ನವದೆಹಲಿ : ರಿಲಯನ್ಸ್ ಜಿಯೊ ಇದೀಗ ತನ್ನದೇ ಪೇಮೆಂಟ್ ಬ್ಯಾಂಕ್ ಆರಂಭಿಸಿರುವುದಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ. 2015ರ ಆಗಸ್ಟ್ ತಿಂಗಳಿನಲ್ಲಿ ಪೇಮೆಂಟ್ ಬ್ಯಾಂಕನ್ನು ಸ್ಥಾಪಿಸಲು ಅನುಮತಿ ಪಡೆದ 11 ಕಂಪನಿಗಳಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಕೂಡ ಒಂದು. ಇದೀಗ ರಿಸರ್ವ್ ಬ್ಯಾಂಕ್ ಅಧಿಸೂಚನೆಯ ಪ್ರಕಾರ, ಜಿಯೋ ತನ್ನ ಪೇಮೆಂಟ್ ಬ್ಯಾಂಕ್ ಅನ್ನು ಏಪ್ರಿಲ್ 3, 2018 ರಿಂದ ಪ್ರಾರಂಭಿಸಿದೆ.
ಏರ್ಟೆಲ್-ಪೇಟಿಎಂ ಬ್ಯಾಂಕ್'ಗಳಿಗೆ ಸ್ಪರ್ಧೆ
ಜಿಯೋ ಪೇಮೆಂಟ್ ಬ್ಯಾಂಕ್ ಆರಂಭದಿಂದಾಗಿ, ಏರ್ಟೆಲ್-ಪೇಟಿಎಂ ಪೇಮೆಂಟ್ ಬ್ಯಾಂಕ್ಗಳಿಗೆ ದೊಡ್ಡ ಹೊಡೆತ ಉಂಟಾಗಿದೆ. ಟೆಲಿಕಾಂ ವಲಯದ ಭಾರ್ತಿ ಏರ್ಟೆಲ್ ನವೆಂಬರ್ 2016 ರಲ್ಲಿ ಮೊದಲ ಪೇಮೆಂಟ್ ಬ್ಯಾಂಕ್ ಆರಮಭಿಸಿತು. ನಂತರ, ಪೇಟಿಎಂ ಸಂಸ್ಥಾಪಕ ವಿಜಯ್ ಶೇಖರ್ ಶರ್ಮ ಪೇಟಿಎಂ ಪೇಮೆಂಟ್ ಬ್ಯಾಂಕ್'ಅನ್ನು ಮೇ 2017 ರಲ್ಲಿ ಆರಂಭಿಸಿದರು. ಇದಲ್ಲದೆ, ಬಹಳಷ್ಟು ಕಮಪನಿಗಳು ಇಂದು ಪೇಮೆಂಟ್ ಬ್ಯಾಂಕ್ಗಳನ್ನು ಆರಂಭಿಸಿವೆ. ಆದರೆ ಇದೀಗ ಜಿಯೋ ಪೇಮೆಂಟ್ ಬ್ಯಾಂಕ್ ಆರಂಭಿಸಿರುವುದು ಇತರ ಕಂಪನಿಗಳಿಗೆ ಕಠಿಣ ಸ್ಪರ್ಧೆ ನೀಡುವ ನಿರೀಕ್ಷೆಯಿದೆ.
ಕುತೂಹಲಕಾರಿ ಸ್ಪರ್ಧೆ
ಟೆಲಿಕಾಂ ವಲಯದಲ್ಲಿ ರಿಲಯನ್ಸ್ ಜಿಯೋ ಈಗಾಗಲೇ ತನ್ನ ಪ್ರಬಲ ಹಿಡಿತ ಸಾಧಿಸಿದೆ. ಅದರ ಉಚಿತ ಧ್ವನಿ ಕರೆ ಮತ್ತು ಡೇಟಾದ ಮೂಲಕ ಜಿಯೋ 12 ಮಿಲಿಯನ್ ಬಳಕೆದಾರರನ್ನು ಹೊಂದಿದೆ. ಅಷ್ಟೇ ಅಲ್ಲ, ಈ ಕಂಪೆನಿ ತನ್ನ ಗ್ರಾಹಕರ ಪ್ರೈಮ್ ಮೆಂಬರ್ಶಿಪ್ ಅನ್ನು ಒಂದು ವರ್ಷದವರೆಗೆ ವಿಸ್ತರಿಸಿದೆ. ಇದೀಗ ಜಿಯೋ ತನ್ನ ಪೇಮೆಂಟ್ ಬ್ಯಾಂಕ್ ಆರಂಭದಿಂದಾಗಿ ಬ್ಯಾಂಕಿಂಗ್ ವಲಯದಲ್ಲಿ ತನ್ನದೇ ಪ್ರಾಬಲ್ಯ ಸಾಧಿಸಲಿದೆ ಎಂದು ಹೇಳಲಾಗುತ್ತಿದೆ. ಇದರಿಂದಾಗಿ ಪೇಮೆಂಟ್ ಬ್ಯಾಕಿಂಗ್ನಲ್ಲಿ ಏರ್ಟೆಲ್-ಪೇಟಿಎಂ ಗೆ ಜಿಯೋ ಯಾವ ರೀತಿ ಸ್ಪರ್ಧೆ ನೀಡಲಿದೆ ಎಂಬುದು ಟೆಲಿಕಾಂ ವಲಯದಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಜಿಯೋ ಪೇಮೆಂಟ್ ಬ್ಯಾಂಕಿನಿಂದ ದೊರೆಯುವ ಪ್ರಯೋಜನಗಳು
* ಯಾವುದೇ ಉಳಿತಾಯ ಖಾತೆಯನ್ನು ಪೇಮೆಂಟ್ ಬ್ಯಾಂಕ್ನಲ್ಲಿ ತೆರೆಯಬಹುದು.
* ಈ ಖಾತೆಯಲ್ಲಿ ಒಂದು ಲಕ್ಷ ರೂ.ಗಳ ಠೇವಣಿ ಇಡಲು ಅವಕಾಶವಿದೆ.
* ಪೇಮೆಂಟ್ ಬ್ಯಾಂಕ್ ಡೆಬಿಟ್ ಕಾರ್ಡ್ ಸಹ ನೀಡುತ್ತದೆ.
* ಪೇಮೆಂಟ್ ಬ್ಯಾಂಕ್ ಸಹ ತನ್ನ ಗ್ರಾಹಕರಿಗೆ ಮ್ಯೂಚುಯಲ್ ಫಂಡ್ ಮತ್ತು ಇನ್ಶುರೆನ್ಸ್ ಸೇವೆ ಸೇರಿದಂತೆ ಇತರ ಸಾಮಾನ್ಯ ಹಣಕಾಸು ಸೇವೆ ಒದಗಿಸುವ ಸೌಲಭ್ಯ ಹೊಂದಿದೆ.
ಉದ್ಯಮಿಗಳಿಗೂ ಸಿಗಲಿದೆ ಲಾಭ
* ಸಣ್ಣ ಉದ್ಯಮಿಗಳಿಗೆ ಪೇಮೆಂಟ್ ಬ್ಯಾಂಕ್ ಇದು ತುಂಬಾ ಅನುಕೂಲಕಾರಿ.
* ಪೇಮೆಂಟ್ ಬ್ಯಾಂಕ್ನಲ್ಲಿ 5-6 ಉದ್ಯೋಗಿಗಳ ಸಂಬಳದ ಖಾತೆಗಳನ್ನು ವ್ಯವಹಾರಕ್ಕಾಗಿ ತೆರೆಯಬಹುದಾಗಿದೆ.
* ಪೇಮೆಂಟ್ ಬ್ಯಾಂಕ್ ಮೊಬೈಲ್ ಬ್ಯಾಂಕಿಂಗ್ ಸೌಲಭ್ಯವನ್ನೂ ಒದಗಿಸಲಿದೆ.
* ಇದು ತನ್ನದೇ ಆದ ಮಿತಿಗಳನ್ನು ಹೊಂದಿದ್ದು, ಸಾಮಾನ್ಯ ಬ್ಯಾಂಕ್'ಗಳಿಗಿಂತ ವಿಭಿನ್ನವಾಗಿದೆ.
ಜಿಯೋ ಪೇಮೆಂಟ್ ಬ್ಯಾಂಕ್ ಖಾತೆ ತೆರೆಯುವುದು ಹೀಗೆ?
* ಮೊದಲು, ಜಿಯೋ ಪೇಮೆಂಟ್ ಬ್ಯಾಂಕ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ನಿಮ್ಮ ಜಿಯೋ ಸಂಖ್ಯೆಗೆ ಸೈನ್ ಇನ್ ಮಾಡಿ.
* ನಿಮ್ಮ ಆಧಾರ್ ಸಂಖ್ಯೆಯನ್ನು ನಿರ್ದಿಷ್ಟ ಸ್ಥಳದಲ್ಲಿ ನಮೂದಿಸಿ, ನಿಮ್ಮ ಕಾರ್ಡ್ ಅನ್ನು ಲಿಂಕ್ ಮಾಡಿ.
* ಡೆಬಿಟ್ / ಎಟಿಎಂ ಕಾರ್ಡ್ ಅಗತ್ಯವಿದ್ದರೆ ವಿಳಾಸವನ್ನು ನವೀಕರಿಸಿ.
* ಪೇಮೆಂಟ್ ಬ್ಯಾಂಕ್ ಖಾತೆಗಾಗಿ ಗ್ರಾಹಕರ ಪರಿಶೀಲನೆ ಮತ್ತು ಹೆಬ್ಬೆರಳು ಗುರುತು ಪಡೆಯಲು ಗ್ರಾಹಕ ಕಾರ್ಯನಿರ್ವಾಹಕ ಅಧಿಕಾರಿಯು ನಿಮ್ಮ ಮನೆಗೇ ಬರುತ್ತಾರೆ.
* ಅಲ್ಲದೆ, ನೀವು ಜಿಯೋ ಅಧಿಕೃತ ಸೆಂಟರ್'ಗಳಿಗೆ ತೆರಳಿಯೂ ವೆರಿಫಿಕೇಶನ್ ಮಾಡಿಸಿಕೊಳ್ಳಬಹುದು.