ಮುಂದಿನ ಯಾವುದೇ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲ್ಲ: ಸುದೀಪ್

ತಾವು ಮುಂದಿನ ಯಾವುದೇ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುವುದಿಲ್ಲ ಎಂದು ನಟ ಕಿಚ್ಚ ಸುದೀಪ್ ಹೇಳಿದ್ದಾರೆ.   

Last Updated : May 8, 2018, 07:18 PM IST
ಮುಂದಿನ ಯಾವುದೇ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲ್ಲ: ಸುದೀಪ್ title=

ಬೆಂಗಳೂರು: ಕರ್ನಾಟಕ ಚುನಾವಣೆ ಹಿನ್ನೆಲೆಯಲ್ಲಿ ಕೆಲವು ಅಭ್ಯರ್ಥಿಗಳ ಪರ ಪ್ರಚಾರ ಮಾಡಿದ್ದನ್ನು ಹಲವರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ತಾವು ಮುಂದಿನ ಯಾವುದೇ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುವುದಿಲ್ಲ ಎಂದು ನಟ ಕಿಚ್ಚ ಸುದೀಪ್ ಹೇಳಿದ್ದಾರೆ. 

ಈ ಬಗ್ಗೆ ಟ್ವೀಟ್ ಮಾಡಿರುವ ಸುದೀಪ್, "ನಾನು ಪ್ರಚಾರಕ್ಕೆ ಸೇರಿದ್ದು ಸುಮಾರು ವರ್ಷಗಳ ಪರಿಚಯದ ನನ್ನ ಕೆಲವು ಗೆಳೆಯರಿಗಾಗಿ. ಇವರು ಒಂದಲ್ಲ ಒಂದು ರೀತಿ ನನ್ನೊಟ್ಟಿಗೆ ನನ್ನ ಕಠಿಣ ಸಮಯದಲ್ಲಿ ನಿಂತವರು. ಸಣ್ಣದು ಅಥವಾ ದೊಡ್ಡದು ಎಂಬುದು ವಿಷಯವಲ್ಲ; ಅವರು ಅಂದು ನನ್ನೊಂದಿಗಿದ್ದು ಸಾಥ್ ನೀಡಿದ್ದು ಮುಖ್ಯ ವಿಷಯ. ಈಗ ಅವರಿಗಾಗಿ ನಾನು ಅಲ್ಲಿರುವುದು ಬಹುಶಃ ಅವರು ನನ್ನಿಂದ ಪಡೆಯುವ ಒಂದು ಸಣ್ಣ ಬೆಂಬಲ. ಇದು ಕನಿಷ್ಠ ನಾನು ಅವರಿಗಾಗಿ ಮಾಡಬಹುದಾದದ್ದು...ಅದರಲ್ಲಿ ಯಾವುದೇ ವಿಷಾದವಿಲ್ಲ‌" ಎಂದಿದ್ದಾರೆ.

"ಇನ್ಮುಂದೆ ನನ್ನ ಗೆಳೆಯರ ಹಾಗು ಅಭಿಮಾನಿಗಳ ಸಲುವಾಗಿ ಯಾವುದೇ ಪ್ರಚಾರದಲ್ಲಿ ಭಾಗವಹಿಸುವುದಿಲ್ಲ. ಎಲ್ಲರಿಗೂ ನನ್ನ ಅವಶ್ಯಕತೆ ಇದೆ ಹಾಗು ನನ್ನ ಉಪಸ್ಥಿತಿಯಿಂದ ಫಲಿತಾಂಶಗಳು ಬದಲಾಗುತ್ತದೆ ಎಂದು ನಾನು ನನ್ನನ್ನು ಅಂತಹ ದೊಡ್ಡ ಮಟ್ಟಕ್ಕೆ ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ನಾನು ಒಬ್ಬ ಕಲಾವಿದ, ನನ್ನ ಪಯಣದಲ್ಲಿ ನನ್ನೊಟ್ಟಿಗೆ ಇದ್ದಂತಹ ಗೆಳೆಯರು ಹಾಗು ಅಭಿಮಾನಿಗಳ ಅಭಿಪ್ರಾಯ ಮುಖ್ಯವಾಗುತ್ತದೆ. ಇದು ನಾನು ತೆಗೆದುಕೊಳ್ಳುತ್ತಿರುವ ಕಠಿಣ ನಿರ್ಧಾರ,,,,ಆದರೂ,,ಈ ನಿರ್ಧಾರ ನನ್ನೊಟ್ಟಿಗೆ ನಿಂತ ನನ್ನ ಅಭಿಮಾನಿಗಳು ಹಾಗು ಗೆಳೆಯರ ಸಲುವಾಗಿ ಕೈಗೊಳ್ಳುತ್ತಿದ್ದೇನೆ... ನನ್ನ ಯಾವುದೇ ನಡೆಯಿಂದ ಅವರಿಗೆ ನೋವುಂಟು ಮಾಡಲು ಇಚ್ಛಿಸುವುದಿಲ್ಲ..." ಎಂದು ಸುದೀಪ್ ಹೇಳಿದ್ದಾರೆ. 

ಬಳ್ಳಾರಿ ನಗರ ಹಾಗೂ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳಾದ ಸೋಮಶೇಖರ ರೆಡ್ಡಿ, ಬಿ.ಶ್ರೀರಾಮುಲು ಪರ ಸೋಮವಾರ ಸುದೀಪ್ ಪ್ರಚಾರ ನಡೆಸಿದ್ದರು. ಅಲ್ಲದೆ, ಮಾಜಿ ಸಚಿವ ಜನಾರ್ಧನ ರೆಡ್ಡಿ ಮನೆಗೆ ತೆರಳಿ ಅವರ ಕುಟುಂಬದ ಕುಶಲೋಪರಿ ವಿಚಾರಿಸಿದ್ದರು. ಸುದೀಪ್ ಈ ರಾಜಕಾರಣಿಗಳ ಪರ ಪ್ರಚಾರ ಮಾಡಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

Trending News