ನೆಹರೂ, ಇಂದಿರಾ ಗಾಂಧಿಯಿಂದ ಮೋದಿಯ ತನಕ: ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ವಿವಾದದಲ್ಲಿ ಭಾರತದ ನಿಲುವಿನ ಹಾದಿ

ನವದೆಹಲಿ ವಿವಿಧ ಮಾರ್ಗೋಪಾಯಗಳ ಮೂಲಕ ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಎರಡರ ಜೊತೆಗೂ ಸ್ನೇಹ ಸಂಬಂಧವನ್ನು ವೃದ್ಧಿಸಲು ಪ್ರಯತ್ನ ನಡೆಸಿದರೂ, ಗಮನಾರ್ಹ ವಿಚಾರವೆಂದರೆ ಇಸ್ರೇಲ್ ಜೊತೆಗಿನ ಭಾರತದ ಸಂಬಂಧ ಬಹಳ ಅಭಿವೃದ್ಧಿ ಸಾಧಿಸಿದೆ. ಮೋದಿ ಮತ್ತು ನೆತನ್ಯಾಹು ಅವರು ಗಟ್ಟಿಯಾದ ಸ್ನೇಹ ಹೊಂದಿದ್ದು, ವ್ಯಾಪಾರ ಮತ್ತು ಭದ್ರತೆಯ ದೃಷ್ಟಿಯಲ್ಲಿ ಪ್ರಯೋಜನಗಳನ್ನು ಪಡೆಯಲಾಗುತ್ತಿದೆ

Written by - Girish Linganna | Edited by - Krishna N K | Last Updated : Oct 15, 2023, 05:09 PM IST
  • ದ್ವಿರಾಷ್ಟ್ರ ಪರಿಹಾರ ಎನ್ನುವುದು ಪ್ಯಾಲೆಸ್ತೀನ್ ಬಿಕ್ಕಟ್ಟಿಗೆ ಈಗಾಗಲೇ ಸೂಚಿತ ಪರಿಹಾರ
  • ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಎರಡು ಸ್ವತಂತ್ರ ರಾಷ್ಟ್ರಗಳು ಅಕ್ಕಪಕ್ಕದಲ್ಲಿ ಬಾಳುವುದಾಗಿದೆ
  • ಭಾರತ ಪ್ಯಾಲೆಸ್ತೀನಿಗೆ ನ್ಯಾಯ ಒದಗಿಸುವ ವಿಚಾರದಲ್ಲಿ ಒಂದು ಸೂಕ್ಷ್ಮವಾದ ನಿಲುವು ಕೈಗೊಂಡಿತ್ತು
ನೆಹರೂ, ಇಂದಿರಾ ಗಾಂಧಿಯಿಂದ ಮೋದಿಯ ತನಕ: ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ವಿವಾದದಲ್ಲಿ ಭಾರತದ ನಿಲುವಿನ ಹಾದಿ title=

Israel-Palestine Dispute: ಹಿಂದುತ್ವದ ಬೆಂಬಲಿಗರು ತಮ್ಮ ಮತ್ತು ಇಸ್ರೇಲಿಗರ ನಡುವೆ ಸಮಾನವಾಗಿದೆ ಎಂದು ಭಾವಿಸಿರುವ ಮುಸ್ಲಿಂ ವಿರೋಧಿ ಭಾವನೆಯಿಂದ ನೇರವಾಗಿಯೇ ಪ್ಯಾಲೆಸ್ತೀನ್ ಸರಹದ್ದಿನಲ್ಲಿ ಇಸ್ರೇಲ್ ನಡೆಸುತ್ತಿರುವ ಕ್ರಮಗಳನ್ನು ಬೆಂಬಲಿಸುತ್ತಿದ್ದರೆ, ಬಲಪಂಥೀಯ ಭಾರತೀಯ ಜನತಾ ಪಾರ್ಟಿ ನೇತೃತ್ವದ ಕೇಂದ್ರ ಸರ್ಕಾರ ಹೆಚ್ಚು ಸಂಯಮದ ನಡೆಯನ್ನು ತೋರುತ್ತಿದೆ.

ಮೇ 17ರಂದು ನಡೆದ ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಸಭೆಯಲ್ಲಿ ಭಾರತ ಪ್ಯಾಲೆಸ್ತೀನಿಗೆ ನ್ಯಾಯ ಒದಗಿಸುವ ವಿಚಾರದಲ್ಲಿ ಒಂದು ಸೂಕ್ಷ್ಮವಾದ ನಿಲುವು ಕೈಗೊಂಡು, ದ್ವಿರಾಷ್ಟ್ರ ಪರಿಹಾರದ ನಿಲುವಿಗೆ ತನ್ನ ಬದ್ಧತೆಯನ್ನು ಪ್ರದರ್ಶಿಸಿತು. ಆದರೆ ಇದೊಂದು ಸೂಕ್ಷ್ಮವಾದ, ಸಮತೋಲನ ಕಾಪಾಡಿಕೊಳ್ಳುವ ಹೆಜ್ಜೆಯಾಗಿತ್ತು. ಭಾರತ ಪ್ಯಾಲೆಸ್ತೀನಿನ ಉದ್ದೇಶವನ್ನು ಅಧಿಕೃತವಾಗಿ ಒಪ್ಪಿಕೊಂಡಿದ್ದರೂ, ಇಸ್ರೇಲಿ ನಾಗರಿಕರನ್ನು ಗುರಿಯಾಗಿಸಿ ಗಾಜಾದಿಂದ ನಡೆಯುತ್ತಿರುವ ಅವ್ಯಾಹತ ರಾಕೆಟ್ ದಾಳಿಯನ್ನು ಖಂಡಿಸಿದೆ.

ಇದನ್ನೂ ಓದಿ: ಮುಂದುವರಿದ ಇಸ್ರೇಲ್ - ಹಮಾಸ್ ಯುದ್ಧ: ಏಳನೇ ದಿನದ ಬೆಳವಣಿಗೆಗಳು

ದ್ವಿರಾಷ್ಟ್ರ ಪರಿಹಾರ ಎನ್ನುವುದು ಪ್ಯಾಲೆಸ್ತೀನ್ ಬಿಕ್ಕಟ್ಟಿಗೆ ಈಗಾಗಲೇ ಸೂಚಿತ ಪರಿಹಾರವಾಗಿದ್ದು, ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಎರಡು ಸ್ವತಂತ್ರ ರಾಷ್ಟ್ರಗಳು ಅಕ್ಕಪಕ್ಕದಲ್ಲಿ ಬಾಳುವುದಾಗಿದೆ. ಈ ಎರಡು ರಾಷ್ಟ್ರಗಳು ತಮ್ಮದೇ ಆದ ಸರ್ಕಾರ, ಸಾರ್ವಭೌಮತ್ವವನ್ನು ಹೊಂದಿ, ನಿಖರವಾದ ಗಡಿಗಳನ್ನು ಹಾಕಿಕೊಂಡು, ತಮ್ಮ ವ್ಯವಹಾರಗಳನ್ನು ತಾವೇ ನಡೆಸುವುದಾಗಿದೆ. ಈ ಪರಿಹಾರ ದೀರ್ಘಕಾಲದಿಂದ ಸಾಗಿಬಂದಿರುವ ಇಸ್ರೇಲ್ ಪ್ಯಾಲೆಸ್ತೀನ್ ಬಿಕ್ಕಟ್ಟಿಗೆ ಶಾಂತಿಯುತ ಮತ್ತು ಮಾತುಕತೆಯ ಪರಿಹಾರ ಒದಗಿಸುವ ಗುರಿ ಹೊಂದಿದೆ.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿಯವರ ನಡುವೆ ಉತ್ತಮ ಮಿತ್ರತ್ವ ಇದ್ದರೂ, ಭಾರತದ ರಾಜತಾಂತ್ರಿಕ ಸ್ಥಾನ ಇದೇ ಹಾದಿಯಲ್ಲಿ ಬೆಳೆದು ಬಂದಿದೆ.

"ನವದೆಹಲಿ ವಿವಿಧ ಮಾರ್ಗೋಪಾಯಗಳ ಮೂಲಕ ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಎರಡರ ಜೊತೆಗೂ ಸ್ನೇಹ ಸಂಬಂಧವನ್ನು ವೃದ್ಧಿಸಲು ಪ್ರಯತ್ನ ನಡೆಸಿದರೂ, ಗಮನಾರ್ಹ ವಿಚಾರವೆಂದರೆ ಇಸ್ರೇಲ್ ಜೊತೆಗಿನ ಭಾರತದ ಸಂಬಂಧ ಬಹಳ ಅಭಿವೃದ್ಧಿ ಸಾಧಿಸಿದೆ. ಮೋದಿ ಮತ್ತು ನೆತನ್ಯಾಹು ಅವರು ಗಟ್ಟಿಯಾದ ಸ್ನೇಹ ಹೊಂದಿದ್ದು, ವ್ಯಾಪಾರ ಮತ್ತು ಭದ್ರತೆಯ ದೃಷ್ಟಿಯಲ್ಲಿ ಪ್ರಯೋಜನಗಳನ್ನು ಪಡೆಯಲಾಗುತ್ತಿದೆ" ಎಂದು ಏಷ್ಯಾ ಪ್ರೋಗ್ರಾಮ್ ಉಪ ನಿರ್ದೇಶಕರಾದ ಮೈಕೆಲ್ ಕುಗೆಲ್‌ಮನ್ ಅಭಿಪ್ರಾಯ ಪಟ್ಟಿದ್ದಾರೆ. "ಇದರಲ್ಲಿ ಅತ್ಯಂತ ಗಮನಾರ್ಹ ಅಂಶವೆಂದರೆ, ಭಾರತ ಹೊಂದಿರುವ ಆತ್ಮೀಯ ಸಂಬಂಧದ ಹೊರತಾಗಿಯೂ, ಗಾಜಾ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ನವದೆಹಲಿ ಅತ್ಯಂತ ಸಮತೋಲಿತ ನಿಲುವು ಸಾಧಿಸಿದ್ದು, ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಎರಡರ ದೃಷ್ಟಿಕೋನಕ್ಕೂ ಬೆಂಬಲ ಒದಗಿಸುತ್ತಿದೆ" ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಯೋಮ್ ಕಿಪ್ಪುರ್ ಯುದ್ಧ- ಪ್ರಸ್ತುತ ಇಸ್ರೇಲ್ ಯುದ್ಧ: ಎರಡರ ನಡುವಿನ ಸಮಾನಾಂತರಗಳು

ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಸರಹದ್ದಿಗೆ ಸಂಬಂಧಿಸಿದ ವಿಚಾರಗಳೆಡೆಗೆ ಭಾರತದ ನಿಲುವಿನ ಹಿಂದೆ ಅತ್ಯಂತ ಉತ್ತಮವಾಗಿ ನಿರೂಪಿತವಾದ, ವಿವೇಕಯುತ ರಾಜತಾಂತ್ರಿಕ ಹಿನ್ನೆಲೆಯಿದೆ. ಇದು ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಕಾಲದಿಂದಲೂ ಸಾಗಿಬಂದಿದೆ.

ನೆಹರೂ ಆಡಳಿತ ಅವಧಿಯಲ್ಲಿ ಭಾರತ ಮತ್ತು ಪ್ಯಾಲೆಸ್ತೀನ್ ಸರಹದ್ದುಗಳು : 1950ರಲ್ಲಿ, ಭಾರತ ಇಸ್ರೇಲನ್ನು ಅಧಿಕೃತವಾಗಿ ರಾಷ್ಟ್ರವೆಂದು ಮಾನ್ಯತೆ ನೀಡಿತು. ಆದರೆ ಭಾರತ ಮತ್ತು ಇಸ್ರೇಲ್ ನಡುವಿನ ಸಂಬಂಧದಲ್ಲಿ ಯಾವುದೇ ಸುಧಾರಣೆ ಆಗಿರಲಿಲ್ಲ. ನೆಹರೂ ಅವರ 'ಪಶ್ಚಿಮ ಏಷ್ಯಾ ನೀತಿ' ಅರಬ್ ಭಾವನೆಗಳ ಕೇಂದ್ರಿತವಾಗಿದ್ದು, ಅರಬ್ ಜಗತ್ತು ಪ್ಯಾಲೆಸ್ತೀನಿನಲ್ಲಿ ಯಹೂದಿ ರಾಷ್ಟ್ರದ ಸ್ಥಾಪನೆಗೆ ವಿರುದ್ಧವಾಗಿತ್ತು ಎಂದು ಯುನಿವರ್ಸಿಟಿ ಆಫ್ ವಾರ್‌ವಿಕ್‌ನ ಸಂಶೋಧಕರಾದ ತನ್ವಿ ಪೇಟ್ ಅಭಿಪ್ರಾಯ ಪಟ್ಟಿದ್ದಾರೆ.

ಇದರ ಹೊರತಾಗಿಯೂ, 1962ರ ಭಾರತ - ಚೀನಾ ಯುದ್ಧದ ಸಂದರ್ಭದಲ್ಲಿ ನೆಹರೂ ಆಡಳಿತ ಇಸ್ರೇಲ್‌ನಿಂದ ಮಿಲಿಟರಿ ಸಹಾಯ ಕೇಳಿತ್ತು. ಲೇಯ್ಡನ್ ವಿಶ್ವವಿದ್ಯಾಲಯದ ನಿಕೋಲಸ್ ಬ್ಲಾರೆಲ್ ಅವರನ್ನು ಉಲ್ಲೇಖಿಸುವ ತನ್ವಿ ಭಾರತ ಮತ್ತು ಇಸ್ರೇಲ್ ನಡುವಿನ ಸಂಬಂಧದಲ್ಲಿರುವ ವೈಚಿತ್ರ್ಯವನ್ನು ವಿವರಿಸುತ್ತಾರೆ. ನೆಹರೂ ಅವರು ಯಾವುದೇ ರಾಜತಾಂತ್ರಿಕ ಸಂಬಂಧವಿಲ್ಲದೆ, ಸಾರ್ವಜನಿಕವಾಗಿ ಭದ್ರತಾ ಸಹಾಯ ಪಡೆದಿರುವುದನ್ನು ಘೋಷಿಸದೆ ಇಸ್ರೇಲ್‌ನಿಂದ ಮಿಲಿಟರಿ ಸಹಾಯ ಪಡೆದುಕೊಂಡರು.

1970ರ ದಶಕದಲ್ಲಿ, ಕಾಂಗ್ರೆಸ್ ಸರ್ಕಾರದ ನೇತೃತ್ವದಲ್ಲಿ, ಭಾರತ ಪ್ಯಾಲೆಸ್ತೀನ್ ಲಿಬರೇಶನ್ ಆರ್ಗನೈಸೇಶನ್ ಮತ್ತು ಅದರ ನಾಯಕ ಯಾಸಿರ್ ಅರಾಫತ್ ಅವರನ್ನು ಪ್ಯಾಲೆಸ್ತೀನ್ ಜನರ ಅಧಿಕೃತ ಪ್ರತಿನಿಧಿ ಎಂದು ಬೆಂಬಲ ಘೋಷಿಸಿದ ಮೊದಲ ಅರಬೇತರ ರಾಷ್ಟ್ರವಾಗಿತ್ತು.

ಇದನ್ನೂ ಓದಿ:ಹೆಜ್ಬೊಲ್ಲಾ ಮತ್ತು ಹಮಾಸ್: ಮಧ್ಯ ಪೂರ್ವದ ಸಮರದಲ್ಲಿ ಎರಡೂ ಸಂಘಟನೆಗಳ ಪಾತ್ರಗಳ ಅನಾವರಣ

ಇಂದಿರಾ ಗಾಂಧಿ ಮತ್ತು ಮಧ್ಯ ಪೂರ್ವ: ರಾಜತಾಂತ್ರಿಕತೆ ಮತ್ತು ದ್ವಂದ್ವಗಳ ಅಧ್ಯಯನ : ಇಂದಿರಾ ಗಾಂಧಿಯವರ ಆಡಳಿತದ ಅವಧಿಯಲ್ಲಿ, ಭಾರತ ಮತ್ತು ಇಸ್ರೇಲ್‌ಗಳ ಸಂಬಂಧದಲ್ಲಿ ರಾಜತಾಂತ್ರಿಕ ದೂರ ಏರ್ಪಟ್ಟಿತು. ಅದೇ ವೇಖೆ ಭಾರತ ಅರಬ್ ಉದ್ದೇಶಕ್ಕೆ ಬೆಂಬಲ ನೀಡಿತ್ತು. 1966ರಿಂದ 1977, ಹಾಗೂ 1980ರಿಂದ 1984ರ ನಡುವೆ ಭಾರತದ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯವರು ಅರಬ್ ರಾಷ್ಟ್ರಗಳಿಗೆ ಇಸ್ರೇಲ್ ಜೊತೆಗಿನ ಸಂಘರ್ಷದ ಸಮಯದಲ್ಲಿ ರಾಜತಾಂತ್ರಿಕ ಬೆಂಬಲ ನೀಡುವ ಮೂಲಕ ಉತ್ತಮ ಸಂಬಂಧ ಸ್ಥಾಪಿಸಿದರು. ಎರಡು ಪಕ್ಷಗಳ ನಡುವಿನ ಸಂಘರ್ಷದ ಅವಧಿಯಲ್ಲಿ ಇಂದಿರಾ ಗಾಂಧಿಯವರು ನಿಸ್ಸಂದಿಗ್ಧವಾಗಿ ಪ್ಯಾಲೆಸ್ತೀನಿನ ಸ್ವಾತಂತ್ರ್ಯಕ್ಕೆ ಧ್ವನಿ ಎತ್ತಿ, ಸಂಘರ್ಷದ ಆರಂಭದಲ್ಲಿ ಇಸ್ರೇಲಿನ ನಡೆಯನ್ನು ಖಂಡಿಸಿಧದರು. ಅವರು ಪ್ಯಾಲೆಸ್ತೀನ್ ಲಿಬರೇಶನ್ ಆರ್ಗನೈಸೇಶನ್‌ಗೆ ರಾಜತಾಂತ್ರಿಕ ಅಧಿಕೃತತೆ ನೀಡಿದ್ದರು.

ಇಸ್ರೇಲ್ ಹಾಗೂ ಪ್ಯಾಲೆಸ್ತೀನ್ ಕುರಿತು ಇಂದಿರಾ ಗಾಂಧಿಯವರ ನೀತಿಗಳು ಹಲವು ಅಂಶಗಳಿಂದ ಪ್ರಭಾವಿತವಾಗಿದ್ದವು. ಅವುಗಳಲ್ಲಿ ಈಜಿಪ್ಟ್ ಅಧ್ಯಕ್ಷರಾದ ಗಮಾಲ್ ಅಬ್ದುಲ್ ನಾಸೆರ್ ಅವರ ಜೊತೆಗಿನ ಸ್ನೇಹ, ಅಲಿಪ್ತ ನೀತಿಯ ಕುರಿತು ಇಂದಿರಾ ಗಾಂಧಿಯವರ ಬದ್ಧತೆ, ಭಾರತದ ಮುಸ್ಲಿಂ ಅಲ್ಪಸಂಖ್ಯಾತ ಮತದಾರರನ್ನು ಸೆಳೆಯುವ ರಾಜಕೀಯ ಲೆಕ್ಕಾಚಾರಗಳು ಮತ್ತು ಅರಬ್ ದೇಶಗಳಿಂದ ತೈಲ ಮತ್ತು ಆಯುಧಗಳ ಪೂರೈಕೆಯನ್ನು ಪಡೆದುಕೊಳ್ಳುವುದು ಪ್ರಮುಖವಾಗಿವೆ. ಇಂದಿರಾ ಗಾಂಧಿ ಇಸ್ರೇಲನ್ನು ಅಮೆರಿಕಾದ ಮಿತ್ರ ರಾಷ್ಟ್ರ ಎಂದು ಪರಿಗಣಿಸಿದ್ದರು. 1971ರ ಭಾರತ ಪಾಕಿಸ್ತಾನ ನಡುವಿನ ಬಾಂಗ್ಲಾ ವಿಮೋಚನಾ ಯುದ್ಧದಲ್ಲಿ ಅಮೆರಿಕಾ ಪಾಕಿಸ್ತಾನಕ್ಕೆ ಬೆಂಬಲ ನೀಡಿದ್ದರಿಂದ ಇಂದಿರಾ ಗಾಂಧಿ ಅಮೆರಿಕಾದ ಕುರಿತು ಅಪನಂಬಿಕೆ ಹೊಂದಿದ್ದರು.

ಆದರೆ, ಸಾರ್ವಜನಿಕವಾಗಿ ಇಸ್ರೇಲ್ ವಿರುದ್ಧದ ನಡೆಯನ್ನು ಇಂದಿರಾ ಗಾಂಧಿಯವರು ಪ್ರದರ್ಶಿಸಿದ್ದರೂ, ಅವರು ಯಹೂದಿ ರಾಷ್ಟ್ರದೊಡನೆ ವಿಶೇಷವಾಗಿ ಗುಪ್ತಚರ ಮತ್ತು ರಕ್ಷಣಾ ವಿಚಾರಗಳಿಗೆ ಸಂಬಂಧಿಸಿದಂತೆ ಒಂದಷ್ಟು ರಹಸ್ಯ ಸಂಪರ್ಕಗಳನ್ನು ಹೊಂದಿದ್ದರು. ಪಾಕಿಸ್ತಾನ ಭಾರತದ ಗಡಿಯೊಳಗೆ ನಡೆಸುತ್ತಿದ್ದ ಭಯೋತ್ಪಾನಾ ಚಟುವಟಿಕೆಗಳನ್ನು, ಭಯೋತ್ಪಾದಕರ ಒಳನುಸುಳುವಿಕೆಯನ್ನು ತಡೆಯಲು, ಹಾಗೂ ಭಾರತದ ಅಣ್ವಸ್ತ್ರ ಮತ್ತು ಕ್ಷಿಪಣಿ ಸಾಮರ್ಥ್ಯವನ್ನು ಅಭಿವೃದ್ಧಿ ಪಡಿಸಲು ಅವರು ಇಸ್ರೇಲಿನ ಸಹಾಯ ಕೋರಿದ್ದರು. ಅವರು ಇಸ್ರೇಲಿ ರಾಜತಾಂತ್ರಿಕರಿಗೆ ರಹಸ್ಯವಾಗಿ ಭಾರತಕ್ಕೆ ಬರಲು ಅವಕಾಶ ನೀಡಿದ್ದರು ಮತ್ತು ಎರಡು ರಾಷ್ಟ್ರಗಳ ನಡುವೆ ಮಾನವೀಯತೆಯ ನೆಲೆಯಲ್ಲಿ ವ್ಯವಹಾರಗಳಿಗೆ ಅನುಮತಿಸಿದ್ದರು. ಈ ಸಂಪರ್ಕಗಳನ್ನು ಅರಬ್ ರಾಷ್ಟ್ರಗಳು ಮತ್ತು ಭಾರತದ ಮುಸ್ಲಿಮ್ ಸಮುದಾಯ ಕೋಪಗೊಳ್ಳದಂತೆ ಮಾಡಲು ರಹಸ್ಯವಾಗಿಡಲಾಯಿತು. ಈ ಮೂಲಕ ಇಂದಿರಾ ಗಾಂಧಿಯವರ ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಕುರಿತ ನೀತಿಗಳು ಅವರ ಸೈದ್ಧಾಂತಿಕ ಆದ್ಯತೆಗಳು ಮತ್ತು ಪ್ರಾಯೋಗಿಕ ಆಸಕ್ತಿಗಳ ನಡುವಿನ ಸಮತೋಲನದ ಪ್ರಯತ್ನವಾಗಿತ್ತು.

ಇದನ್ನೂ ಓದಿ: ಉಗ್ರ ದಾಳಿಗೆ ಹಾದಿ ಮಾಡಿಕೊಟ್ಟ ಇಸ್ರೇಲ್ ಗುಪ್ತಚರ ವೈಫಲ್ಯ: ಗಾಜಾ ಗಡಿ ಭದ್ರತೆಯನ್ನು ಭೇದಿಸಿದ ಹಮಾಸ್

ಕಾಲ ಕಳೆದಂತೆ, ಭಾರತ ತನ್ನ ಆರಂಭಿಕ ಹಿಂಜರಿಕೆಯನ್ನು ತೊಡೆದು, ಇಸ್ರೇಲ್ ಜೊತೆ ಪೂರ್ಣ ಪ್ರಮಾಣದ ರಾಜತಾಂತ್ರಿಕ ಸಂಬಂಧವನ್ನು ಸ್ಥಾಪಿಸಿತು. 1992ರಲ್ಲಿ ಇಸ್ರೇಲ್‌ನಲ್ಲಿ ದೂತಾವಾಸ ಕಚೇರಿಗಳನ್ನು ತೆರೆದು, ರಾಯಭಾರಿಗಳನ್ನು ನಿಯೋಜಿಸಿತು. ಅಂದಿನಿಂದ ಭಾರತ ತನ್ನನ್ನು ತಾನು ಇಸ್ರೇಲ್ - ಪ್ಯಾಲೆಸ್ತೀನ್ ವಿವಾದದಿಂದ ಹೊರಗಿಟ್ಟು, ಎರಡು ರಾಷ್ಟ್ರಗಳೊಡನೆ ಹೆಚ್ಚು ಸಮತೋಲಿತವಾದ ಸ್ನೇಹವನ್ನು ಹೊಂದಿದೆ.

ಪ್ರಧಾನಿ ನರೇಂದ್ರ ಮೋದಿಯವರ ಅವಧಿಯಲ್ಲಿ ಭಾರತ - ಇಸ್ರೇಲ್ : 2014ರಲ್ಲಿ, ನರೇಂದ್ರ ಮೋದಿಯವರು ಭಾರತದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ, ಭಾರತ ಮತ್ತು ಇಸ್ರೇಲ್‌ಗಳ ನಡುವೆ ಸೌಹಾರ್ದ ಸ್ನೇಹ ಬೆಳೆಯತೊಡಗಿತು. ಮೋದಿಯವರ ಆಡಳಿತಕ್ಕೆ ಮೊದಲು, ಭಾರತ - ಇಸ್ರೇಲ್ ದ್ವಿಪಕ್ಷೀಯ ಸಂಬಂಧವನ್ನು ಆದಷ್ಟೂ ರಹಸ್ಯಮಯವಾಗಿ ಇಡಲಾಗಿತ್ತು.

ಬ್ರೂಕಿಂಗ್ಸ್ ಇನ್ಸ್ಟಿಟ್ಯೂಷನ್‌ನ ಇಂಡಿಯಾ ಪ್ರಾಜೆಕ್ಟ್ ನಿರ್ದೇಶಕರಾಸ ತನ್ವಿ ಮದನ್ ಅವರು 2016ರಲ್ಲಿ, "ಇಸ್ರೇಲಿ ಅಧಿಕಾರಿಗಳು ಮತ್ತು ವಿಶ್ಲೇಷಕರು, ಭಾರತ ಇಸ್ರೇಲ್ ಜೊತೆಗಿನ ಸಂಬಂಧವನ್ನು ಸದಾ ತೆರೆಯ ಮರೆಯಲ್ಲಿನ ಅನೈತಿಕ ಸಂಬಂಧದ ರೀತಿಯಲ್ಲಿ ರಹಸ್ಯವಾಗಿ ಇಡಲು ಪ್ರಯತ್ನಿಸುತ್ತದೆ ಎಂದು ಅಭಿಪ್ರಾಯ ಪಡುತ್ತಿದ್ದರು" ಎಂದಿದ್ದಾರೆ. ಇದರ ಹಿಂದೆ ಅರಬ್ ರಾಷ್ಟ್ರಗಳ ಜೊತೆಗಿನ ಭಾರತದ ಸಂಬಂಧ ಮತ್ತು ಭಾರತದ ಆಂತರಿಕ ರಾಜಕೀಯದ ಸೂಕ್ಷ್ಮತೆಗಳು ಸೇರಿದಂತೆ ಹಲವಾರು ಕಾರಣಗಳನ್ನು ನೀಡಲಾಗಿತ್ತು.

ಆದರೆ, ಭಾರತದಿಂದ ಸಚಿವರುಗಳು ಇಸ್ರೇಲ್‌ಗೆ ಭೇಟಿ ನೀಡಲು ಆರಂಭಿಸಿದ ಬಳಿಕ ಈ ಚಿತ್ರಣ ಬದಲಾಗತೊಡಗಿತು. ಜನವರಿ 2016ರಲ್ಲಿ ಭಾರತದ ವಿದೇಶಾಂಗ ಸಚಿವರಾಗಿದ್ದ ಸುಷ್ಮಾ ಸ್ವರಾಜ್ ಅವರು ಇಸ್ರೇಲ್‌ಗೆ ಭೇಟಿ ನೀಡಿದರು. ಅದಾದ ಬಳಿಕ, ಜುಲೈ 2017ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಇಸ್ರೇಲಿಗೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿ ಎನಿಸಿದರು.

ಇಸ್ರೇಲ್ ಜೊತೆಗಿನ ತನ್ನ ಬಾಂಧವ್ಯದ ಕುರಿತು ಈ ಹಿಂದಿನ ಎಲ್ಲ ಪ್ರಧಾನಿಗಳಿಗಿಂತಲೂ ಹೆಚ್ಚಾಗಿ ಮೋದಿಯವರು ಮಾತನಾಡಿದ್ದರೂ, ಅವರು ಒಂದು ಸೂಕ್ಷ್ಮ ಸಮತೋಲನವನ್ನು ಕಾಪಾಡಿಕೊಳ್ಳಬೇಕಾಗಿತ್ತು. ಫೆಬ್ರವರಿ 2018ರಲ್ಲಿ ಅವರು ವೆಸ್ಟ್ ಬ್ಯಾಂಕ್‌ಗೆ ಭೇಟಿ ನೀಡಿ, ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಎರಡೂ ಪ್ರಾಂತ್ಯಗಳಿಗೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿ ಎನಿಸಿದರು.

ಇದನ್ನೂ ಓದಿ:  ಜೆರುಸಲೇಮ್ ಮೇಲೆ ಹಮಾಸ್ ಉಗ್ರದಾಳಿ: ಇಸ್ರೇಲ್ - ಪ್ಯಾಲೆಸ್ತೀನ್ ಕದನದ ಮಧ್ಯೆ ಭಾರತದ ಸಂಕೀರ್ಣ ಪಾತ್ರ ಮತ್ತು ಪರಿಣಾಮಗಳು

ಮೋದಿಯವರ ಆಡಳಿತದ ಅವಧಿಯಲ್ಲಿ, ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಎರಡೂ ದೇಶಗಳ ಜೊತೆ ಭಾರತದ ಸಂಬಂಧ ಬಹಳಷ್ಟು ಉತ್ತಮಗೊಂಡಿದೆ. ಈ ಮೂಲಕ ಭಾರತ ಇಸ್ರೇಲ್ ಹಾಗೂ ಪ್ಯಾಲೆಸ್ತೀನ್ ಎರಡರ ಜೊತೆಗೂ ಸ್ವತಂತ್ರ ಸಂಬಂಧವನ್ನು ಹೊಂದಿದೆ ಎಂದು ಕುಗೆಲ್‌ಮನ್ ಅಭಿಪ್ರಾಯ ಪಟ್ಟಿದ್ದಾರೆ.

ಭಾರತ ಎರಡೂ ಪ್ರದೇಶಗಳೊಡನೆ ವ್ಯಾಪಾರ ಸಂಬಂಧ ಸ್ಥಾಪಿಸಿದ್ದು, ಮೋದಿಯವರ ನಾಯಕತ್ವದಡಿ ಭಾರತ - ಇಸ್ರೇಲ್ ವ್ಯಾಪಾರ ಮಹತ್ವದ ಅಭಿವೃದ್ಧಿ ಕಾಣುತ್ತಿದೆ. ಆದರೆ, ಭಾರತ ಇಸ್ರೇಲ್ ನಡುವಿನ ಸ್ನೇಹದ ಹೊರತಾಗಿಯೂ, ಈಗ ನಡೆಯುತ್ತಿರುವ ಯುದ್ಧದ ಸಂದರ್ಭದಲ್ಲಿ, ನೆತನ್ಯಾಹು ಭಾರತವನ್ನು ಇಸ್ರೇಲಿನ ಮಿತ್ರ ಎಂದು ಪರಿಗಣಿಸಿಲ್ಲ. ಇದು ಬಲಪಂಥೀಯ ಹಿಂದುತ್ವದ ಬೆಂಬಲಿಗರಿಗೆ ಅಸಮಾಧಾನ ಮೂಡಿಸಿದೆ.

ಆದರೆ, ಭಾರತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕೈಗೊಂಡಿರುವ ಹೆಚ್ಚು ಸಂಯೋಜಿತವಾದ, ಸ್ಥಿರವಾದ ನಿರ್ಧಾರ ಭಾರತದ ರಾಜತಾಂತ್ರಿಕ ಪಥವನ್ನು ಅಧ್ಯಯನ ನಡೆಸಿದವರಿಗೆ ಆಶ್ಚರ್ಯ ಮೂಡಿಸಿಲ್ಲ. ಭಾರತ ತನ್ನ ಸ್ಥಾನವನ್ನು ಬಳಸಿಕೊಂಡು, ಪ್ರಸ್ತುತ ಬಿಕ್ಕಟ್ಟಿನ ಸಂದರ್ಭದಲ್ಲಿ ಮಧ್ಯಸ್ಥಿಕೆ ವಹಿಸುವ ಸಾಮರ್ಥ್ಯ ಹೊಂದಿದೆ. "ಭಾರತ ಇಸ್ರೇಲಿಗಳು ಮತ್ತು ಪ್ಯಾಲೆಸ್ತೀನಿಯನ್ನರ ನಡುವೆ ಉತ್ತಮ ಸಂಬಂಧವನ್ನು ನಿರ್ವಹಿಸಿರುವುದರಿಂದ, ಭಾರತದ ಕುರಿತು ಅವೆರಡೂ ಪಕ್ಷಗಳು ಸದಭಿಪ್ರಾಯ ಹೊಂದಿವೆ" ಎಂದು ಕುಗೆಲ್‌ಮನ್ ವಿವರಿಸುತ್ತಾರೆ.

ಅವರ ಪ್ರಕಾರ, ಇಂತಹ ಒಂದು ಪಾತ್ರವನ್ನು ನಿರ್ವಹಿಸುವ ಸಂದರ್ಭದಲ್ಲೂ, ಭಾರತ ಬಿಕ್ಕಟ್ಟನ್ನು ಪರಿಹರಿಸುವ ನಿಟ್ಟಿನಲ್ಲಿ ರಹಸ್ಯಮಯವಾಗಿ ಮತ್ತು ಖಾಸಗಿಯಾಗಿ ಸಹಾಯಹಸ್ತ ಚಾಚಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News