ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ರಾಷ್ಟ್ರೀಯ ಪಕ್ಷಗಳು ಪ್ರಣಾಳಿಕೆ ಬಿಡುಗಡೆ ಮಾಡುತ್ತಿವೆ. ಹಾಗೇ ರಾಷ್ಟೀಯ ಪಕ್ಷಗಳಿಗಿಂತ ನಾವೇನೂ ಕಡಿಮೆಯಿಲ್ಲ ಅಂತ ಕನ್ನಡ ಚಳವಳಿ ವಾಟಾಳ್ ಪಕ್ಷ ಇಂದು ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಆದರೆ, ಈ ಪ್ರಣಾಳಿಕೆ ಬಹಳ ಡಿಫರೆಂಟ್ ಆಗಿದೆ.
ಇಲ್ಲಿನ ವುಡ್ ಲ್ಯಾಂಡ್ ಹೋಟೆಲ್ ನಲ್ಲಿ ಪಕ್ಷದ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್, ರಾಷ್ಟ್ರೀಯ ಪಕ್ಷಗಳ ನಾಯಕರಾದ ನರೇಂದ್ರ ಮೋದಿ, ಅಮಿತ್ ಷಾ, ರಾಹುಲ್ ಗಾಂಧಿಗೆ ಕರ್ನಾಟಕದ ಬಗ್ಗೆ ಅರಿವಿಲ್ಲ. ಕರ್ನಾಟಕದಲ್ಲಿ ಕನ್ನಡದಲ್ಲಿ ಪ್ರಚಾರ ಮಾಡದೇ ಅವರವರ ಭಾಷೆಯಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಇಂತವರಿಂದ ಶಾಸನ ಸಭೆಯ ಗಾಂಭೀರ್ಯ ಕಡಿಮೆಯಾಗುತ್ತದೆ ಎಂದು ವಾಟಾಳ್ ನಾಗರಾಜ್ ಟೀಕಿಸಿದರು. ಇದೇ ಸಂದರ್ಭದಲ್ಲಿ ಪಕ್ಷದ ಪ್ರಣಾಳಿಕೆಯ ಜೊತೆಗೆ ಕೆಲವು ಬೇಡಿಕೆಗಳನ್ನು ಈಡೇರಿಸಲು ವಾಟಾಳ್ ಆಗ್ರಹಿಸಿದರು.
ವಾಟಾಳ್ ಪಕ್ಷದ ಪ್ರಣಾಳಿಕೆ ಹೈಲೈಟ್ಸ್
* ಬಡ ಮತ್ತು ಮಧ್ಯಮ ವರ್ಗದವರಿಗೆ ಉಚಿತ ಹೇರ್ ಕಟ್ಟಿಂಗ್, ಶೇವಿಂಗ್ ವ್ಯವಸ್ಥೆ
* ಚಾಮರಾಜನಗರದ ಸಮಗ್ರ ಅಭಿವೃದ್ಧಿಗೆ ಒತ್ತು
* ಕತ್ತೆಗಳ ಅಭಿವೃದ್ಧಿ ನಿಟ್ಟಿನಲ್ಲಿ ಅಭಿವೃದ್ಧಿ ಮಂಡಳಿ ಸ್ಥಾಪನೆ
* ಆಟೋ ರಿಕ್ಷಾ ಚಾಲಕರಿಗೆ ರೈನ್ ಕೋಟ್
* ನಗರದಲ್ಲಿ ಕನಿಷ್ಠ 20 ಸಾವಿರ ಶೌಚಾಲಯ
* ಅಂಗನವಾಡಿ ಕಾರ್ಯಕರ್ತೆಯರ ವೇತನ ಹೆಚ್ಚಳ
* ಕರ್ನಾಟಕದಲ್ಲಿ ಕನ್ನಡಿಗರಿಗೆ ಮಾತ್ರ ಉದ್ಯೋಗ
* ಉಚಿತ ಔಷಧಿ ವ್ಯವಸ್ಥೆ
* ಉಚಿತ ಕಲ್ಯಾಣ ಮಂಟಪ
* ಬಡ ಹೆಣ್ಣುಮಕ್ಕಳ ಮದುವೆಗೆ ೧ ಲಕ್ಷ ರೂ. ಹಣ
* ಕತ್ತೆಯನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಣೆ
* ಪ್ರೇಮಿಗಳ ದಿನಾಚರಣೆಗೆ ಸರ್ಕಾರಿ ರಜೆ ಘೋಷಣೆ
* ಪ್ರೇಮ ವಿವಾಹಕ್ಕೆ 50000 ಗೌರವ ಧನಸಹಾಯ
* ರಾಜಕುಮಾರ್, ಬೇಂದ್ರೆ, ಮಾಸ್ತಿ, ಗುಬ್ಬಿವೀರಣ್ಣ ಮುಂತಾದವರ ಪ್ರತಿಮೆ ನಿರ್ಮಾಣ