ಬೆಂಗಳೂರು: ಸಾಕಷ್ಟು ವಿರೋಧಗಳ ನಡುವೆ ನಿನ್ನೆ ಸರ್ಕಾರ 'ಟಿಪ್ಪು ಜಯಂತಿ' ನಡೆಸಿದೆ. ಈ ಸಮಯದಲ್ಲಿ ಮಾತನಾಡಿದ ಸಿದ್ದರಾಮಯ್ಯ ಯಾರು ಏನೇ ವಿರೋಧ ಮಾಡಿದರೂ ಟಿಪ್ಪು ಜಯಂತಿ ಆಚರಣೆ ಬಗ್ಗೆ ನಮಗೆ ಸ್ಪಷ್ಟತೆ ಇದೆ ಎಂದು ತಿಳಿಸಿದ್ದಾರೆ. ನಾವು ವೋಟ್ ಗಾಗಿ ಟಿಪ್ಪು ಜಯಂತಿ ಮಾಡುತ್ತಿಲ್ಲ. ಕರ್ನಾಟಕ ಸರ್ಕಾರ 26 ಜಯಂತಿಗಳನ್ನು ಆಚರಿಸುತ್ತಿದೆ, ಅದರಲ್ಲಿ ಟಿಪ್ಪು ಜಯಂತಿ ಸಹ ಒಂದು ಹೇಳಿದರು.
ಶುಕ್ರವಾರ ಸರ್ಕಾರದ ವತಿಯಿಂದ ನಡೆದ ಟಿಪ್ಪು ಜಯಂತಿ ಆಚರಣೆಯ ಸಂದರ್ಭದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ- ಟಿಪ್ಪು ಒಬ್ಬ ದೇಶಪ್ರೇಮಿ, ಜ್ಯಾತ್ಯಾತೀತ, ಪ್ರಗತಿಪರ, ಸರಳವ್ಯಕ್ತಿ. ಬೇರೆಯವರಂತೆ ವೈಭವದಿಂದ ಮೆರೆಯಾಗಿದ್ದ. ಟಿಪ್ಪು ಹಿಂದೂ ವಿರೋಧಿಯಾಗಿದ್ದಾರೆ ತನ್ನ ಅರಮನೆಯ ಸುತ್ತ ಇದ್ದ ದೇವಾಲಯಗಳನ್ನು ಏಕೆ ನಿರ್ಣಾಮ ಮಾಡಲಿಲ್ಲ. ಶೃಂಗೇರಿ, ನಂಜನಗೂಡು, ಮೇಲುಕೋಟೆ ದೇವಾಲಯಗಳ ಜೀರ್ಣೋದ್ದಾರಕ್ಕೆ ಸಹಾಯ ಮಾಡಿದ ಆತ ಹೇಗೆ ಹಿಂದೂ ವಿರೋಧಿ ಆಗುತ್ತಾನೆ ಎಂದು ಪ್ರಶ್ನಿಸಿದರು?
ಬ್ರಿಟಿಷರ ವಿರುದ್ಧ ಮೂರು ಮೈಸೂರು ಯುದ್ಧ ಮಾಡಿದವನು ಟಿಪ್ಪು. ಬ್ರಿಟಿಷರ ವಿರುದ್ಧ ಮೂರು ಯುದ್ಧ ಮಾಡಿದ ಯಾವ ರಾಜನೂ ಇಲ್ಲ. ಟಿಪ್ಪು ಮತಾಂದ ಎನ್ನುತ್ತಾರೆ, ಯುದ್ಧಗಳನ್ನ ಮಾಡುವಾಗ ಕೊಲೆ ಆಗಿರಬಹುದು. ಆದರೆ ಟಿಪ್ಪು ಎಂದೂ ಕೊಮುವಾದಿಯಾಗಿರಲಿಲ್ಲ. ಆತ ಒಬ್ಬ ಜಾತ್ಯತೀತ ರಾಜನಾಗಿದ್ಧ.
ಟಿಪ್ಪು ಆಸ್ಥಾನದಲ್ಲಿ ಇದ್ದವರೆಲ್ಲರೂ ಹಿಂದೂಗಳೇ. ದಿವಾನ್ ಪೂರ್ಣಯ್ಯ ಸೇರಿದಂತೆ ಹಲವರು ದಿವಾನರು ಟಿಪ್ಪು ಆಸ್ಥಾನದಲ್ಲಿದ್ದರು. ಟಿಪ್ಪು ಕೋಮುವಾದಿ ಆಗಿದ್ದರೆ ಹಿಂದೂಗಳನ್ನು ತನ್ನ ಆಸ್ಥಾನದಲ್ಲಿ ಏಕೆ ನೇಮಕ ಮಾಡಿಕೊಳ್ಳುತ್ತಿದ್ದ? ಬಿಜೆಪಿ ಅವರಿಗೆ ಇಷ್ಟೂ ಅರ್ಥ ಆಗುವುದಿಲ್ಲವೇ ಎಂದು ಕುಟುಕಿದರು.
ಯಾಕೆ ಸತ್ಯ ಮುಚ್ಚಿಟ್ಟು ದ್ವೇಷ ಹುಟ್ಟು ಹಾಕ್ತೀರಿ. ಇದು ಬಸವ, ಕುವೆಂಪು ಜನಿಸಿದ ನಾಡು ಎಂದ ಸಿದ್ದರಾಮಯ್ಯ ಕರ್ನಾಟಕದಲ್ಲಿ ಬಿಜೆಪಿ ಆಟ ನಡೆಯುವುದಿಲ್ಲ ಎಂದು ಹೇಳಿದರು.
ಮೂರನೇ ಬಾರಿಗೆ ನಮ್ಮ ಸರ್ಕಾರ ಟಿಪ್ಪು ಜಯಂತಿಯನ್ನು ಆಚರಿಸುತ್ತಿದೆ. ಮೊದಲ ಬಾರಿಗೆ ಮಡಿಕೇರಿ ಹೊರತು ಪಡಿಸಿ ಬೇರೆ ಯಾವ ಜಿಲ್ಲೆಗಳಲ್ಲೂ ಇದಕ್ಕೆ ವಿರೋಧ ವ್ಯಕ್ತವಾಗಿರಲಿಲ್ಲ. ಎರಡನೇ ಬಾರಿಗೆ ಶಾಂತಿಯುತವಾಗಿ ನಡೆದ ಈ ಜಯಂತಿ, ಚುನಾವಣೆ ಹೊಸ್ತಿಲಿನಲ್ಲಿರುವ ಈ ಸಮಯದಲ್ಲಿ ಬಿಜೆಪಿ ನಾಯಕರು ಇದನ್ನು ರಾಜಕೀಯವಾಗಿ ಬಳಸಿಕೊಳ್ಳಲು ಯತ್ನಿಸುತ್ತಿದ್ದಾರೆ.
ಈ ಹಿಂದೆ ಕೆಜೆಪಿ ಪಕ್ಷ ಸ್ಥಾಪಿಸಿದ್ದಾಗ ಟಿಪ್ಪುವಿನ ವೇಷ ಹಾಕಿ 'ಅಲ್ಲಾ' ಮೇಲಾಣೆ ನಾನು ಎಂದೂ ಬಿಜೆಪಿ ಸೇರಲ್ಲ ಎಂದಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈಗ ಟಿಪ್ಪು ಜಯಂತಿ ವಿರೋಧವಾಗಿ ಮಾತನಾಡುತ್ತಿದ್ದಾರೆ. ಟಿಪ್ಪು ಬಗ್ಗೆ ಪುಸ್ತಕಕ್ಕೆ ಮುನ್ನುಡಿ ಬರೆದವರು ಜಗದೀಶ್ ಶೆಟ್ಟರ್ ಸಹ ಅವರ ಹಾದಿಯನ್ನೇ ಹಿಡಿದಿದ್ದಾರೆ ಎಂದು ಬಿಜೆಪಿಯ ನಾಯಕರಿಗೆ ಚಾಟಿ ಬೀಸುವುದರ ಜೊತೆಗೆ ಚುನಾವಣೆ ಬರ್ತಿದೆ ಎಂದು ಟಿಪ್ಪುವನ್ನು ತೆಗಳುತ್ತಿರುವುದು ನ್ಯಾಯಾನಾ ಎಂದು ಬಿಜೆಪಿಯವರನ್ನು ಪ್ರಶ್ನಿಸಿದ್ದಾರೆ.
ಟಿಪ್ಪು ಜಯಂತಿ ಮಾಡೋಕೆ ಬಿಡೊಲ್ಲ ಎಂದು ಬಿಜೆಪಿಯವರು ಹೇಳಿದ್ದರು. ಈಗ ಯಾವ ಗಲಾಟೆ ಇಲ್ಲದೆ ರಾಜ್ಯದ ಎಲ್ಲೆಡೆ ಟಿಪ್ಪು ಜಯಂತಿ ಆಚರಣೆ ನಡೆದಿದೆ. ನಾನು ಕಾನೂನು ಸುವ್ಯವಸ್ಥೆ ಹದಗೆಡಿಸುವವರಿಗೆ ಎಚ್ಚರಿಕೆ ಕೊಟ್ಟೆ. ಬಿಜೆಪಿಯವರು ಕಾರ್ಯಕ್ರಮಕ್ಕೆ ಬರೊಲ್ಲ ಅಂದ್ರು, ನಾನು ಯಾರು ಬರೊಲ್ವೋ ಅವರ ಹೆಸರು ಹಾಕಬೇಡಿ ಎಂದು ಅಧಿಕಾರಿಗಳಿಗೆ ಸೂಚಿಸಿದೆ ಎಂದು ಇದೇ ಸಂದರ್ಭದಲ್ಲಿ ಸಿಎಂ ತಿಳಿಸಿದರು.