗಿಯಾದ ಕ್ರಮ ತೆಗೆದುಕೊಳ್ಳುವುದಕ್ಕೆ ಅವಕಾಶ ಕಲ್ಪಿಸದೆ ಕರ್ತ್ಯವ್ಯಕ್ಕೆ ಹಾಜರಾಗಿ ಸರ್ಕಾರದೊಂದಿಗೆ ಸಹಕರಿಸುವುವಂತೆ ಸಿಎಂ ಸಾರಿಗೆ ನೌಕರರಿಗೆ ಮನವಿ ಮಾಡಿದ್ದಾರೆ.

ಸಾರಿಗೆ ನೌಕರರು ಕೇಳುವುದರಲ್ಲಿ ನ್ಯಾಯವಿದೆ, ಆದರೆ...
ಸಾರಿಗೆ ನೌಕರರ ಮುಷ್ಕರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರೂ ಆಗಿರುವ ಲಕ್ಷ್ಮಣ ಸವದಿ (Laxman Savadi), ಸಾರಿಗೆ ನೌಕರರು ಕೇಳುವುದರಲ್ಲಿ ನ್ಯಾಯವಿದೆ. ಆದರೆ ಅವರು ಕೇಳುತ್ತಿರುವ ಸಮಯ ಸರಿಯಲ್ಲ. ಹಠದಿಂದ ಸರ್ಕಾರವನ್ನು ಬಗ್ಗಿಸುತ್ತೇವೆ, ಹಠದಿಂದ ಅದನ್ನು ಪಡೆದೇ ತೀರುತ್ತೇವೆ ಎಂಬ ಅವರ ಧೋರಣೆ ಸರಿಯಿಲ್ಲ. ದಯವಿಟ್ಟು ಈ ಹಠಮಾರಿ ಧೋರಣೆಯಿಂದ ಹೊರಬನ್ನಿ. ಇದು ಸಂಘರ್ಷಕ್ಕೆ ಹೋಗಬಾರದು. ನಾನು ನಿಮ್ಮ ಮನೆ ಮಗನಂತೆ ಮನವಿ ಮಾಡುತ್ತಿದ್ದೇನೆ ದಯವಿಟ್ಟು ಕರ್ತವ್ಯಕ್ಕೆ ಹಾಜರಾಗಿ ಎಂದಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News