ನೈರೋಬಿ: ಕೀನ್ಯಾ ರಾಜಧಾನಿ ನೈರೋಬಿಯಲ್ಲಿ ನಡೆದ ಉಗ್ರರ ದಾಳಿಗೆ ಸುಮಾರು 15 ಮಂದಿ ಸಾವನ್ನಪ್ಪಿರುವ ಘಟನೆ ಮಂಗಳವಾರ ನಡೆದಿದೆ. ಈ ದಾಳಿಯಲ್ಲಿ ಹಲವು ಮಂದಿ ಗಾಯಗೊಂಡಿದ್ದಾರೆ.
ಬಂದೂಕುಧಾರಿಯೊಬ್ಬ ಹೋಟೆಲ್ ಮತ್ತು ಆಫೀಸ್ ಕಾಂಪ್ಲೆಕ್ಸ್ ಆವರಣದಲ್ಲಿದ್ದ ವಾಹನಗಳ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿದ ಬಳಿಕ ಪರಿಸ್ಥಿತಿ ಗಂಭೀರವಾಗಿತ್ತು. ಇದಕ್ಕೂ ಮುನ್ನ ಉಗ್ರನೋರ್ವ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದ. ಈ ಘಟನೆಯಿಂದ ಜನತೆ ಭಯದಿಂದ ಚೆಲ್ಲಾಪಿಲ್ಲಿಯಾಗಿ ಓಡಿದರೆ, ಮತ್ತೊಂದೆಡೆ ವಾಹನಗಳು ಹತ್ತಿ ಉರಿದಿದ್ದವು. ಸದ್ಯ ನೈರೋಬಿಯಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ತರಲಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯಲ್ಲಿ 11 ಮಂದಿ ಕೀನ್ಯಾದವರು ಮತ್ತು ಓರ್ವ ಅಮೇರಿಕನ್, ಓರ್ವ ಬ್ರಿಟನ್ ಪ್ರಜೆ ಸಾವನ್ನಪ್ಪಿದ್ದಾರೆ. ಉಳಿದಿಬ್ಬರು ಯಾರು ಎಂಬುದು ಪತ್ತೆಯಾಗಿಲ್ಲ ಎಂದು ರಾಯ್ಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭಿರವಾಗಿದೆ ಎನ್ನಲಾಗಿದೆ.