ಮೈಸೂರು: ಅರಮನೆಯ ಅಂಬಾರಿ ನಮ್ಮ ವೈಯಕ್ತಿಕ ಆಸ್ತಿ. ಹಿಂದೆಯೂ ಅದು ನಮ್ಮ ಆಸ್ತಿಯೇ ಆಗಿತ್ತು. ಈಗಲೂ ನಮ್ಮದೆ, ಮುಂದೆಯೂ ಅದು ನಮ್ಮ ಆಸ್ತಿಯೇ ಆಗಿರುತ್ತದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಇತ್ತೀಚೆಗಷ್ಟೇ ರಾಜವಂಶಸ್ಥೆ ಡಾ.ಪ್ರಮೋದಾದೇವಿ ಒಡೆಯರ್ ಮಾಧ್ಯಮಗಳಿಗೆ ತಿಳಿಸಿದ್ದರು.
ರಾಜವಂಶಸ್ಥೆ ಡಾ.ಪ್ರಮೋದಾದೇವಿ ಒಡೆಯರ್ ಅವರ ಈ ಹೇಳಿಕೆ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ನನಗೆ ಅದರ ಬಗ್ಗೆ ಹೆಚ್ಚಾಗಿ ಮಾಹಿತಿ ಇಲ್ಲ. ಎಲ್ಲಾ ದಾಖಲೆಗಳೂ ಅವರ ಬಳಿಯೇ ಇದೆ, ಅವರನ್ನೇ ಕೇಳಬೇಕು ಎಂದು ಹೇಳಿಕೆ ನೀಡಿದ್ದಾರೆ.
ಪ್ರಮೋದದೇವಿ ಒಡೆಯರ್ ದತ್ತು ಪುತ್ರರಾಗಿರುವ ಯದುವೀರ್ ಪ್ರಮೋದಾದೇವಿಯವರ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವ ಬದಲು, ಅದರ ಬಗ್ಗೆ ನನಗೆ ಹೆಚ್ಚಿನ ಮಾಹಿತಿಯಿಲ್ಲ ಎಂದು ಹೇಳಿದ್ದನ್ನು ಕೇಳಿ ಅಲ್ಲಿದ್ದವರಿಗೆ ಶಾಕ್ ಆಯಿತು.
ಈ ಬಗ್ಗೆ ಭಾನುವಾರ ಮೈಸೂರಿನಲ್ಲಿ ಮಾತನಾಡಿದ್ದ ಪ್ರಮೋದಾದೇವಿ ಒಡೆಯರ್, ಅಂಬಾರಿ ವಿಚಾರಕ್ಕೆ ವ್ಯಕ್ತಿಯೊಬ್ಬರು ಕೇಸ್ ಹಾಕಿಕೊಂಡಿದ್ದರು. ಅವರ ನಡವಳಿಕೆಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುವ ಅಗತ್ಯ ಇಲ್ಲ. ಹಿಂದೆಯೇ ನ್ಯಾಯಾಲಯ ಅಂಬಾರಿ ನಮ್ಮ ಆಸ್ತಿ ಎಂದು ಘೋಷಣೆ ಮಾಡಿದೆ. ಅಂಬಾರಿಗೆ ಪಡೆಯುವ ಗೌರವ ಧನದ ಬಗ್ಗೆ ಚಕಾರ ಎತ್ತುವುದು ಸರಿಯಲ್ಲ ಎಂದಿದ್ದರು. ಅಲ್ಲದೆ, ಅರಮನೆಯ ಅಂಬಾರಿ ನಮ್ಮ ವೈಯಕ್ತಿಕ ಆಸ್ತಿ. ಹಿಂದೆಯೂ ಅದು ನಮ್ಮ ಆಸ್ತಿಯೇ ಆಗಿತ್ತು. ಈಗಲೂ ನಮ್ಮದೆ, ಮುಂದೆಯೂ ಅದು ನಮ್ಮ ಆಸ್ತಿಯೇ ಆಗಿರುತ್ತದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ರಾಜವಂಶಸ್ಥೆ ಡಾ.ಪ್ರಮೋದಾದೇವಿ ಒಡೆಯರ್ ಸ್ಪಷ್ಟನೆ ಸಹ ನೀಡಿದ್ದರು.