ನವದೆಹಲಿ: ಮುಂಬರುವ 2019 ರ ಲೋಕಸಭೆ ಚುನಾವಣೆಗೆ ಕಾರ್ಯತಂತ್ರ ರೂಪಿಸುವ ನಿಟ್ಟಿನಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಕಾಂಗ್ರೆಸ್ ಪಕ್ಷವು 10 ರಾಜ್ಯಗಳಲ್ಲಿ ಸಂಭವನೀಯ ಮೈತ್ರಿ ಪಾಲುದಾರರನ್ನು ಹುಡುಕುವತ್ತ ಚರ್ಚೆ ನಡೆಸಿದೆ.
ಬಿಹಾರ, ಉತ್ತರಪ್ರದೇಶ, ಕರ್ನಾಟಕ, ಮಹಾರಾಷ್ಟ್ರ, ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಜಾರ್ಖಂಡ್ ನ 10 ರಾಜ್ಯಗಳಲ್ಲಿ ಮೈತ್ರಿಕೂಟದ ಸಾಧ್ಯತೆಗಳನ್ನು ಈ ಸಭೆಯು ಪರಿಶೀಲಿಸುತ್ತಿದೆ. ಪಕ್ಷದ ಮುಖ್ಯಸ್ಥ ರಾಹುಲ್ ಗಾಂಧಿ ಅವರ ಅನುಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಹಿರಿಯ ಕಾಂಗ್ರೆಸ್ ಸದಸ್ಯರಾದ ಗುಲಾಮ್ ನಬಿ ಆಜಾದ್, ಅಹ್ಮದ್ ಪಟೇಲ್ ಮತ್ತು ಅಶೋಕ್ ಗೆಹ್ಲೋಟ್ ಪಾಲ್ಗೊಂಡಿದ್ದರು.
ಸಭೆಯನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ.ಐದು ರಾಜ್ಯಗಳ ರಾಜಕೀಯ ಪ್ರತಿನಿಧಿಗಳು ಬೆಳಿಗ್ಗೆ ಭೇಟಿಯಾಗುತ್ತಾರೆ,ಉಳಿದ ಐದು ರಾಜ್ಯಗಳ ನಾಯಕರು ಸಂಜೆ 5 ಗಂಟೆಗೆ ಭೇಟಿಯಾಗಲಿದ್ದಾರೆ.ದಿನಪೂರ್ತಿ ನಡೆಯುವ ಸಭೆಯಲ್ಲಿ, ಪ್ರತಿ ರಾಜ್ಯವನ್ನು ಪ್ರತಿನಿಧಿಸುವ ನಾಯಕರರಿಗೆ ಆಯಾ ರಾಜ್ಯದ ಅಂಕಿ ಅಂಶಗಳನ್ನು ಪ್ರಸ್ತುತಪಡಿಸಲು 30 ನಿಮಿಷಗಳನ್ನು ನಿಗದಿಪಡಿಸಲಾಗಿದೆ.
ಇದೇ ವೇಳೆ ಮೈತ್ರಿಕೂಟದ ಬಗ್ಗೆ ಅಭಿಪ್ರಾಯ ಹಂಚಿಕೊಳ್ಳಲು ಪ್ರಾದೇಶಿಕ ಮುಖಂಡರಿಗೂ ಆಹ್ವಾನ ನೀಡಲಾಗಿದೆ.ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷ (ಬಿಎಸ್ಪಿ)ವು ಅಜಿತ್ ಜೋಗಿ ಅವರ ಜನತಾ ಕಾಂಗ್ರೆಸ್ ಜೊತೆಗೆ ಛತ್ತೀಸ್ ಘಡ್ ದಲ್ಲಿ ಜತೆ ಮೈತ್ರಿ ಮಾಡಿಕೊಂಡ ನಂತರ ಈ ಸಭೆಯು ನಡೆಯುತ್ತಿದೆ.
ಏತನ್ಮಧ್ಯೆ, ಮುಂಬರುವ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಮೈತ್ರಿ ಮಾಡಿಕೊಳ್ಳಲು ಎಂಟು ರಾಜಕೀಯ ಪಕ್ಷಗಳು ಸಪ್ಟೆಂಬರ್ 30 ರಂದು ಸಭೆ ಸೇರಲಿವೆ ಎಂದು ಲೋಕತಾಂತ್ರಿಕ ಜನತಾ ದಳದ ಸಲಹೆಗಾರ ಗೋವಿಂದ ಯಾದವ್ ಭಾನುವಾರ ತಿಳಿಸಿದ್ದಾರೆ.