ಮ್ಯಾಂಚೆಸ್ಟರ್: ಐಸಿಸಿ ವಿಶ್ವಕಪ್ನಲ್ಲಿ ಮಂಗಳವಾರ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಭಾರತ ಎದುರಿಸುತ್ತಿದ್ದು, ಟೀಂ ಇಂಡಿಯಾ ಪಂದ್ಯದ ಒತ್ತಡವನ್ನು ನಿಭಾಯಿಸಲು ಸಮರ್ಥವಾಗಿದೆ ಎಂದು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಿರಾಟ್ ಕೊಹ್ಲಿ, ಟೀಂ ಇಂಡಿಯಾ ನಾಳೆ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಕಿವೀಸ್ ವಿರುದ್ಧದ ಪಂದ್ಯದ ಬಗ್ಗೆ ನಾವು ಹೆಚ್ಚು ಮಾತನಾಡಿದರೆ, ನಾವು ಮಾನಸಿಕವಾಗಿ ಒತ್ತಡಕ್ಕೆ ಸಿಲುಕುವ ಪರಿಸ್ಥಿತಿ ಎದುರಾಗಬಹುದು. ಆದಾಗ್ಯೂ ನಮ್ಮ ಆಟಗಾರರು ಅದನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದರು.
Virat Kohli on #CWC19 semis tomorrow: Decision making will be crucial. Both teams are experienced enough to have played these games. New Zealand was in the finals last time&they know how to play knock out games. They have had a wonderful World Cup again so they're a quality side pic.twitter.com/6ACLkFRReT
— ANI (@ANI) July 8, 2019
ನ್ಯೂಜಿಲೆಂಡ್‌ನ ಯಾವುದೇ ದಾಖಲೆ ಅಥವಾ ಇತ್ತೀಚಿನ ಪ್ರದರ್ಶನದ ಹೊರತಾಗಿಯೂ, Knock out ಪಂದ್ಯವನ್ನು ಹೇಗೆ ಆಡಬೇಕೆಂದು ನ್ಯೂಜಿಲೆಂಡ್ ತಂಡಕ್ಕೆ ತಿಳಿದಿದೆ. ಎರಡೂ ತಂಡಗಳೂ ಬಲಿಷ್ಠವಾಗಿವೆ. ವಿಶ್ವ ಮಟ್ಟದಲ್ಲಿ ಸಾಕಷ್ಟು ಪಂದ್ಯಗಳನ್ನು ಆಡಿವೆ. ಎದುರಾಳಿ ತಂಡ ಬಲಿಷ್ಠವಾಗಿದ್ದು, ನಾಯಕ ಕೇನ್ ವಿಲಿಯಮ್ಸನ್ ಹಾಗೂ ಆರಂಭಿಕ ಆಟಗಾರ ರಾಸ್ ಟೇಲರ್ ಉತ್ತಮ ಬ್ಯಾಟ್ಸ್ಮನ್ಗಳಾಗಿ ಹೆಚ್ಚಿನ ರನ್ ಗಳಿಸಬಲ್ಲ ಆಟಗಾರರಾಗಿದ್ದಾರೆ. ಈ ಪಂದ್ಯದಲ್ಲಿ ಎಲ್ಲಾ ರೀತಿಯ ಒತ್ತಡಗಳನ್ನೂ ಮೆಟ್ಟಿ ಆಡುವ ತಂಡ ಗೆಲುವು ಸಾಧಿಸಲಿದೆ ಎಂದು ಹೇಳಿದರು.
ಮಂಗಳವಾರ ಮ್ಯಾಂಚೆಸ್ಟರ್ನ ಎಮಿರೈಟ್ಸ್ ಓಲ್ಡ್ ಟ್ರಾಫೋರ್ಡ್ ಕ್ರೀಡಾಂಗಣದಲ್ಲಿ ಭಾರತೀಯ ಕಾಲಮಾನ ಮಧ್ಯಾಹ್ನ 3 ಗಂಟೆಗೆ ಆರಂಭವಾಗಲಿರುವ ಮೊದಲ ಸೆಮಿಫೈನಲ್ಸ್ ಪಂದ್ಯದ ಟಾಸ್ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಿರಾಟ್, ಟಾಸ್ ಬಗ್ಗೆ ನಮಗೆ ಚಿಂತೆಯಿಲ್ಲ. ಟಾಸ್ ಗೆಲ್ಲಲಿ ಅಥವಾ ಸೋಲಲಿ ನಾವು ಆಟ ಆಡಲು ಸಿದ್ಧರಿದ್ದೇವೆ. ಆದರೆ ಸೆಮಿಫೈನಲ್ಸ್ ಪಂದ್ಯದ ಟಾಸ್ ಸ್ವಲ್ಪ ವಿಭಿನ್ನವಾಗಿರಲಿದೆ ಎಂದು ಹೇಳಿದರು.
ಕಳೆದ ಕೆಲವು ದಿನಗಳಿಂದ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ವಿಶ್ವಕಪ್ ನಂತರ ನಿವೃತ್ತಿಯಾಗುತ್ತಾರೆ ಎಂಬ ಉಹಾಪೋಹಗಳ ಬಗ್ಗೆ ಮಾತನಾಡಿದ ಕೊಹ್ಲಿ, ಧೋನಿ ಒಬ್ಬ ಶ್ರೇಷ್ಠ ಕ್ರಿಕೆಟಿಗ. ಅವರು ವಿಶ್ವಕಪ್ನಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ. ಅವರು ಕ್ರಿಕೆಟ್ ಜೀವನದ ವಿದಾಯಕ್ಕೆ ಸಾಕಷ್ಟು ಸಮಯವಿದೆ ಎಂದರು. ಇದೇ ವೇಳೆ ವಿಶ್ವಕಪ್ ಪಂದ್ಯಗಳಲ್ಲಿ 5 ಶತಕ ಬಾರಿಸಿದ ರೋಹಿತ್ ಶರ್ಮಾ ಸಾಧನೆಯನ್ನು ಕೊಹ್ಲಿ ಶ್ಲಾಘಿಸಿದರು.