ಬೆಂಗಳೂರು: ಹಾಲಿನ ಸಂಸ್ಕರಣೆ, ಕಚ್ಚಾ ಸಾಮಗ್ರಿಗಳು, ವಿದ್ಯುತ್, ಸಾಗಾಣಿಕಾ ವೆಚ್ಚ ಸೇರಿದಂತೆ ಬಹುತೇಕ ಎಲ್ಲ ವೆಚ್ಚಗಳು ಶೇ.30 ರಷ್ಟು ಹೆಚ್ಚಾಗಿವೆ. ಇದನ್ನು ಪರಿಗಣಿಸಿ ರೈತರಿಗೆ ಹೆಚ್ಚುವರಿ ದರ ನೀಡಲು ಅನುಕೂಲವಾಗುವ ನಿಟ್ಟಿನಲ್ಲಿ ಹಾಲಿನ ದರವನ್ನು ಹೆಚ್ಚಳ ಮಾಡುವಂತೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಕೆಎಂಎಫ್ ಅಧ್ಯಕ್ಷರು, ಪ್ರತಿ ಲೀಟರ್ ಹಾಲಿಗೆ ಕನಿಷ್ಠ 3 ರೂ.ಗಳನ್ನು ಹೆಚ್ಚಳ ಮಾಡುವಂತೆ ಸಿಎಂ ಬಸವರಾಜ್ ಬೊಮ್ಮಾಯಿಯವರಿಗೆ ಕೋರಿದ್ದಾರೆ. ಪ್ರಮುಖ ಹಾಲು ಉತ್ಪಾದನಾ ಸಂಸ್ಥೆಗಳಾದ ಅಮೂಲ್ ಸೇರಿದಂತೆ ದೇಶದ ವಿವಿಧ ಸಹಕಾರ ಮತ್ತು ಖಾಸಗಿ ಸಂಸ್ಥೆಗಳ ಹಾಲಿನ ಮಾರಾಟ ದರವನ್ನು ಈಗಾಗಲೇ ಹೆಚ್ಚಿಸಿವೆ. ನಂದಿನಿ ಹಾಲಿನ ಮಾರಾಟ ದರಕ್ಕೆ ತುಲನೆ ಮಾಡಿದಾಗ ಇತರೇ ಸಂಸ್ಥೆಗಳ ದರವು ಪ್ರತಿ ಲೀಟರ್ಗೆ 8 ರಿಂದ 10 ರೂ.ಗೆ ಹೆಚ್ಚಳವಿದೆ.
ಹಾಲಿನ ಮಾರಾಟ ದರವು ಕನಿಷ್ಠ ಪ್ರತಿ ಲೀಟರ್ಗೆ 3 ರೂ.ಹೆಚ್ಚಿಸಲು ಮುಖ್ಯಮಂತ್ರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು. ಹೆಚ್ಚಳ ಮಾಡಲಿರುವ 3 ರೂ.ಗಳಲ್ಲಿ ಕನಿಷ್ಠ 2 ರೂ.ವನ್ನು ಹಾಲು ಉತ್ಪಾದಕರಿಗೆ ಮತ್ತು ಉಳಿದ 1 ರೂ.ವನ್ನು ಹಾಲು ಉತ್ಪಾದಕರ ಸಹಕಾರಿ ಸಂಘ, ಹಾಲು ಒಕ್ಕೂಟ ಮತ್ತು ಹಾಲು ಮಾರಾಟಗಾರರಿಗೆ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ‘ಭ್ರಷ್ಟಾಚಾರ, ಸಾಕ್ಷಿ ನಾಶ, ಹಸ್ತಕ್ಷೇಪ ಮಾಡುವುದೆಲ್ಲ ‘ಹಸ್ತ’ ಗುರುತಿನ ಪಕ್ಷದವರ ಕಲೆ’
ಕೆಎಂಎಫ್ ಹಾಗೂ ರಾಜ್ಯದಲ್ಲಿರುವ ಎಲ್ಲಾ 14 ಹಾಲು ಒಕ್ಕೂಟಗಳ ಒಟ್ಟಾರೆ ವಹಿವಾಟು 2019-20ರಲ್ಲಿ 16,440.74 ಕೋಟಿ ರೂ. ಇದ್ದು, ಪ್ರಸಕ್ತ ಸಾಲಿಗೆ 19,732 ಕೋಟಿ ರೂ.ಗಳಿಗೆ ಹೆಚ್ಚಳವಾಗಿದೆ. 2 ವರ್ಷಗಳ ಅವಧಿಯಲ್ಲಿ ಶೇ.20ರಷ್ಟು ವಹಿವಾಟು ಹೆಚ್ಚಳವಾಗಿದ್ದು, 2022-23ನೇ ಸಾಲಿನಲ್ಲಿ ಒಟ್ಟಾರೆ 25 ಸಾವಿರ ಕೋಟಿ ರೂ. ತಲುಪುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಹಾಲು ಉತ್ಪಾದಕರ ಸಹಕಾರಿ ಸಂಘಗಳ ಕಟ್ಟಡಕ್ಕೆ ಕೆಎಂಎಫ್ನಿಂದ ನೀಡಲಾಗುತ್ತಿರುವ ಅನುದಾನವನ್ನು 3.50 ಲಕ್ಷ ರೂ.ಗಳಿಂದ 5 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ. 2020-21ನೇ ಸಾಲಿನಲ್ಲಿ 250 ಹಾಲು ಉತ್ಪಾದಕರ ಸಹಕಾರಿ ಸಂಘಗಳ ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ಸುಮಾರು 10.57ಕೋಟಿ ರೂ.ಅನುದಾನ ನೀಡಲಾಗಿದ್ದು, 2021-22ನೇ ಸಾಲಿನಲ್ಲಿ 15.15 ಕೋಟಿ ರೂ.ಗಳ ಅನುದಾನವನ್ನು ಇದಕ್ಕೆ ತೆಗೆದಿರಿಸಲಾಗಿದೆ ಎಂದು ಹೇಳಿದ್ದಾರೆ.
ಪಶು ಸಂಗೋಪನೆ ಕಾರ್ಯಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವುದಕ್ಕಾಗಿ ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ. 2019-20ರಲ್ಲಿ ವಾರ್ಷಿಕವಾಗಿ ಕೆಎಂಎಫ್ 40-50 ಕೋಟಿ ರೂ. ಈ ಯೋಜನೆಗಳಿಗೆ ನೀಡಲಾಗುತ್ತಿದ್ದು, ಮುಂದಿನ ಆಯವ್ಯಯದಲ್ಲಿ 50 ಕೋಟಿ ರೂ. ನೀಡುತ್ತಿರುವುದನ್ನು 80 ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ. ಮುಂದಿನ 5 ವರ್ಷಗಳಲ್ಲಿ ಸಮಗ್ರ ಮಾರುಕಟ್ಟೆ ಅಭಿವೃದ್ಧಿ ಯೋಜನೆ ರೂಪಿಸಿದ್ದು, 2026-27ನೇ ಸಾಲಿಗೆ 133.84 ಲಕ್ಷ ಲೀಟರ್ ಹಾಲು ಶೇಖರಿಸುವ ಗುರಿ ಹೊಂದಲಾಗಿದೆ. ಇದರಲ್ಲಿ 110 ಲಕ್ಷ ಲೀಟರ್ ಹಾಲು ಮತ್ತು ಹಾಲಿನ ಉತ್ಪನ್ನಗಳ ರೂಪದಲ್ಲಿ ಮತ್ತು ಉಳಿದ ಹಾಲನ್ನು ಹಾಲಿನ ಪುಡಿ ಪರಿವರ್ತನೆಗಾಗಿ ಮಾರಾಟ ಮಾಡುವ ಯೋಜನೆ ರೂಪಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Basanagouda Patil Yatnal : ಸಿಎಂ ಮುಂದೆ ದರಿದ್ರ ಭಾಗ್ಯಗಳು ಬೇಡ ಎಂದ ಶಾಸಕ ಯತ್ನಾಳ್!
ನೆರೆಯ ರಾಜ್ಯಗಳ ನಗರ ಪ್ರದೇಶಗಳಾದ ಚೆನ್ನೈ, ಮುಂಬೈ, ಗೋವಾ, ಹೈದರಾಬಾದ್, ಪುಣೆಗಳಲ್ಲಿ ಪ್ರತಿನಿತ್ಯ ನಂದಿನಿ 10 ಲಕ್ಷ ಲೀಟರ್ ಹಾಲನ್ನು ಮಾರಾಟ ಮಾಡಲಾಗುತ್ತಿದೆ. ಮಾರಾಟದ ಜಾಲವನ್ನು ಇನ್ನಷ್ಟು ವಿಸ್ತರಿಸುವ ಉದ್ಧೇಶದಿಂದ ಮಹಾರಾಷ್ಟ್ರದ ವಿದರ್ಭ ಪ್ರಾಂತದಲ್ಲಿ ಹಾಲಿನ ಮಾರಾಟ ಪ್ರಾರಂಭಿಸ ಲಾಗಿದೆ.
ಕೆಫೆ ಕಾಫೀ ಡೇ ಮಾದರಿಯಲ್ಲಿ ನಂದಿನಿಯ ವಿನೂತನ ನಂದಿನಿ ಮೂ ಕೆಫೆಗಳನ್ನು ಈಗಾಗಲೇ ರಾಜ್ಯಾದ್ಯಂತ ಸ್ಥಾಪಿಸಲಾಗಿದೆ. ಮುಂದಿನ ವರ್ಷದಿಂದ ಬೇರೆ ಬೇರೆ ನಗರಗಳಲ್ಲಿ 100ಕ್ಕೂ ಅಧಿಕ ವಿನೂತನ ನಂದಿನಿ ಕೆಫೆ ಮೂ ಸ್ಥಾಪಿಸುವ ಗುರಿ ಹೊಂದಲಾಗಿದೆ. ಅಮೇರಿಕಾ, ಆಸ್ಟ್ರೇಲಿಯಾ, ಅಪಘಾನಿಸ್ಥಾನ, ಭೂತಾನ್, ಸಿಂಗಾಪೂರ, ಬಹರೆನ್ ಮುಂತಾದ ವಿವಿಧ ದೇಶಗಳಿಗೆ 20 ಕೋಟಿಗೂ ಅಧಿಕ ಮೌಲ್ಯದ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡಲಾಗಿದೆ. 2022-23ರಲ್ಲಿ ಒಟ್ಟು 300 ಕೋಟಿ ರೂ. ಮೌಲ್ಯದ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ರಫ್ತು ಮಾಡುವ ಗುರಿ ಹೊಂದಲಾಗಿದೆ ಎಂದು ಹೇಳಿದ್ದಾರೆ.
ಕೆಎಂಎಫ್ನಿಂದ ಪೂರೈಸಲಾಗಿರುವ ಪಶು ಆಹಾರ ದರದಲ್ಲಿ ಪ್ರತಿ ಟನ್ಗೆ 500 ರಿಂದ 2000ರೂ.ಗಳವರೆಗೆ ವಿವಿಧ ಸಂದರ್ಭಗಳಲ್ಲಿ ರಿಯಾಯಿತಿ ನೀಡಲಾಗಿದೆ. ಕಳೆದ ಎರಡುವರೆ ವರ್ಷಗಳಲ್ಲಿ ಒಟ್ಟು 160 ಕೋಟಿ ರೂ.ಗಳಿಗಿಂತ ಹೆಚ್ಚಿನ ರಿಯಾಯಿತಿ ನೀಡಲಾಗಿದೆ. ಧಾರವಾಡ ಮತ್ತು ಗುಬ್ಬಿ ಪಶು ಆಹಾರ ಘಟಕಗಳಲ್ಲಿ ಆಹಾರ ಉತ್ಪಾದನಾ ಸಾಮರ್ಥ್ಯವನ್ನು ತಲಾ 300 ಟನ್ನಂತೆ ಒಟ್ಟು 600 ಟನ್ ಪ್ರತಿದಿನಕ್ಕೆ ಹೆಚ್ಚಿಸಲಾಗಿದೆ.
ಕೆ.ಆರ್ ಪೇಟೆ, ಮಂಡ್ಯ, ಅರಕಲಗೂಡು, ಹಾಸನ ಜಿಲ್ಲೆಗಳಲ್ಲಿ ಹೊಸ ಘಟಕಗಳನ್ನು ಸ್ಥಾಪಿಸಿ ಈಗಾಗಲೇ ಪ್ರತಿ ತಿಂಗಳಲ್ಲಿ 45 ಸಾವಿರ ಟನ್ ಪೂರೈಕೆಯಾಗುತ್ತಿದ್ದ ಪಶು ಆಹಾರ ಪ್ರಮಾಣವನ್ನು 65 ಸಾವಿರ ಟನ್ಗೆ ಹೆಚ್ಚಿಸಲಾಗಿದೆ. ಈ ಗುರಿಯನ್ನು ಮುಂದಿನ ವರ್ಷಕ್ಕೆ 75 ಸಾವಿರ ಟನ್ ಗುಣಮಟ್ಟದ ಪಶು ಆಹಾರ ಪೂರೈಕೆಗೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.