ಲಕ್ನೋ: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಮೂವರು ಪೈಲಟ್ಗಳು ದಿಢೀರ್ ರಾಜೀನಾಮೆ ನೀಡಿದ್ದಾರೆ. ಮಾಹಿತಿ ಪ್ರಕಾರ, ಸಿವಿಲ್ ಏವಿಯೇಷನ್ ಡಿಪಾರ್ಟ್ಮೆಂಟ್ ಪೈಲಟ್ ಗಳ ವೇತನ ಹೆಚ್ಚಳದ ಬೇಡಿಕೆಯನ್ನು ಪೂರೈಸದ ಹಿನ್ನೆಲೆಯಲ್ಲಿ ಪೈಲಟ್ ಗಳು ರಾಜೀನಾಮೆ ನೀಡಿದ್ದಾರೆ. ಯುಪಿ ಸರ್ಕಾರವು ಇವರ ರಾಜೀನಾಮೆಗಳನ್ನು ಷರತ್ತುಬದ್ಧವಾಗಿ ಸ್ವೀಕರಿಸಿದೆ. ಇವರಲ್ಲಿ ಇಬ್ಬರು ಪೈಲಟ್ ಗಳಲ್ಲಿ ಒಬ್ಬರು ಸೆಪ್ಟೆಂಬರ್ ನಲ್ಲಿ ಮತ್ತು ಇನ್ನೊಬ್ಬರು ಅಕ್ಟೋಬರ್ ನಲ್ಲಿ ರಿಲೀವ್ ಆಗುವರು.
ಉತ್ತರ ಪ್ರದೇಶ ಸರ್ಕಾರ ಆ ಪೈಲಟ್ ಗಳ ಸ್ಥಾನಕ್ಕೆ ಇಬ್ಬರು ನೂತನ ಪೈಲಟ್ ಗಳನ್ನು ನಿಯೋಜಿಸಿದೆ. ಮುಂದಿನ 15 ದಿನಗಳಲ್ಲಿ ಪೈಲಟ್ ಗಳು ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಯುಪಿ ಫ್ಲೀಟ್ ನಲ್ಲಿ ಒಟ್ಟು 10 ಪೈಲಟ್ ಗಳು ಫಿಕ್ಸೆಡ್ ವಿಂಗ್ ಏರ್ಕ್ರಾಫ್ಟ್ ನಲ್ಲಿ ವಿಮಾನ ಹಾರಾಟ ನಡೆಸಲು ಅನುಮತಿಸಲಾಗಿದೆ. ಪ್ರಸ್ತುತ ಫ್ಲೀಟ್ನಲ್ಲಿ 8 ಪೈಲಟ್ ಗಳು ಕಾರ್ಯನಿರ್ವಹಿಸುತ್ತಿದ್ದಾರೆ.
ಇಲ್ಲಿ ಪೈಲಟ್ ಗಳನ್ನು ಮೂರು ವರ್ಷಗಳವರೆಗೆ ಒಪ್ಪಂದದ ಮೇರೆಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಇವರಲ್ಲಿ ಪ್ರವೀಣ್ ಕಿಶೋರ್, ಜಿಪಿಎಸ್ ವಾಲಿಯಾ ಮತ್ತು ಕಮಲೇಶ್ವರ್ ಸಿಂಗ್ ಎಂಬ ಮೂವರು ಪೈಲಟ್ ಗಳು ಮೊದಲಿನಿಂದಲೂ ವೇತನ ಹೆಚ್ಚಳಕ್ಕಾಗಿ ಬೇಡಿಕೆ ಇಟ್ಟಿದ್ದರು. ಮೂಲಗಳಿಂದ ದೊರೆತಿರುವ ಮಾಹಿತಿ ಪ್ರಕಾರ, ಪ್ರಸ್ತುತ ಅವರು ಪ್ರತಿ ತಿಂಗಳು 5.20 ಲಕ್ಷ ಸಂಬಳ ಮತ್ತು ಒಂದು ಲಕ್ಷ ರೂಪಾಯಿಗಳ ರಾತ್ರಿ(Night duty) ಭತ್ಯೆಯನ್ನು ಪಡೆಯುತ್ತಾರೆ. ಅಲ್ಲದೆ ಅವರ ಮೇಲೆ ಕೆಲಸದ ಒತ್ತಡವೂ ಇದೆ. ಇಂತಹ ಪರಿಸ್ಥಿತಿಯಲ್ಲಿ, ಈ ಮೂವರು ದಿಢೀರ್ ರಾಜೀನಾಮೆ ನೀಡಿದ್ದಾರೆ.
ಮೂಲಗಳ ಪ್ರಕಾರ, ಪೈಲಟ್ ಗಳು ರಾಜೀನಾಮೆ ನೀಡಲು ಇನ್ನೂ ಅನೇಕ ಕಾರಣಗಳಿವೆ. ಆದರೆ ಯಾರೂ ಈ ವಿಷಯದ ಬಗ್ಗೆ ಮಾತನಾಡಲು ಸಿದ್ದರಿಲ್ಲ ಎಂದು ತಿಳಿದುಬಂದಿದೆ.