Israel-Hamas War : ಆಧುನಿಕ ಇಸ್ರೇಲ್ ಇತಿಹಾಸದಲ್ಲಿ ಅತ್ಯಂತ ಕರಾಳ ದಿನ ಸಿಮ್‌ಚಟ್ ಟೋರಾ ಹಬ್ಬದ ದಿನವಾದ ಅಕ್ಟೋಬರ್ 7, 2023ರಂದು ಜರುಗಿತು. ಯೋಮ್ ಕಿಪ್ಪುರ್ ಯುದ್ಧ ನಡೆದು ಸರಿಯಾಗಿ ಐವತ್ತು ವರ್ಷ ಒಂದು ದಿನ ಕಳೆದ ಬಳಿಕ, ಅಕ್ಟೋಬರ್ 7ರಂದು ಹಮಾಸ್ ಉಗ್ರಗಾಮಿಗಳು ಇಸ್ರೇಲ್ ಮೇಲೆ ವಾಯು, ಭೂ ಮತ್ತು ಸಮುದ್ರದ ಮೂಲಕ ದಾಳಿ ನಡೆಸಿದರು. ಅರ್ಧ ಶತಮಾನ ಹಿಂದಿನ ಯೋಮ್ ಕಿಪ್ಪುರ್ ಯುದ್ಧವೂ ಇಸ್ರೇಲಿಗರಲ್ಲಿ ಮಾನಸಿಕ ಸಂಕಟವನ್ನು ತಂದೊಡ್ಡಿತ್ತು.
ಶಸ್ತ್ರಸಜ್ಜಿತ ಪ್ಯಾಲೆಸ್ತೀನಿ ಉಗ್ರರ ಗುಂಪುಗಳು ಇಸ್ರೇಲ್ - ಗಾಜಾ ಪಟ್ಟಿಯ ಗಡಿಯನ್ನು ಉಲ್ಲಂಘಿಸಿ, ಇಸ್ರೇಲ್ ಒಳಗೆ ಪ್ರವೇಶಿಸಿ, ಗಡಿಯಂಚಿನ ಪಟ್ಟಣಗಳಲ್ಲಿ ದಾಳಿ ಮಾಡಿ, ಹಲವು ಮಿಲಿಟರಿ ನೆಲೆಗಳ ಮೇಲೆ ಆಕ್ರಮಣ ನಡೆಸಿದರು. ಇಸ್ರೇಲ್ ಮೇಲೆ ಬೆಳಗಿನ 6 ಗಂಟೆಗೆ ರಾಕೆಟ್ ದಾಳಿ ಆರಂಭವಾಯಿತು. ಇತ್ತೀಚಿನ ವರದಿಗಳ ಪ್ರಕಾರ, ಉಗ್ರರು 1,400ಕ್ಕೂ ಹೆಚ್ಚು ಇಸ್ರೇಲಿಗರನ್ನು ಹತ್ಯೆಗೈದಿದ್ದು, ನಾಗರಿಕರು ಮತ್ತು ಸೈನಿಕರು ಸೇರಿದಂತೆ 150ಕ್ಕೂ ಹೆಚ್ಚು ಜನರನ್ನು ಒತ್ತೆಯಾಳುಗಳಾಗಿ ಎಳೆದೊಯ್ದಿದ್ದಾರೆ.
ಇದನ್ನೂ ಓದಿ: ಮಧ್ಯ ಪೂರ್ವದಲ್ಲಿ ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸಲಿದೆಯೇ ಹೆಜ್ಬೊಲ್ಲಾದ ಮಿಲಿಟರಿ ಸಾಮರ್ಥ್ಯ?
ಆಪರೇಶನ್ ಅಲ್ ಅಕ್ಸಾ ಫ್ಲಡ್ : ಇಸ್ರೇಲಿನ ಮಿಲಿಟರಿ ಮತ್ತು ರಾಜಕೀಯ ಅಧಿಕಾರಿಗಳು ಹಮಾಸ್ ಕೈಗೊಂಡ ಅಲ್ ಅಕ್ಸಾ ಫ್ಲಡ್ ಕಾರ್ಯಾಚರಣೆಗೆ ತತ್ತರಿಸಿ ಹೋಗಿತ್ತು. ಇದಕ್ಕೆ ಕ್ಷಿಪ್ರ ಪ್ರತಿಕ್ರಿಯೆ ನೀಡಲೂ ಇಸ್ರೇಲ್‌ಗೆ ಕಷ್ಟಕರವಾಗಿತ್ತು. ಇದಾದ ಬಳಿಕ, ಇಸ್ರೇಲಿ ಪಡೆಗಳಿಗೆ ಹಮಾಸ್ ಆಕ್ರಮಿತ ಬೀರಿ ಕಿಬ್ಬಟ್ಜ್ ಪ್ರದೇಶವನ್ನು ಪ್ರವೇಶಿಸಲು ದಾಳಿ ನಡೆದು ಕೆಲ ದಿನಗಳೇ ಕಳೆದು ಹೋಗಿದ್ದವು. ಇಸ್ರೇಲಿನ ಅಸಂಖ್ಯಾತ ಭಯೋತ್ಪಾದಕ ವಿರೋಧಿ ಕಾರ್ಯಾಚರಣೆಗಳಿಗೆ ನೆಲೆಯಾಗಿದ್ದ ವೆಸ್ಟ್ ಬ್ಯಾಂಕ್ ಪ್ರದೇಶವೂ ಸಹ ಕಳವಳ ತಂದೊಡ್ಡಿತ್ತು. ಇಸ್ರೇಲ್ ರಾಜಕೀಯ ನಾಯಕತ್ವವೂ ಸಹ ಆಂತರಿಕ ಹಾಗೂ ವಿದೇಶೀ ನೀತಿಗಳ ಕುರಿತು ಹೆಚ್ಚು ತಲೆಕೆಡಿಸಿಕೊಂಡಿದ್ದು, ಇಸ್ರೇಲ್ ಅವುಗಳನ್ನು ಹೆಚ್ಚು ಮುಖ್ಯ ಎಂದು ಭಾವಿಸಿದೆ.
ಹಮಾಸ್ ದಾಳಿಗೆ ಪ್ರತಿಯಾಗಿ, ಇಸ್ರೇಲ್ ಸಹ 'ಐರನ್ ಸ್ವಾರ್ಡ್ಸ್' ಎಂಬ ಹೆಸರಿನ ಕಾರ್ಯಾಚರಣೆಯನ್ನು ಆರಂಭಿಸಿತು. ಹಲವು ವಿಚಾರಗಳಲ್ಲಿ ಈ ಬಾರಿಯ ಇಸ್ರೇಲಿ ಪ್ರತಿಕ್ರಿಯೆ ಹಿಂದಿನ ಪ್ರತಿಕ್ರಿಯೆಗಳಿಂದ ಅತ್ಯಂತ ತೀಕ್ಷ್ಣವಾಗಿತ್ತು. ಅದಕ್ಕೆ ಇಸ್ರೇಲ್ ಅನುಭವಿಸಿದ ಅಪಾರ ಸಂಖ್ಯೆಯ ಸಾವುನೋವುಗಳೂ ಕಾರಣವಾಗಿತ್ತು. ಗಾಜಾ ಮೇಲೆ ಇಸ್ರೇಲ್ ವಾಯುಪಡೆ ಕೈಗೊಂಡ ವೈಮಾನಿಕ ದಾಳಿಗಳ ಜೊತೆಗೆ, ಇಸ್ರೇಲ್ ಸಂಪೂರ್ಣ ಗಾಜಾ ಪಟ್ಟಿಗೆ ಎಲ್ಲ ಇಂಧನ, ನೀರು, ವಿದ್ಯುತ್ ಮತ್ತು ಆಹಾರ ಪೂರೈಕೆಯನ್ನು ಸ್ಥಗಿತಗೊಳಿಸಿದೆ. ಇದು ಈಗಾಗಲೇ ಗಾಜಾದಲ್ಲಿದ್ದ ಸಂಕಷ್ಟಗಳನ್ನು ಇನ್ನಷ್ಟು ತೀವ್ರಗೊಳಿಸಿತು. 2,000ಕ್ಕೂ ಹೆಚ್ಚು ಪ್ಯಾಲೆಸ್ತೀನಿಯನ್ನರು ಸಾವಿಗೀಡಾಗಿದ್ದು, ಲಕ್ಷಾಂತರ ಜನರು ಅವರ ಮನೆಗಳನ್ನು ಬಿಟ್ಟು ತೆರಳುವಂತಾಯಿತು.
ಇಸ್ರೇಲ್ ನಾಯಕತ್ವ ಈಗಾಗಲೇ ನಿರ್ಣಾಯಕ ಭೂ ಕಾರ್ಯಾಚರಣೆ ನಡೆಸುವ ಕುರಿತು ಮಾತುಕತೆ ನಡೆಸುತ್ತಿದೆ. ಇದಕ್ಕಾಗಿ ಸೂಕ್ತ ಸಿದ್ಧತಾ ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದ್ದು, ಕಾರ್ಯಾಚರಣೆ ಎರಡೂ ಬದಿಗಳಲ್ಲೂ ಸಾವು ನೋವುಗಳನ್ನು ಹೆಚ್ಚಿಸುವ ಸಾಧ್ಯತೆಗಳಿವೆ. ಆದರೆ, ಕೆಲವು ಅಂದಾಜಿನ ಪ್ರಕಾರ, ಗುಪ್ತಚರ ಸಂಸ್ಥೆಗಳಿಗೆ ಹಮಾಸ್ ದಾಳಿಯ ಅಪಾಯದ ಮುನ್ಸೂಚನೆಯನ್ನು ಅಂದಾಜಿಸಲು ಸಾಧ್ಯವಾಗಿಲ್ಲ.
ಇದನ್ನೂ ಓದಿ: ನೆಹರೂ, ಇಂದಿರಾ ಗಾಂಧಿಯಿಂದ ಮೋದಿಯ ತನಕ: ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ವಿವಾದದಲ್ಲಿ ಭಾರತದ ನಿಲುವಿನ ಹಾದಿ
ಹಲವು ರಾಷ್ಟ್ರಗಳು ಮಧ್ಯಪೂರ್ವ ಪ್ರದೇಶದಲ್ಲಿ ಇಸ್ರೇಲ್ ಅತ್ಯಂತ ಪ್ರಬಲ ಮಿಲಿಟರಿ ಶಕ್ತಿ ಎಂದು ಭಾವಿಸಿದ್ದವು. ಆದರೆ, ಈಗ ಇಸ್ರೇಲ್ ಎದುರಿಸಿರುವ ದಾಳಿಯ ಬಳಿಕ, ಇಸ್ರೇಲ್ ನಾಯಕತ್ವಕ್ಕೆ ತಾನು ಇನ್ನೂ ಅಷ್ಟೇ ಶಕ್ತಿಶಾಲಿಯಾಗಿದ್ದೇನೆ ಮತ್ತು ಎಂತಹ ದಾಳಿಗೂ ಸೂಕ್ತ ಪ್ರತ್ಯುತ್ತರ ನೀಡಲು ಸಮರ್ಥನಾಗಿದ್ದೇನೆ ಎಂದು ಸಾಬೀತುಪಡಿಸುವ ಅವಶ್ಯಕತೆಯಿದೆ. ಆಂತರಿಕ ರಾಜಕೀಯ ಪರಿಣಾಮಗಳು, ಸಮಸ್ಯೆಗಳು ಉಂಟಾಗದಂತೆ ತಡೆಯುವ ಸಲುವಾಗಿ, ಇಸ್ರೇಲ್ ನಾಯಕತ್ವ ಈ ದಾಳಿಯ ಬಳಿಕವೂ ಇಸ್ರೇಲಿ ಸರ್ಕಾರ ನಾಗರಿಕರ ರಕ್ಷಣೆಯನ್ನು ಕಾಪಾಡಲು ತಾನು ಸಮರ್ಥನಾಗಿದ್ದೇನೆ ಎಂಬ ಭದ್ರತೆಯ ಭಾವ ಮೂಡಿಸುವ ಅವಶ್ಯಕತೆಯಿದೆ. ಇಲ್ಲಿಯತನಕ ತಾವು ಸುರಕ್ಷಿತವಾಗಿದ್ದೇವೆ ಎಂಬ ಇಸ್ರೇಲಿ ನಾಗರಿಕರ ಭಾವನೆಗಳನ್ನು ಈ ದಾಳಿ ಛಿದ್ರಗೊಳಿಸಿದೆ.
ನೆತನ್ಯಾಹು ಪ್ರಭಾವಕ್ಕೆ ಹೊಡೆತ : ಪ್ರಸ್ತುತ ಎಂತಹ ಫಲಿತಾಂಶವೂ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ರಾಜಕೀಯ ಭವಿಷ್ಯವನ್ನು ಉಳಿಸುವುದು ಬಹುತೇಕ ಅಸಾಧ್ಯವಾಗಿದ್ದು, ಅವರಿಗೆ 'ಆಪರೇಶನ್ ಐರನ್ ಸ್ವಾರ್ಡ್ಸ್' ಯಶಸ್ಸು ಸಾಧಿಸುವುದು ಅತ್ಯಂತ ಮುಖ್ಯವಾಗಿದೆ. ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ನಡೆದ ಭಾರೀ ದಾಳಿ ನೆತನ್ಯಾಹು ಅವರ ವ್ಯಕ್ತಿ ಚಿತ್ರಣಕ್ಕೆ ಭಾರೀ ಹೊಡೆತ ನೀಡಿದೆ. ಇಸ್ರೇಲಿನ ಹಿಂದಿನ ಯಾವುದೇ ಪ್ರಧಾನಿ ನಡೆಸದಷ್ಟು ಸುದೀರ್ಘವಾದ, 16 ವರ್ಷಗಳ ಕಾಲ ಆಡಳಿತ ನಡೆಸಿದ ಬೆಂಜಮಿನ್ ನೆತನ್ಯಾಹು ಅವರು ಇಸ್ರೇಲಿನ ರಕ್ಷಣೆ ನಡೆಸುವಲ್ಲಿ ಅತ್ಯಂತ ಸಮರ್ಥ ನಾಯಕ ಎಂಬ ಭಾವನೆ ಮೂಡಿಸಿದ್ದರು. ಆದರೆ ಟೋರಾ ಹಬ್ಬದ ದಿನ ನಡೆದ ದುರ್ಘಟನೆ ಆ ಭಾವನೆಗಳನ್ನು ಹಾಳುಗೆಡವಿದೆ. ಇದು ಆಡಳಿತ ನಡೆಸುತ್ತಿರುವ, ಇಸ್ರೇಲ್ ಇತಿಹಾಸದಲ್ಲೇ ಅತ್ಯಂತ ಉಗ್ರ ಬಲಪಂಥೀಯ ಸರ್ಕಾರಕ್ಕೆ ಬಹುದೊಡ್ಡ ಹಿನ್ನಡೆಯಾಗಿದೆ. ಯಾಕೆಂದರೆ, ಈ ಸರ್ಕಾರದ ಅವಧಿಯಲ್ಲೇ ಅತ್ಯಂತ ಗಂಭೀರವಾದ ಹಾನಿ ಇಸ್ರೇಲಿಗೆ ಸಂಭವಿಸಿದೆ. ಅದರೊಡನೆ, ಸರ್ಕಾರ ಕೈಗೊಂಡ ನ್ಯಾಯಾಂಗ ಸುಧಾರಣೆಗಳು ಸಮಾಜದಲ್ಲಿ ಇನ್ನಷ್ಟು ಬಿರುಕು ಮೂಡಿಸಿದ್ದು, ಇಸ್ರೇಲಿನ ಆಂತರಿಕ ರಾಜಕೀಯ ವಾತಾವರಣವನ್ನು ಕಲುಷಿತಗೊಳಿಸಿದೆ.
ಹಲವು ಟೀಕಾಕಾರರು ಅಕ್ಟೋಬರ್ 7ರ ದಾಳಿಯನ್ನು 1973ರ ಯೋಮ್ ಕಿಪ್ಪುರ್ ಯುದ್ಧಕ್ಕೆ ಹೋಲಿಸಿದ್ದಾರೆ. ಆ ಯುದ್ಧದ ವೇಳೆ ಈಜಿಪ್ಟ್ ಮತ್ತು ಸಿರಿಯಾಗಳು ನಡೆಸಿದ ಜಂಟಿ ಮಿಂಚಿನ ದಾಳಿಗೆ ಇಸ್ರೇಲ್ ನಲುಗಿ ಹೋಗಿತ್ತು. ಈ ಬಾರಿಯೂ ಟೋರಾ ಹಬ್ಬದ ದಿನ ನಡೆದ ಹಮಾಸ್ ಅನಿರೀಕ್ಷಿತ ದಾಳಿಗೆ ಭದ್ರತೆ ಮತ್ತು ಗುಪ್ತಚರ ವೈಫಲ್ಯ ಕಾರಣವಾಗಿದ್ದು, ಈ ವೈಫಲ್ಯಕ್ಕೆ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೇ ಜವಾಬ್ದಾರಿ ಎಂದು ಟೀಕಾಕಾರರು ಆರೋಪಿಸಿದ್ದಾರೆ.
ಇದನ್ನೂ ಓದಿ: ಕಸ್ಸಾಮ್ ರಾಕೆಟ್‌ಗಳು: ಅಭಿವೃದ್ಧಿ, ಸರಳತೆ ಹಾಗೂ ಇಸ್ರೇಲ್ - ಹಮಾಸ್ ಯುದ್ಧದ ಮೇಲಿನ ಪರಿಣಾಮ
ಸಿಮ್‌ಚಾಟ್ ಟೋರಾ ಹಬ್ಬ : ಸಿಮ್‌ಚಾಟ್ ಟೋರಾ ಎನ್ನುವುದು ಯಹೂದಿ ರಜಾದಿನವಾಗಿದ್ದು, ಟೋರಾ ಓದುವ ವಾರ್ಷಿಕ ಆವೃತ್ತಿ ಪೂರ್ಣಗೊಂಡು, ಹೊಸ ಆವರ್ತನದ ಆರಂಭವನ್ನು ಸೂಚಿಸುವ ದಿನವಾಗಿದೆ. ಟೋರಾ ಎನ್ನುವುದು ಹೀಬ್ರೂ ಬೈಬಲ್‌ನ ಮೊದಲ ಐದು ಪುಸ್ತಕಗಳಾಗಿವೆ. ಇದನ್ನು ಏಳು ದಿನಗಳ ಸುಕ್ಕೊತ್ ಉತ್ಸವದ ಕೊನೆಯ ದಿನದಂದು ಆಚರಿಸಲಾಗುತ್ತದೆ.
ಸಿಮ್‌ಚಾಟ್ ಟೋರಾದಂದು ಯಹೂದಿಗಳು ಸಿನಗಾಗ್‌ಗಳಲ್ಲಿ ಟೋರಾ ಪ್ರತಿಗಳೊಡನೆ ಸಂಭ್ರಮಿಸುತ್ತಾರೆ. 'ಹಕಾಫೋಟ್' ಎಂದು ಕರೆಯುವ ಏಳು ಸರ್ಕ್ಯೂಟ್‌ಗಳಲ್ಲಿ ಹಾಡಿ, ನರ್ತಿಸುತ್ತಾರೆ. ಟೋರಾ ಯಾವತ್ತೂ ಕೊನೆಯಾಗುವುದಿಲ್ಲ ಮತ್ತು ಯಾವತ್ತೂ ಹೊಸದಾಗಿರುತ್ತದೆ ಎಂದು ಪ್ರತಿನಿಧಿಸಲು ಯಹೂದಿಗಳು ಡ್ಯುಟೆರಾನಮಿಯ ಕೊನೆಯ ಭಾಗ ಮತ್ತು ಜೆನೆಸಿಸ್‌ನ ಮೊದಲ ಭಾಗವನ್ನು ಓದುತ್ತಾರೆ. ಸಿಮ್‌ಚಾಟ್ ಟೋರಾ ಒಂದು ಸಂತೋಷದ ಹಬ್ಬವಾಗಿದ್ದು, ಯಹೂದಿಗಳ ಪವಿತ್ರ ಗ್ರಂಥ ಪಠಣದ ಪುನರಾರಂಭವಾಗಿದೆ.
ಆದರೆ, ಪ್ರಸ್ತುತ ನಡೆಯುತ್ತಿರುವ ಇಸ್ರೇಲಿ ಆಂತರಿಕ ರಾಜಕೀಯ ಬಿಕ್ಕಟ್ಟಿನ ಹೊರತಾಗಿಯೂ, ಮಿಲಿಟರಿ ಕಾರ್ಯಾಚರಣೆ ಇಸ್ರೇಲಿ ಸಮಾಜ ಮತ್ತು ರಾಜಕೀಯ ಮುಖಂಡರನ್ನು ಒಗ್ಗೂಡಿಸಲಿದೆ. ಇಸ್ರೇಲಿನ ಮಾಜಿ ರಕ್ಷಣಾ ಸಚಿವರು ಹಾಗೂ ವಿರೋಧ ಪಕ್ಷದ ನಾಯಕರಲ್ಲಿ ಒಬ್ಬರಾದ ಬೆನ್ನಿ ಗ್ಯಾಂಟ್ಜ್ ಅವರನ್ನು ರಾಷ್ಟ್ರೀಯ ತುರ್ತುಪರಿಸ್ಥಿತಿಯ ಸರ್ಕಾರದ ಹಾಗೂ ಯುಧ್ಧ ಸಂಬಂಧಿ ಸಚಿವ ಸಂಪುಟದ ಭಾಗವಾಗಿಸಲಾಗಿದೆ.
ದೊಡ್ಡದಾದ ಭವಿಷ್ಯದ ಪರಿಣಾಮಗಳು : ಇಸ್ರೇಲ್ ಮುಂದಿರುವ ಆಯ್ಕೆಗಳಲ್ಲಿ ಮೊದಲನೆಯದು ಭೂ ಕಾರ್ಯಾಚರಣೆ ನಡೆಸುವುದು. ಆದರೆ, ಇದು ಈಗಾಗಲೇ ಇರುವ ಸಮಸ್ಯೆಗಳನ್ನು ಪರಿಹರಿಸಲು ಸೂಕ್ತವಾದ ಮಾರ್ಗ ಎನ್ನಲು ಸಾಧ್ಯವಿಲ್ಲ. ಇದು ಹೊಸ ಸಮಸ್ಯೆಗಳಿಗೂ ಹಾದಿ ಮಾಡಿಕೊಡಬಹುದು. ಅಕ್ಟೋಬರ್ 7ರ ದಾಳಿಯ ಪರಿಣಾಮವಾಗಿ, ಇಸ್ರೇಲ್ ಗಾಜಾದ ಗುಂಪುಗಳು ಮತ್ತು ಒಟ್ಟಾರೆಯಾಗಿ ಗಾಜಾ ಪಟ್ಟಿಯೊಡನೆ ವರ್ತಿಸುವ ರೀತಿಯಲ್ಲಿ ಬಹಳಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಬೇಕಿದೆ. ಆ ಮೂಲಕ, ಪ್ರಸ್ತುತ ಕದನ ಮುಂದಿನ ವರ್ಷಗಳಲ್ಲಿ ಇಸ್ರೇಲ್ - ಪ್ಯಾಲೆಸ್ತೀನ್ ನಡುವೆ ನಡೆಯಬಹುದಾದ ಚಕಮಕಿಗಳ ಮೇಲೆ ಅನಿರೀಕ್ಷಿತವಾಗಿ ದೊಡ್ಡ ಪರಿಣಾಮಗಳನ್ನು ಬೀರಬಹುದು.
ಇದನ್ನೂ ಓದಿ: ಬಿಳಿ ರಂಜಕದ ಬಳಕೆಯಿಂದ ಯುದ್ಧಾಪರಾಧಗಳ ತನಕ: ಇರಾನ್- ಹಮಾಸ್ ಯುದ್ಧದ ಸಂಕೀರ್ಣತೆಗಳ ಅನಾವರಣ
ಗಾಜಾದಲ್ಲಿ ನಡೆಯುತ್ತಿರುವ ಕದನ ಈ ದೀರ್ಘ ಬಿಕ್ಕಟ್ಟನ್ನು ಮುಗಿಸುತ್ತದೆ ಎನ್ನಲು ಸಾಧ್ಯವಿಲ್ಲ. ಆದರೆ, ಈ ಬಾರಿ ಹಮಾಸ್ ನಡೆಸಿದ ದಾಳಿ ಇಸ್ರೇಲ್ ಸರ್ಕಾರಕ್ಕೆ ಅತಿದೊಡ್ಡ ತಲೆನೋವು ತಂದಿದ್ದು, ಯಹೂದಿ ಸಮುದಾಯಕ್ಕೆ ಹಿಂದಿನ ಹತ್ಯಾಕಾಂಡದ ನೆನಪು ಮೂಡಿಸಿ, ದೇಶದ ಭದ್ರತೆಯ ಕುರಿತು ಅನುಮಾನ ಮೂಡುವಂತೆ ಮಾಡಿದೆ. ಈ ಮೊದಲು ಇಸ್ರೇಲ್ ಗಾಜಾದಲ್ಲಿ ಹಮಾಸ್ ಕುರಿತು ಮಿಲಿಟರಿ ನಿಯಂತ್ರಣ ಹಾಗೂ ನಾಗರಿಕ ಆಡಳಿತಕ್ಕೆ ಅವಕಾಶ ಕೊಟ್ಟಿತ್ತು. ಆದರೆ, ಈಗ ನಡೆದಿರುವ ಅನಿರೀಕ್ಷಿತ ದಾಳಿ ಸಾವಿರಾರು ಜೀವ ಹರಣ ಮಾಡಿರುವ ಪರಿಣಾಮವಾಗಿ ಇಸ್ರೇಲ್ ಈ ಕುರಿತು ಮರು ಪರಿಶೀಲನೆ ನಡೆಸುವ ಸಾಧ್ಯತೆಗಳು ಹೆಚ್ಚಿವೆ. ಈ ದಾಳಿ ಇಸ್ರೇಲ್ ಅಸಹಾಯಕ ಎಂಬಂತೆ ಬಿಂಬಿಸಿದ್ದು, ಇದರ ಪರಿಣಾಮವಾಗಿ ಇಸ್ರೇಲ್ ಇನ್ನಷ್ಟು ಉಗ್ರವಾಗಿ ಪ್ರತಿಕ್ರಿಯೆ ನೀಡುವಂತಾಯಿತು. ಅದರೊಡನೆ, ಇನ್ನಷ್ಟು ಅಪಾಯಕಾರಿಯೂ ಆದ ಭೂ ಕಾರ್ಯಾಚರಣೆ ನಡೆಸುವ ಕುರಿತು ಆಲೋಚಿಸುವಂತಾಯಿತು.
ಎಂತಹ ಫಲಿತಾಂಶ ಬಂದರೂ, ಈ ಕದನ ಮುಗಿದ ಬಳಿಕ, ಇಸ್ರೇಲ್ ನಾಯಕತ್ವ ಖಂಡಿತವಾಗಿಯೂ ಹಮಾಸ್ ಕಾರ್ಯಾಚರಣೆ ಮೂಡಿಸಿದ ಪ್ರಶ್ನೆಗಳಿಗೆ ಉತ್ತರ ನೀಡಬೇಕಾಗುತ್ತದೆ. ಈ ಬೃಹತ್ ದಾಳಿ ಇಸ್ರೇಲಿನ ರಕ್ಷಣಾ ವ್ಯವಸ್ಥೆಯ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ. ಐತಿಹಾಸಿಕವಾಗಿ, ಬಾಹ್ಯ ಸವಾಲುಗಳು ಎದುರಾದಾಗ ಇಸ್ರೇಲಿ ಸಮಾಜ ಒಂದಾಗಿ ನಿಂತು ಅದನ್ನು ಎದುರಿಸಿದೆ. ಆದ್ದರಿಂದ, ಇಂತಹ ಗಂಭೀರ ಸಂದರ್ಭದಲ್ಲಿಯೂ ಇಸ್ರೇಲ್ ಈ ಪರಿಸ್ಥಿತಿಯನ್ನು ಜೊತೆಯಾಗಿ ಎದುರಿಸುವ ಸಾಧ್ಯತೆಗಳೇ ಹೆಚ್ಚಿವೆ.
ಲೇಖಕರು
ಗಿರೀಶ್ ಲಿಂಗಣ್ಣ
(ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.