ಬೆಂಗಳೂರು: 2019ರಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಮೋದಿ ಪ್ರಧಾನಿ ಆಗಲ್ಲ, ಕಾಂಗ್ರೆಸ್ ಪಕ್ಷ ಬಹುಮತ ಗಳಿಸಿದರೆ ತಾವೇ ಪ್ರಧಾನಿ ಆಗಬಹುದು ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪ್ರಚಾರದಲ್ಲಿ ತೊಡಗಿರುವ ರಾಹುಲ್ ಗಾಂಧಿ, ತಾವು ಪ್ರಧಾನಿ ಅಭ್ಯರ್ಥಿಯೇ ಎಂದು ವರದಿಗಾರರೊಬ್ಬರು ಕೇಳಿದ ಪ್ರಸಹನೆಗೆ ಉತ್ತರಿಸುತ್ತಾ, 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತಾವೇ ಪ್ರಧಾನಿಯಾಗಬಹುದು ಎಂದು ರಾಹುಲ್ ಹೇಳಿದರು.
ನಂತರ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್, ಬಿಜೆಪಿ ಆರ್ಎಸ್ಎಸ್ ಭಾರತದ ಪ್ರತಿಯೊಂದು ಸಂಸ್ಥೆಯನ್ನು ವ್ಯವಸ್ಥಿತವಾಗಿ ಟಾರ್ಗೆಟ್ ಮಾಡುತ್ತಿವೆ. ಕಾಂಗ್ರೆಸ್ ಇದಕ್ಕೆ ಪ್ರತಿರೋಧ ವ್ಯಕ್ತಪಡಿಸುತ್ತದೆ. ಭ್ರಷ್ಟಾಚಾರದ ಬಗ್ಗೆ ಅಷ್ಟೆಲ್ಲಾ ಮಾತನಾಡುವ ಪ್ರಧಾನಿ ಮೋದಿ ಅವರೇ, ಭ್ರಷ್ಟಾಚಾರ ಆರೋಪದಲ್ಲಿ ಜೈಲಿಗೆ ಹೋಗಿ ಬಂದವರನ್ನೇಕೆ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿದ್ದೀರಿ ಎಂದು ಪ್ರಶ್ನಿಸಿದರು.
ಮುಂದುವರೆದು, ಕರ್ನಾಟಕದ ಜನತೆಯ 35 ಸಾವಿರ ಕೋಟಿ ರೂ. ಹಣ ಲೂಟಿ ಮಾಡಿದ ರೆಡ್ಡಿ ಸಹೋದರರಿಗೆ ಟಿಕೆಟ್ ನೀಡಿದ್ದೀರಿ. ನಿಮಗೆ ಇತರ ಅಭ್ಯರ್ಥಿಗಳ್ಯಾರೂ ಸಿಗಲಿಲ್ಲವೇ? ಯುವಜನರಿಗೆ ಉದ್ಯೋಗ ಒದಗಿಸುವ ಭರವಸೆ ಇನ್ನೂ ಭರವಸೆಯಾಗೇ ಉಳಿದಿದೆ ಯಾಕೆ? ಎಚ್‌ಎಎಲ್ ಕರ್ನಾಟಕದ್ದು, ಈ ಹಗರಣದ ಮೂಲಕ ಕನ್ನಡಿಗರಿಗೆ ಪ್ರಧಾನಿ ಮೋಸ ಮಾಡಿದ್ದೇಕೆ? ಇದಕ್ಕೆಲ್ಲಾ ಪ್ರಧಾನಿ ಮೋದಿ ಉತ್ತರಿಸಬೇಕು ಎಂದು ರಾಹುಲ್ ಗಾಂಧಿ ಕಿಡಿ ಕಾರಿದರು.