ಉತ್ತರ ಪ್ರದೇಶದ ವಾರಣಾಸಿಯ ಕಾಶಿ ವಿಶ್ವನಾಥ ದೇವಾಲಯಕ್ಕೆ ಜ್ಞಾನವಾಪಿ ಮಸೀದಿ ಹೊಂದಿಕೊಂಡಿದೆ. ಈ ಮಸೀದಿಯ ಗೋಡೆ ಮೇಲಿರುವ ಶೃಂಗಾರ ಗೌರಿ, ಗಣೇಶ, ಹನುಮಾನ್ ಮತ್ತು ನಂದಿ ವಿಗ್ರಹಗಳಿಗೆ ಪ್ರತಿನಿತ್ಯ ಪೂಜೆ ಮಾಡಲು ಅನುಮತಿ ನೀಡಬೇಕೆಂದು ಕೋರಿ ದೆಹಲಿ ಮೂಲದ ಐವರು ಮಹಿಳೆಯರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಈ ಪ್ರಕರಣ ಸದ್ಯ ಸುಪ್ರೀಂ ಕೋರ್ಟ್ ಕೈಯಲ್ಲಿದ್ದು, ಇಂದು ಭಾರೀ ಭದ್ರತೆಯ ಜೊತೆಗೆ ಮಸೀದಿ ಕಟ್ಟಡದ ವಿಡಿಯೋ ಚಿತ್ರೀಕರಣ ಮತ್ತು ಸಮೀಕ್ಷೆ ನಡೆಸಲಾಗಿದೆ. ಮೊದಲ ದಿನದ ಸಮೀಕ್ಷೆ ಮುಗಿಸಲಾಗಿದ್ದು, ನಾಳೆಯೂ ಪರಿಶೀಲನೆ ಮುಂದುವರೆಯಲಿದೆ.
ಇದನ್ನು ಓದಿ: Actress suicide: ಗಂಡನಿಂದ ಕಿರುಕುಳ ಆರೋಪ, ಯುವ ನಟಿ ನಿಗೂಢ ಸಾವು..!
ರಾಖಿ ಸಿಂಗ್, ಲಕ್ಷ್ಮಿ ದೇವಿ, ಸೀತಾ ಸಾಹು ಮತ್ತು ಇತರ ಇಬ್ಬರು ಮಹಿಳೆಯರು ಮನವಿಯನ್ನು ಸಲ್ಲಿಸಿದ್ದರು. ಈ ಅರ್ಜಿಯ ಮೇರೆಗೆ ನ್ಯಾಯಾಧೀಶ ದಿವಾಕರ್ ಅವರು ಮಸೀದಿಯ ವಿಡಿಯೋಗ್ರಫಿ ಮತ್ತು ಸಮೀಕ್ಷೆಗೆ ಆದೇಶಿಸಿದ್ದಾರೆ. ಇನ್ನು ಈ ಸರ್ವೇ ಕಾರ್ಯದಲ್ಲಿ ಅಧಿಕೃತ ವ್ಯಕ್ತಿಗಳು, ಹಿಂದೂ-ಮುಸಲ್ಮಾನ ಧರ್ಮದ ಕಡೆಯವರು, ಅವರ ವಕೀಲರು, ಕಮಿಷನರ್‌ಗಳು ಮತ್ತು ವಿಡಿಯೋಗ್ರಾಫರ್‌ಗಳು ಭಾಗಿಯಾಗಿದ್ದಾರೆ ಎಂದು ವಾರಣಾಸಿಯ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೌಶಲ್ ರಾಜ್ ಶರ್ಮಾ ತಿಳಿಸಿದ್ದಾರೆ.
ವಿವಾದಿತ ಜ್ಞಾನವಾಪಿ ಮಸೀದಿ ಆವರಣದಲ್ಲಿ ಶೃಂಗಾರ ಗೌರಿ ದೇವಸ್ಥಾನ ಸೇರಿದಂತೆ ಗಣೇಶ, ಹನುಮಾನ್ ಮತ್ತು ನಂದಿ ವಿಗ್ರಹಗಳಿವೆ. ಈ ವಿಗ್ರಹಗಳಿಗೆ ಪ್ರತೀ ದಿನ ಪೂಜೆ ಸಲ್ಲಿಸಲು ನಮಗೆ ಅವಕಾಶ ನೀಡಬೇಕು ಎಂದು ಕೋರಿ ಐವರು ಮಹಿಳೆಯರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಈ ಮನವಿಗೆ ಒಪ್ಪಿಗೆ ಸೂಚಿಸಿ ವಾರಣಾಸಿ ಸಿವಿಲ್ ಕೋರ್ಟ್ ಆದೇಶ ಹೊರಡಿಸಿತ್ತು. ಇನ್ನೊಂದೆಡೆ ಕಳೆದ ದಿನ ಅಂದರೆ ಮೇ 13ರಂದು ಮಸೀದಿ ಸರ್ವೆ ಕಾರ್ಯಕ್ಕೆ ಸಂಬಂಧಿಸಿದಂತೆ ಸಭೆಯನ್ನು ನಡೆಸಿ, ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಮನವಿ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಜ್ಞಾನವಾಪಿ ಮಸೀದಿಯ ನೆಲಮಾಳಿಗೆಯಲ್ಲಿರುವ ಮೂರು ಕೊಠಡಿಗಳು ಮುಸಲ್ಮಾನರ ಪಾಲಿಗೆ ಸೇರಿದ್ದು, ಬೀಗ ಹಾಕಲಾಗಿತ್ತು. ಸದ್ಯ ಈ ಬಾಗಿಲುಗಳನ್ನು ತೆರೆದ ಮುಸಲ್ಮಾನ ಮುಖಂಡರು ಸಮೀಕ್ಷೆ ನಡೆಸಲು ಅನುವು ಮಾಡಿಕೊಟ್ಟಿದ್ದಾರೆ. ಇನ್ನು ನಾಲ್ಕನೇ ಕೊಠಡಿಯು ಹಿಂದೂಗಳ ಪಾಲಿಗೆ ಸೇರಿದ್ದಾಗಿದ್ದು, ಅಲ್ಲಿಯೂ ಅಡೆತಡೆಯಿಲ್ಲದೆ ಸಮೀಕ್ಷೆ ನಡೆಸಲಾಗಿದೆ.
ಪ್ರಕರಣದ ಹಿನ್ನೆಲೆ: ಉತ್ತರಪ್ರದೇಶದ ಕಾಶಿ ವಿಶ್ವನಾಥ ದೇವಾಲಯಕ್ಕೆ ಹೊಂದಿಕೊಂಡಿರುವ ಜ್ಞಾನವಾಪಿ ಮಸೀದಿಯೊಳಗೆ ಹಿಂದೂ ದೇವತೆಗಳ ಅಸ್ತಿತ್ವವಿದೆ ಎಂದು ಹೇಳಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ವಾರಣಾಸಿಯ ಸಿವಿಲ್ ಕೋರ್ಟ್ ಪರಿಶೀಲನೆ ನಡೆಸುವಂತೆ ಆದೇಶಿಸಿತ್ತು. ಅಷ್ಟೇ ಅಲ್ಲದೆ ಸಾಕ್ಷಿಗಳನ್ನು ಖಚಿತವಾಗಿ ನೋಡಲು ವಿಡಿಯೋ ಚಿತ್ರೀಕರಣ ಮಾಡುವಂತೆ ನಿರ್ದೇಶಿಸಿತ್ತು. ಆದರೆ ಮಸೀದಿಯ ಸಮಿತಿಯು ವಿಡಿಯೋ ಚಿತ್ರೀಕರಣಕ್ಕೆ ವಿರೋಧ ವ್ಯಕ್ತಪಡಿಸಿತ್ತು.
ಈ ವಿಚಾರ ತಿಳಿಯುತ್ತಿದ್ದಂತೆ ಐವರು ಮಹಿಳೆಯರು ಜ್ಞಾನವಾಪಿ ಮಸೀದಿ ಆವರಣದಲ್ಲಿರುವ ಶೃಂಗಾರ ಗೌರಿ ದೇವಸ್ಥಾನ ಸೇರಿದಂತೆ ಗಣೇಶ, ಹನುಮಾನ್ ಮತ್ತು ನಂದಿ ವಿಗ್ರಹಗಳಿಗೆ ಪ್ರತೀ ದಿನ ಪೂಜೆ ಸಲ್ಲಿಸಲು ಅವಕಾಶ ನೀಡಬೇಕೆಂದು ನ್ಯಾಯಾಲಯದ ಮೆಟ್ಟಿಲೇರಿದರು. ಅರ್ಜಿಯನ್ನು ಪರಿಶೀಲನೆ ನಡೆಸಿದ ವಾರಣಾಸಿ ಸಿವಿಲ್ ಕೋರ್ಟ್ ಸಮೀಕ್ಷೆ ನಡೆಸಲು ಆದೇಶ ನೀಡಿದೆ.
ಇದನ್ನು ಓದಿ: Mundka Fire Incident : ದೆಹಲಿಯಲ್ಲಿ ಭಾರೀ ಬೆಂಕಿ ಅವಘಡ : 26 ಜನ ಸಜೀವದಹನ!
ಸದ್ಯ ಜ್ಞಾನವಾಪಿ ಮಸೀದಿ ಸಮಿತಿಯಿಂದ ಸಮೀಕ್ಷೆ ವಿರೋಧಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾದ ಚಂದ್ರಚೂಡ್ ಅವರ ಪೀಠವು ಇಂದು ವಿಚಾರಣೆ ನಡೆಸಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.