ರಾಮನಗರ: ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮುಖ್ಯಮಂತ್ರಿ ಅಭ್ಯರ್ಥಿ ಹೆಚ್.ಡಿ.ಕುಮಾರಸ್ವಾಮಿ ಅವರು ಇಂದು ಮಾಗಡಿ ವಿಧಾನಸಭಾ ಕ್ಷೇತ್ರದ ಕೇತಗಾನಹಳ್ಳಿ ಮತಗಟ್ಟೆಯಲ್ಲಿ ತಮ್ಮ ಪತ್ನಿ ಅನಿತಾ ಕುಮಾರಸ್ವಾಮಿ ಅವರೊಂದಿಗೆ ಮತ ಚಲಾಯಿಸಿದರು.
ಈ ಸಂದರ್ಭದಲ್ಲಿ ANI ಜತೆ ಮಾತನಾಡಿದ ಅವರು, ಈ ಬಾರಿ ಚುನಾವಣೆಯಲ್ಲಿ ಜೆಡಿಎಸ್ ಬಹುಮತ ಗಳಿಸಲಿದೆ. ಜನರು ಈ ಬಾರಿ ಜೆಡಿಎಸ್ ಪಕ್ಷವನ್ನು ಗೆಲ್ಲಿಸಬೇಕೆಂದು ನಿರ್ಧರಿಸಿದ್ದಾರೆ. ಮತದಾರರ ಆಶೀರ್ವಾದ ನಮ್ಮ ಮೇಲಿದೆ. ಮೇ 15ರಂದು ಬರುವ ಫಲಿತಾಂಶ ಎಲ್ಲರಲ್ಲೂ ಆಶ್ಚರ್ಯ ಮೂಡಿಸಲಿದೆ ಎಂದು ಹೇಳಿದರು.
ಚುನಾವಣಾ ಪೂರ್ವ ಸಮೀಕ್ಷೆಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ ಅವರು, "ಭಾರತೀಯ ಜನತಾ ಪಕ್ಷದ ಪರವಾಗಿರುವ ಎಲ್ಲಾ ಸಮೀಕ್ಷೆಗಳೂ ತಲೆಕೆಳಗಾಗಲಿದ್ದು, ನಾನು ಮುಂದಿನ ಮುಖ್ಯಮಂತ್ರಿಯಾಗುವ ಬಗ್ಗೆ ವಿಶ್ವಾಸವಿದೆ" ಎಂದು ಹೇಳಿದರು.
"ಈ ಚುನಾವಣೆ ನನಗೆ ನಿರ್ಣಾಯಕವಲ್. ಆದರೆ ಇದು ರಾಜ್ಯದ ಜನರಿಗೆ ನಿರ್ಣಾಯಕವಾಗಿದೆ. ಕರ್ನಾಟಕದ ಜನರು ಈಗಾಗಲೇ ಸಿದ್ದರಾಮಯ್ಯ, ಯಡಿಯೂರಪ್ಪ ಅವರಿಗೆ ಅವಕಾಶ ನೀಡಿದ್ದಾರೆ. ಇನ್ನು, ಉಳಿದಿರುವುದು ನಾನೊಬ್ಬನೇ. ನಾನೇ ಅತ್ಯುತ್ತಮ ಅಭ್ಯರ್ಥಿ" ಎಂದು ಕುಮಾರಸ್ವಾಮಿ ಹೇಳಿದರು.
ಚುನಾವಣೆಯಲ್ಲಿ ಜೆಡಿಎಸ್ ಅಲ್ಪ ಸ್ಥಾನಗಳನ್ನು ಗಳಿಸಲಿದೆಯೇ ಎಂಬ ಪ್ರಶ್ನೆಗೆ ಖಡಕ್ ಉತ್ತರ ನೀಡಿದ ಕುಮಾರಸ್ವಾಮಿ, ಅಂತಃ ಪರಿಸ್ಥಿತಿ ಉದ್ಭವಿಸುವುದಿಲ್ಲ. ಜೆಡಿಎಸ್ ಮ್ಯಾಜಿಕ್ ನಂಬರ್ಗಳನ್ನು ಪಡೆಯಲಿದೆ ಎಂದರು.
ಮತದಾನಕ್ಕೂ ಮೊದಲು, ಹೆಚ್.ಡಿ.ಕುಮಾರಸ್ವಾಮಿ ಅವರು ಪತ್ನಿ ಅನಿತಾ ಕುಮಾರಸ್ವಾಮಿ ಅವರೊಂದಿಗೆ ಬೆಂಗಳೂರಿನ ಶ್ರೀ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮಿಜಿಯನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿ ಸಿದ್ದರಾಮಯ್ಯ ಅವರಂತೆ, ಹೆಚ್.ಡಿ.ಕುಮಾರಸ್ವಾಮಿ ಸಹ ರಾಮನಗರ ಮತ್ತು ಚನ್ನಪಟ್ಟಣ ಎರಡೂ ಕ್ಷೇತ್ರಗಳಿಂದ ಸ್ಪರ್ಧಿಸಿದ್ದಾರೆ. ಜೆಡಿಎಸ್ ಪ್ರಾಬಲ್ಯವಿರುವ ರಾಮನಗರ ಕ್ಷೇತ್ರದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಅವರು 2008 ಮತ್ತು 2013 ರ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಆದರೆ ಈ ಬಾರಿ ಕರ್ನಾಟಕದಲ್ಲಿ ಜೆಡಿಎಸ್ ಸರ್ಕಾರ ರಚಿಸಬೇಕೆಂದು ನಿರ್ಧರಿಸಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳಿಗೆ ಕಠಿಣ ಸ್ಪರ್ಧೆ ನೀಡಲಿದೆ.