ನವದೆಹಲಿ: ಆರಂಭದಿಂದಲೂ ಮೋದಿ ಸರಕಾರವನ್ನು ಟೀಕಿಸುತ್ತಲೇ ಬಂದಿದ್ದ ಶಿವಸೇನಾ, ಅವಿಶ್ವಾಸ ನಿರ್ಣಯ ಮಂಡನೆಗೆ ಕೆಲವೇ ಗಂಟೆಗಳ ಮೊದಲು ಮೋದಿ ಸರಕಾರಕ್ಕೆ ಬೆಂಬಲ ನೀಡುವುದಾಗಿ ಹೇಳಿದೆ. ಇನ್ನು, ಅವಿಶ್ವಾಸ ನಿರ್ಣಯದ ವೇಳೆ ಎಐಎಡಿಎಂಕೆ, ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಸರ್ಕಾರದ ಪರ ಮತ ಹಾಕಲು ನಿರ್ಧರಿಸಿದ್ದರೆ, ಬಿಜು ಜನತಾ ದಳ (ಬಿಜೆಡಿ) ಪ್ರಕ್ರಿಯೆ ವೇಳೆ ಗೈರಾಗುವ ಸಾಧ್ಯತೆ ಇದೆ.
ಮತ್ತೊಂದೆಡೆ, ಉದ್ಧವ್ ಠಾಕ್ರೆಯ ನಿಕಟ ಸಹವರ್ತಿ ಹರ್ಷಲ್ ಪ್ರಧಾನ್ ಅವರು, ಶುಕ್ರವಾರ ದೆಹಲಿಯಲ್ಲಿ ಎಲ್ಲಾ ಸಂಸದರೂ ಉಪಸ್ಥಿತರಿರುವಂತೆ ಉದ್ಭವ್ ಠಾಕ್ರೆ ಸೂಚನೆ ನೀಡಿರುವುದಾಗಿ ಹೇಳಿದ್ದಾರೆ. ಅವಿಶ್ವಾಸ ನಿರ್ಣಯ ಸಂಬಂಧ ಪಕ್ಷದ ನಿರ್ಧಾರ ತಿಳಿಸಲು ಎಲ್ಲಾ ಸಂಸದರಿಗೂ ಉಪಸ್ಥಿತರಿರುವಂತೆ ಹೇಳಿದ್ದಾರಲ್ಲದೆ, ಸಂಸತ್ತಿನಲ್ಲಿ ದಿನವಿಡೀ ಇರುವಂತೆ ಆದೇಶಿಸಿದ್ದಾರೆ ಎಂದಿದ್ದಾರೆ. ಬೆಳಗ್ಗೆ ಸರಕಾರದ ಪರ ಇರುವಂತೆ ಜಾರಿಗೊಳಿಸಲಾಗಿದ್ದ ವಿಪ್ "ಎಡವಟ್ಟು" ಎಂದಿದ್ದಾರೆ.
ಆದರೆ, ಶಿವಸೇನೆಯು ಬಿಜೆಪಿಗೆ ಬೆಂಬಲ ನೀಡುವುದು ಬಹುತೇಕ ಖಚಿತವಾಗಿದೆ. ಗುರುವಾರ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಉದ್ಧವ್ ಠಾಕ್ರೆಯೊಂದಿಗೆ ದೂರವಾಣಿ ಮೂಲಕ ಸಂಭಾಷಣೆ ನಡೆಸಿದ್ದು, ಅವಿಶ್ವಾಸ ನಿರ್ಣಯ ಸಂದರ್ಭದಲ್ಲಿ ಬಿಜೆಪಿಗೆ ಬೆಂಬಲ ನೀಡುವಂತೆ ಕೋರಿದ್ದಾರೆ ಎನ್ನಲಾಗಿದೆ.