Puneeth Rajkumar: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇನ್ನು ನೆನಪು ಮಾತ್ರ

ಬೆಳಗ್ಗೆ 4 ಗಂಟೆಯಿಂದಲೇ ಬೆಂಗಳೂರಿನ ಕಂಠೀರವ ಸ್ಟೇಡಿಯಂನಿಂದ ನಟ ಪುನೀತ್​ ರಾಜ್​ಕಮಾರ್ ಅವರ​ ಪಾರ್ಥಿವ ಶರೀರದ ಮೆರವಣಿಗೆ ಮಾಡಲಾಯಿತು.

ಬದುಕಿ ಬೆಳಗಬೇಕಿದ್ದ ವಯಸ್ಸಿನಲ್ಲಿಯೇ ಹಠಾತ್ ನಿಧನ ಹೊಂದಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇನ್ನು ನೆನಪು ಮಾತ್ರ. ಇಡೀ ಕರುನಾಡನ್ನೇ ದುಃಖದ ಕಡಲಿನಲ್ಲಿ ಮುಳುಗಿಸಿದ ‘ದೊಡ್ಮನೆ ಹುಡುಗ’ನ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು(ಅ.31) ಕಂಠೀರವ ಸ್ಟುಡಿಯೋದಲ್ಲಿ ನೆರವೇರಿಸಲಾಯಿತು. ಚಿತ್ರರಂಗದ ಗಣ್ಯರು, ರಾಜಕೀಯ ನಾಯಕರು ಹಾಗೂ ಲಕ್ಷಾಂತರ ಅಭಿಮಾನಿಗಳು ‘ಅಪ್ಪು’ವಿಗೆ ಕಣ್ಣೀರ ವಿದಾಯ ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

ಬೆಳಗ್ಗೆ 4 ಗಂಟೆಯಿಂದಲೇ ಬೆಂಗಳೂರಿನ ಕಂಠೀರವ ಸ್ಟೇಡಿಯಂನಿಂದ ನಟ ಪುನೀತ್​ ರಾಜ್​ಕಮಾರ್ ಅವರ​ ಪಾರ್ಥಿವ ಶರೀರದ ಮೆರವಣಿಗೆ ಮಾಡಲಾಯಿತು. ಕಂಠೀರವ ಸ್ಟುಡಿಯೋ ತಲುಪುವವರೆಗೂ ‘ಅಪ್ಪು’ ಅಭಿಮಾನಿಗಳು ಕಣ್ಣೀರಿಡುತ್ತಿರುವ ದೃಶ್ಯ ಮನಕಲುಕುವಂತಿತ್ತು. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಪುನೀತ್​ ಹಣೆಗೆ ಮುತ್ತಿಟ್ಟು ಕಂಬನಿ ಮಿಡಿದರು.

2 /5

ಹಠಾತ್ ಹೃದಯ ಸ್ತಂಭನದಿಂದ ಅಕಾಲಿಕ ನಿಧನ ಹೊಂದಿದ ಜನಪ್ರಿಯ ನಟ ಪುನೀತ್ ರಾಜ್ ಕುಮಾರ್ ಅವರು ತಂದೆ, ವರನಟ ಡಾ.ರಾಜ್ ಕುಮಾರ್ ಮತ್ತು ತಾಯಿ ಪಾರ್ವತಮ್ಮನವರ ಸಮಾಧಿ ಪಕ್ಕದಲ್ಲಿಯೇ ಇದೀಗ ಚಿರಸ್ಥಾಯಿಯಾಗಿದ್ದಾರೆ. ತಮ್ಮ ಚಿತ್ರಗಳ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿದ್ದ ‘ಅಪ್ಪು’ವಿನ ಪಾರ್ಥಿವ ಶರೀರಕ್ಕೆ ರಾಷ್ಟ್ರಧ್ವಜ ಹೊದಿಸಿ ಗೌರವ ಸಲ್ಲಿಸಲಾಯಿತು.

3 /5

ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್​ ಅವರ ಅಂತ್ಯಸಂಸ್ಕಾರವು ಈಡಿಗ ಸಂಪ್ರದಾಯದಂತೆ ನೆರವೇರಿತು. ಕರುನಾಡಿನ ಯುವರತ್ನ ಭೂತಾಯಿ ಮಡಿಲು ಸೇರಿದ್ದಾರೆ. ‘ದೊಡ್ಮನೆ ಹುಡುಗ’ನ ಅಂತ್ಯಕ್ರಿಯೆ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಪುನೀತ್​ ಪತ್ನಿ ಅಶ್ವಿನಿ, ಮಕ್ಕಳಾದ ಧೃತಿ ಹಾಗೂ ವಂದಿತಾ, ಸಹೋದರರಾದ ಶಿವರಾಜ್​ಕುಮಾರ್​, ರಾಘವೇಂದ್ರ ರಾಜ್​ಕುಮಾರ್​ ಕಣ್ಣೀರು ಹಾಕುತ್ತಿರುವ ದೃಶ್ಯ ಮನ ಕಲಕುವಂತಿತ್ತು. ಚಿತ್ರರಂಗ ಹಾಗೂ ರಾಜಕೀಯದ ಅನೇಕ ಗಣ್ಯರು ಭಾಗಿಯಾಗಿದ್ದರು. ಕಂಠೀರವ ಸ್ಟುಡಿಯೋ ಆವರಣದ ಒಳಗೆ ಕುಟುಂಬದವರಿಗೆ ಮತ್ತು ಗಣ್ಯರಿಗೆ ಮಾತ್ರ ಪ್ರವೇಶ ನೀಡಲಾಗಿತ್ತು.

4 /5

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವ​ಕುಮಾರ್​, ಮುನಿರತ್ನ, ನಿರ್ಮಾಪಕ ರಾಕ್​​ಲೈಕ್​ ವೆಂಕಟೇಶ್​, ನಟರಾದ ವಿ.ರವಿಚಂದ್ರನ್ ಕಿಚ್ಚ ಸುದೀಪ್​, ಯಶ್ ​ಮುಂತಾದವರು ಸ್ಥಳದಲ್ಲಿದ್ದು, ಪುನೀತ್​ಗೆ ಅಂತಿಮ ವಿದಾಯ ಹೇಳಿದರು. ವರನಟ ಡಾ.ರಾಜ್ ಕುಮಾರ್ ಸಮಾಧಿಯಿಂದ 125 ಅಡಿ ಹಾಗೂ ಪಾರ್ವತಮ್ಮನವರ ಸಮಾಧಿಯಿಂದ 45 ಅಡಿ ಅಂತರದಲ್ಲಿ ಪುನೀತ್ ಅವರ ಅಂತ್ಯಕ್ರಿಯೆ ಮಾಡಲಾಗಿದೆ. ಈ ವೇಳೆ ಅಪಾರ ಸಂಖ್ಯೆಯ ಅಭಿಮಾನಿಗಳು ಕಂಠೀರವ ಸ್ಟುಡಿಯೋ ಮುಂಭಾಗ ಜಮಾಯಿಸಿದ್ದರು.

5 /5

ಸಕಲ ಸರ್ಕಾರಿ ಗೌರವಗಳೊಂದಿಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಂತ್ಯಕ್ರಿಯೆ ನೆರವೇರಿತು. ಮೊದಲು 3 ಸುತ್ತು ಕುಶಾಲು ತೋಪು ಸಿಡಿಸಲಾಯಿತು. ಬಳಿಕ ಪೊಲೀಸ್ ಬ್ಯಾಂಡ್ ನಿಂದ ಗೌರವ ಸಲ್ಲಿಸಲಾಯಿತು. ಬಳಿಕ ನಟನಿಗೆ ಅಂತಿಮ ಪೂಜಾ ವಿಧಿ-ವಿಧಾನಗಳನ್ನು ಮಾಡಲಾಯಿತು. ಬಳಿಕ ಪುನೀತ್ ಪಾರ್ಥಿವ ಶರೀರಕ್ಕೆ ರಾಷ್ಟ್ರಧ್ವಜ ಹೊದಿಸಿ ಗೌರವ ಸಲ್ಲಿಸಿ, ಅದನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಪುನೀತ್ ಗೆ ಅಂತಿಮ ನಮನ ಸಲ್ಲಿಸಿ ಅಂತ್ಯಕ್ರಿಯೆ ನೆರವೇರಿಸಲಾಯಿತು.