ಚಿಕ್ಕಮಗಳೂರು : ರಾಜ್ಯದಲ್ಲಿ ಯಾವ ಪಕ್ಷವೂ ಬಹುಮತ ಗಳಿಸದಂತಹ ಅನಿವಾರ್ಯ ಸಂದರ್ಭ ಎದುರಾದರೆ, ಜೆಡಿಎಸ್ ಕಾರ್ಯೋದ್ದೇಶಗಳ ಅನುಷ್ಠಾನಕ್ಕೆ ಒಪ್ಪಿದವರೊಂದಿಗೆ ಸಮ್ಮಿಶ್ರ ಸರ್ಕಾರ ರಚನೆಗೆ ಮುಂದಾಗುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಚುನಾವಣೆ ಹಿನ್ನೆಲೆಯಲ್ಲಿ ನಗರದ ಸುಭಾಶ್ ಚಂದ್ರಬೋಸ್ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು ನಡೆದ ವಿಕಾಸಪರ್ವ ಯಾತ್ರೆಯಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು, ನಾನು ಇದುವರೆಗೂ ಯಾವುದೇ ಚುನಾವಣಾ ಸಮೀಕ್ಷೆಗಳ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಆದರೂ, ಎಲ್ಲಾ ಸಮೀಕ್ಷೆಗಳು ಜೆಡಿಎಸ್ 40 ಸ್ಥಾನಗಳನ್ನು ಪಡೆಯಲಿದೆ ಎಂದೇ ಹೇಳಿವೆ. ಒಂದು ವೇಳೆ ಜೆಡಿಎಸ್ ಪಕ್ಷಕ್ಕೆ 40 ಸ್ಥಾನಗಳು ಬಂದರೂ ಸಹ, ಬಿಜೆಪಿ ಆಗಲೀ, ಕಾಂಗ್ರೆಸ್ ಆಗಲೀ ನಮ್ಮನ್ನು ಬಿಟ್ಟು ಸರ್ಕಾರ ರಚನೆ ಮಾಡುವುದು ಸಾಧ್ಯವೇ ಇಲ್ಲ ಎಂದು ಕುಮಾರಸ್ವಾಮಿ ಹೇಳಿದರು.
"ಸಮೀಕ್ಷೆಗಳ ಪ್ರಕಾರ ಒಂದು ವೇಳೆ ಜೆಡಿಎಸ್ 40 ಸ್ಥಾನಗಳನ್ನು ಪಡೆದರೂ, ನಾನು ಮುಖ್ಯಮಂತ್ರಿ ಸ್ಥಾನ ನೀಡಿ ಎಂದು ಯಾರನ್ನೂ ಕೇಳುವುದಿಲ್ಲ. ನನ್ನ ಲೆಕ್ಕಾಚಾರದ ಪ್ರಕಾರ ಜೆಡಿಎಸ್ ಈ ಬಾರಿ ಚುನಾವಣೆಯಲ್ಲಿ 113 ಸ್ಥಾನಗಳನ್ನು ಗೆಲ್ಲಲಿದೆ. ಒಂದು ವೇಳೆ ಅತಂತ್ರ ಸ್ಥಿತಿ ನಿರ್ಮಾಣವಾದರೆ ನಮ್ಮ ಪಕ್ಷದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವವರ ಜತೆ ಕೈಜೋಡಿಸುತ್ತೇವೆ" ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಇದುವರೆಗೂ ಪಕ್ಷ ಬಹುಮತ ಗಳಿಸದಿದ್ದರೆ, ಕಾಂಗ್ರೆಸ್ ಪಕ್ಷದೊಂದಿಗಾಗಲೀ ಅಥವಾ ಬಿಜೆಪಿ ಜತೆಯಾಗಲೀ ಕೇ ಜೋಡಿಸುವ ಮಾತೆ ಇಲ್ಲ. ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತು ರಾಜ್ಯದ ಜನತೆಯ ಹಿತ ಕಾಪಾಡುತ್ತೇವೆ ಎನ್ನುತ್ತಿದ್ದ ಕುಮಾರಸ್ವಾಮಿ ಅವರು, ಇಂದು ಸಮ್ಮಿಶ್ರ ಸರ್ಕಾರದ ಬಗ್ಗೆ ಹೇಳಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.