Pro Kabaddi League 2022: ಯು ಮುಂಬಾ, ಜೈಪುರಕ್ಕೆ ಒಲಿದ ವಿಜಯಲಕ್ಷ್ಮಿ: ಗುಜರಾತ್ ಗೂ ಜಯದ ಮಾಲೆ

ದಿನದ ಮೊದಲ ಪಂದ್ಯದಲ್ಲಿ ತಮಿಳು ತಲೈವಾಸ್‌ ವಿರುದ್ಧ ಯು ಮುಂಬಾ ತಂಡ 39-32 ಅಂತರದಲ್ಲಿ, ಹರಿಯಾಣ ಸ್ಟೀಲರ್ಸ್‌ ವಿರುದ್ಧ ಜೈಪುರ ಪಿಂಕ್‌ ಪ್ಯಾಂಥರ್ಸ್‌ 44-31 ಅಂತರದಲ್ಲಿ ಹಾಗೂ ಪುಣೇರಿ ಪಲ್ಟನ್‌ ವಿರುದ್ಧ ಗುಜರಾತ್‌ ಜೈಂಟ್ಸ್‌ 47-37 ಅಂತರದಲ್ಲಿ ಜಯ ಗಳಿಸಿದವು.

Written by - VISHWANATH HARIHARA | Edited by - Bhavishya Shetty | Last Updated : Oct 15, 2022, 12:12 AM IST
    • ಯು ಮುಂಬಾ, ಜೈಪುರ ಪಿಂಕ್‌ ಪ್ಯಾಂಥರ್ಸ್‌ ಹಾಗೂ ಗುಜರಾತ್‌ ಜೈಂಟ್ಸ್‌ ತಂಡಕ್ಕೆ ಜಯ
    • ವಿವೋ ಪ್ರೋ ಕಬಡ್ಡಿ ಲೀಗ್‌ನ ಶುಕ್ರವಾರದ ಮೂರು ಪಂದ್ಯಗಳಲ್ಲಿ ಗೆಲುವು
    • ಶ್ರೀಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯ
Pro Kabaddi League 2022: ಯು ಮುಂಬಾ, ಜೈಪುರಕ್ಕೆ ಒಲಿದ ವಿಜಯಲಕ್ಷ್ಮಿ: ಗುಜರಾತ್ ಗೂ ಜಯದ ಮಾಲೆ  title=
Pro Kabaddi League

ಬೆಂಗಳೂರು: ಶ್ರೀಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿವೋ ಪ್ರೋ ಕಬಡ್ಡಿ ಲೀಗ್‌ನ ಶುಕ್ರವಾರದ ಮೂರು ಪಂದ್ಯಗಳಲ್ಲಿ ಯು ಮುಂಬಾ, ಜೈಪುರ ಪಿಂಕ್‌ ಪ್ಯಾಂಥರ್ಸ್‌ ಹಾಗೂ ಗುಜರಾತ್‌ ಜೈಂಟ್ಸ್‌ ತಂಡಗಳು ಜಯ ಗಳಿಸಿ ಮುನ್ನಡೆ ಕಂಡಿವೆ.

ದಿನದ ಮೊದಲ ಪಂದ್ಯದಲ್ಲಿ ತಮಿಳು ತಲೈವಾಸ್‌ ವಿರುದ್ಧ ಯು ಮುಂಬಾ ತಂಡ 39-32 ಅಂತರದಲ್ಲಿ, ಹರಿಯಾಣ ಸ್ಟೀಲರ್ಸ್‌ ವಿರುದ್ಧ ಜೈಪುರ ಪಿಂಕ್‌ ಪ್ಯಾಂಥರ್ಸ್‌ 44-31 ಅಂತರದಲ್ಲಿ ಹಾಗೂ ಪುಣೇರಿ ಪಲ್ಟನ್‌ ವಿರುದ್ಧ ಗುಜರಾತ್‌ ಜೈಂಟ್ಸ್‌ 47-37 ಅಂತರದಲ್ಲಿ ಜಯ ಗಳಿಸಿದವು.

ಇದನ್ನೂ ಓದಿ: 15 ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ತೆರಳಲಿದೆ ಟೀಂ ಇಂಡಿಯಾ! ಬಿಸಿಸಿಐ ನೀಡಿದೆಯೇ ಗ್ರೀನ್ ಸಿಗ್ನಲ್?

ದಿನದ ಮೂರನೇ ಪಂದ್ಯದಲ್ಲಿ ಗುಜರಾತ್‌ ಜೈಂಟ್ಸ್‌ ಪರ ರಾಕೇಶ್‌ 15 ರೈಡಿಂಗ್‌ ಅಂಕಗಳನ್ನು ಗಳಿಸಿ ಜಯದ ರೂವಾರಿ ಎನಿಸಿದರು. ಸೌರವ್‌ ಗುಲಿಯಾ ಟ್ಯಾಕಲ್‌ನಲ್ಲಿ 5 ಅಂಕಗಳನ್ನು ಗಳಿಸಿ ಅಮೂಲ್ಯ ಜಯಕ್ಕೆ ನೆರವಾದರು. ಪುಣೇರಿ ಪಲ್ಟನ್‌ ಪರ ಅಸ್ಲಾಮ್‌ ಇನಾಂದಾರ್‌ ರೈಡಿಂಗ್‌ನಲ್ಲಿ 19 ಅಂಕಗಳನ್ನು ಗಳಿಸಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲಾಗಲಿಲ್ಲ.

ಕುತೂಹಲದ ಪ್ರಥಮಾರ್ಧ:

ರಾಕೇಶ್‌ ಹಾಗೂ ನಾಯಕ ಚಂದ್ರನ್‌ ರಂಜಿತ್‌  ಅವರ ಉತ್ತಮ ರೈಡಿಂಗ್‌ ಪ್ರದರ್ಶನದ ನೆರವಿನಿಂದ ಗುಜರಾತ್‌ ಜಯಂಟ್ಸ್‌ ತಂಡ ಪುಣೇರಿ ಪಲ್ಟನ್‌ ವಿರುದ್ಧದ ಪಂದ್ಯದಲ್ಲಿ 19-17 ಅಂತರದಲ್ಲಿ ಮುನ್ನಡೆ ಕಂಡಿದೆ. ರಾಕೇಶ್‌ 6 ಅಂಕಗಳನ್ನು ಗಳಿಸಿದರೆ, ಚಂದ್ರನ್‌ 4 ಅಂಕಗಳನ್ನು ಗಳಿಸಿ ತಂಡಕ್ಕೆ ನೆರವಾದರು. ಫಜಲ್‌ ಅತ್ರಚಲಿ ಅವರ ನಾಯಕತ್ವದಲ್ಲಿ ಅಂಗಣಕ್ಕಿಳಿದ ಪುಣೇರಿ ಪಲ್ಟನ್‌ ಆಲ್ರೌಂಡ್‌ ಪ್ರದರ್ಶನ ತೋರಿ ದ್ವಿತಿಯಾರ್ಧದಲ್ಲಿ ಉತ್ತಮ ಪೈಪೋಟಿ ನೀಡುವ ಲಕ್ಷಣ ತೋರಿದೆ. ಅಸ್ಲಾಮ್‌ ಇನಾಂದಾರ್‌ 8 ಅಂಕಗಳನ್ನು ಗಳಿಸಿ ತಂಡಕ್ಕೆ ಆಧಾರವಾದರು. ಮೋಹಿತ್‌ ಗೊಯತ್‌ 4 ಅಂಕಗಳನ್ನು ಗಳಿಸಿ ದಿಟ್ಟ ಹೋರಾಟ ನೀಡುವಲ್ಲಿ ನೆರವಾದರು. ಗೌರವ್‌ ಖಾತ್ರಿ ಹಾಗೂ ಫಜಲ್‌ ಟ್ಯಾಕಲ್‌ನಲ್ಲಿ ತಲಾ 2 ಅಂಕಗಳನ್ನು ಗಳಿಸಿದರು.

ಜೈಪುರ ಪಿಂಕ್‌ ಪ್ಯಾಂಥರ್ಸ್‌ಗೆ ಭರ್ಜರಿ ಜಯ:

ಅರ್ಜುನ್‌ ದೇಶ್ವಾಲ್‌ ಅವರು ರೈಡಿಂಗ್‌ನಲ್ಲಿ 14 ಅಂಕಗಳನ್ನು ಗಳಿಸುವ ಮೂಲಕ ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡ ವಿವೋ ಪ್ರೋ ಕಬಡ್ಡಿ ಲೀಗ್‌ನಲ್ಲಿ ತನ್ನ ಮೂರನೇ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್‌ ವಿರುದ್ಧ 44-31 ಅಂಕಗಳ ಅಂತರದಲ್ಲಿ ಜಯ ಗಳಿಸಿದೆ. ಟ್ಯಾಕಲ್‌ನಲ್ಲಿ ನಾಯಕ ಸುನೀಲ್‌ ಕುಮಾರ್‌ 8 ಅಂಕಗಳನ್ನು ಗಳಿಸಿ ಈ ಋತುವಿನಲ್ಲಿ ಟ್ಯಾಕಲ್‌ನಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಾಧನೆ ಮಾಡಿದರು.

ಸತತ ಎರಡು ಜಯ ಗಳಿಸಿದ ಆತ್ಮವಿಶ್ವಾಸದಲ್ಲಿದ್ದ ಹರಿಯಾಣ ಸ್ಟೀಲರ್ಸ್‌ ಋತುವಿನ ಮೊದಲ ಸೋಲನುಭವಿಸಿತು. ಆದರೆ ತಂಡದ ಪರ ಮೀತು ರೈಡಿಂಗ್‌ನಲ್ಲಿ 16 ಅಂಕಗಳನ್ನು ಗಳಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು.

ಜೈಪುರ ಮುನ್ನಡೆ: ಅರ್ಜುನ್‌ ದೆಶ್ವಲಾ (8) ಹಾಗೂ ನಾಯಕ ಸುನಿಲ್‌ ಕುಮಾರ್‌ (4) ಅನುಕ್ರಮಾಗಿ ಅದ್ಭುತ ರೈಡಿಂಗ್‌ ಹಾಗೂ ಟ್ಯಾಕಲ್‌ ಪ್ರದರ್ಶನದಿಂದ ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡ ಹರಿಯಾಣ ಸ್ಟೀಲರ್ಸ್‌ ವಿರುದ್ಧ 20-12 ಅಂತರದಲ್ಲಿ ಮುನ್ನಡೆ ಕಂಡಿತ್ತು. ಒಂದು ಹಂತದಲ್ಲಿ  ಹರಿಯಾಣ ಸ್ಟೀಲರ್ಸ್‌ 3-9 ರಿಂದ ಹಿನ್ನಡೆ ಕಂಡಿತ್ತು. ಆದರೆ ದಿಟ್ಟ ಹೋರಾಟ ನೀಡಿ 9-9 ರಲ್ಲಿ ಸಮಬಲ ಸಾಧಿಸಿತು. ಕೊನೆಯ ಕ್ಷಣದಲ್ಲಿ ದಿಟ್ಟ ಹೋರಾಟ ನೀಡಿದ ಪಿಂಕ್‌ ಪ್ಯಾಂಥರ್ಸ್‌ ಎದುರಾಳಿಯನ್ನು ಆಲೌಟ್‌ ಮಾಡುವ ಮೂಲಕ ಪಂದ್ಯದ ಮೇಲೆ ಪ್ರಭುತ್ವ ಸಾಧಿಸಿತು.

ಯು ಮುಂಬಾಕ್ಕೆ ಜಯ: ಗುಮಾನ್‌ ಸಿಂಗ್‌ (12) ಮತ್ತು ಆಶೀಶ್‌ (10) ಅವರ ಆಕರ್ಷಕ ಸೂಪರ್‌ ಟೆನ್‌ ರೈಡಿಂಗ್‌ ಅಂಕಗಳ ನೆರವಿನಿಂದ ಯು ಮುಂಬಾ ತಂಡ ತಮಿಳು ತಲೈವಾಸ್‌ ವಿರುದ್ಧದ ಪಂದ್ಯದಲ್ಲಿ 39-32 ಅಂಕಗಳ ಅಂತರದಲ್ಲಿ ಜಯ ಗಳಿಸಿದೆ.

ನಾಯಕನಿಲ್ಲದೆ ಕಂಗೆಟ್ಟಿದ್ದ ತಮಿಳು ತಲೈವಾಸ್‌ ಪರ ನರೇಂದರ್‌ 15 ರೈಡಿಂಗ್‌ ಅಂಕಗಳನ್ನು ಗಳಿಸಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲಾಗಲಿಲ್ಲ. ಪ್ರಥಮಾರ್ಧದಲ್ಲಿ ಕೇಲವ 1 ಅಂಕದಿಂದ ಮುನ್ನಡೆ ಕಂಡಿದ್ದ ತಮಿಳು ತಲೈವಾಸ್‌ ದ್ವಿತಿಯಾರ್ಧಲ್ಲಿ ಆ ಮುನ್ನಡೆಯನ್ನು ಕಾಯ್ದುಕೊಳ್ಳುವಲ್ಲಿ ವಿಫಲವಾಯಿತು.

ತಮಿಳು ತಲೈವಾಸ್‌ ಮುನ್ನಡೆ: ನರೇಂದರ್‌ ಸೂಪರ್‌ 10 ನೆರವಿನಿಂದ ತಮಿಳು ತಲೈವಾಸ್‌ ತಂಡ ಯು ಮುಂಬಾ ವಿರುದ್ಧ 16-15 ಅಂಕಗಳ ಅಂತರದಲ್ಲಿ ಮುನ್ನಡೆ ಕಂಡಿದೆ. ನಾಯಕ ಪವನ್‌ ಶೆರಾವತ್‌ ಇಲ್ಲದೆ ಕಂಗೆಟ್ಟಿರುವ ತಮಿಳು ತಲೈವಾಸ್‌ ಆಡಿದ ಎರಡು ಪಂದ್ಯಗಳಲ್ಲಿ ಒಂದು ಸೋಲನುಭವಿಸಿದರೆ, ಇನ್ನೊಂದು ಪಂದ್ಯದಲ್ಲಿ ಸಮಬಲ ಸಾಧಿಸಿತ್ತು.

ಇದನ್ನೂ ಓದಿ: ಮಹಿಳಾ ವಿಶ್ವಕಪ್ ಗೆ ಕ್ಷಣಗಣನೆ ಶುರು: ಭಾರತದ ‘ಕನಸಿನ ಪಂದ್ಯ’ ವೀಕ್ಷಿಸಲು ಹೀಗೆ ಮಾಡಿ

ಯು ಮುಂಬಾ ತಂಡ ಆರಂಭದಲ್ಲಿ ಬೃಹತ್‌ ಹಿನ್ನಡೆ ಕಂಡಿತ್ತು.  ಆದರೆ ಗುಮಾನ್‌ ಸಿಂಗ್‌, ಜೈ ಭಗವಾನ್‌, ಹಾಗೂ ಆಶೀಶ್‌ ಉತ್ತಮ ಪ್ರದರ್ಶನ ತೋರಿ ತಂಡ ತಕ್ಕ ತಿರುಗೇಟು ನೀಡುವಲ್ಲಿ ಪ್ರಮುಖ ಪಾತ್ರವಹಿಸಿದರು. ಆದರೆ ಒಂದು ಅಂಕದಿಂದ ಪ್ರಥಮಾರ್ಧದಲ್ಲಿ ಹಿನ್ನಡೆ ಕಂಡಿತು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News