ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಪತ್ತೆಯಾಗಿರುವ ಬೃಹತ್ ಡ್ರಗ್ಸ್ ಮಾಫಿಯಾದಲ್ಲಿ ಕನ್ನಡ ಚಿತ್ರರಂಗದ ನಟ-ನಟಿಯರು ಭಾಗಿಯಾಗಿದ್ದಾರೆಂದು ಭಾರೀ ಮಟ್ಟದ ಚರ್ಚೆ ನಡೆಯುತ್ತಿದೆ. ಈಗ ಇದೇ ಹಿನ್ನೆಲೆಯಲ್ಲಿ 15 ಮಂದಿ ನಟ-ನಟಿಯರಿಗೆ ಸಿಸಿಬಿ ನೊಟೀಸ್ ನೀಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಸ್ಯಾಂಡಲ್ ವುಡ್ ನಲ್ಲಿ ಬುಗಿಲೆದ್ದಿರುವ ಡ್ರಗ್ಸ್ ಮಾಫಿಯಾದ (Drugs Mafia) ಸದ್ದು ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ.
ಅದರಲ್ಲೂ ಕೆಲವರು ಕನ್ನಡ ಚಿತ್ರರಂಗದಲ್ಲಿ 'ಅಂಥದ್ದೇನೂ ಇಲ್ಲ' ಎಂದು, ಕೆಲವರು 'ಕನ್ನಡ ಚಿತ್ರರಂಗ ಕ್ಲೀನ್ ಆಗಬೇಕು' ಎಂದು ಪರ-ವಿರೋಧ ವಾಗ್ವಾದ ನಡೆಸುತ್ತಿರುವ ಬೆನ್ನಲ್ಲೇ 15 ಮಂದಿ ನಟ-ನಟಿಯರಿಗೆ ನೀಡಲಾಗುತ್ತೆ. ಅವರಿಗೆ ಸಂಕಷ್ಟ ಶುರುವಾಗುತ್ತೆ ಎಂದು ಹೇಳಲಾಗುತ್ತಿದೆ.
ಬೆಂಗಳೂರಿನಲ್ಲಿ ಪತ್ತೆಯಾಗಿರುವ ಬೃಹತ್ ಡ್ರಗ್ಸ್ (Drugs) ಮಾಫಿಯಾದ ಬಗ್ಗೆ ವಿಚಾರಣೆ ನಡೆಸುತ್ತಿರುವ ಸಿಟಿ ಕ್ರೈಂ ಬ್ರಾಂಚ್ (CCB) ಪೊಲೀಸರು ಈಗಾಗಲೇ ಮಾಹಿತಿ ಕಲೆಹಾಕಿದ್ದಾರೆ. ಅದರ ಆದಾರದ ಮೇಲೆ 15 ಮಂದಿ ನಟ-ನಟಿಯರಿಗೆ ಸಿಸಿಬಿ ನೊಟೀಸ್ ನೀಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಪ್ರಮುಖವಾಗಿ ನಿರ್ದೇಶಕ ಇಂದ್ರಜಿತ್ ಲಂಕೇಶ್ (Indrajith Lankesh) ಸೋಮವಾರ ವಿಚಾರಣೆ ವೇಳೆ ಕೊಟ್ಟಿರುವ ಮಾಹಿತಿ ಮತ್ತು ದಾಖಲೆಗಳನ್ನು ಆಧರಿಸಿ 15 ಮಂದಿ ನಟ-ನಟಿಯರ ಹಿನ್ನೆಲೆಗಳನ್ನು ಕಲೆ ಹಾಕಲಾಗುತ್ತಿದೆ. ಮಾಹಿತಿಗಳು ಸಂಪೂರ್ಣವಾಗಿ ತಿಳಿದುಬಂದ ಬಳಿಕ ನೊಟೀಸ್ ನೀಡಲಾಗುತ್ತದೆ ಎನ್ನುತ್ತವೆ ಪೊಲೀಸ್ ಮೂಲಗಳು.
ಸೋಮವಾರ ವಿಚಾರಣೆಗೆ ಹಾಜರಾಗಿದ್ದ ಇಂದ್ರಜಿತ್ ಲಂಕೇಶ್, ಡ್ರಗ್ಸ್ ಜಾಲದಲ್ಲಿ ಕನ್ನಡ ಚಿತ್ರರಂಗದ 15 ಮಂದಿ ಭಾಗಿಯಾಗಿದ್ದಾರೆಂದು ಹೇಳಿ ಅವರ ಹೆಸರುಗಳನ್ನು ತಿಳಿಸಿದ್ದಾರೆ ಎನ್ನಲಾಗಿದೆ. ಡ್ರಗ್ಸ್ ಜಾಲದ ಸುದ್ದಿ ಸ್ಫೋಟಗೊಳ್ಳುತ್ತಿದ್ದಂತೆ ಮಾಧ್ಯಮದ ಮುಂದೆ ಎದುರಾದ ಇಂದ್ರಜಿತ್ ಲಂಕೇಶ್ 'ಪೊಲೀಸರು ರಕ್ಷಣೆ ನೀಡಿ ಮಾಹಿತಿ ಕೇಳಿದರೆ ಕೊಡಲು ಸಿದ್ದ' ಎಂದಿದ್ದರು. ಅದೇ ರೀತಿ ನಿನ್ನೆ ಮಾಹಿತಿಯನ್ನು ಒದಗಿಸಿದ್ದಾರೆ.
ಡಿಸಿಪಿ,ಎಸಿಪಿ, ಇನ್ಸ್ ಪೆಕ್ಟರ್ ಗಳ ಜೊತೆ ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್ ಸೋಮವಾರ ಇಂದ್ರಜಿತ್ ಲಂಕೇಶ್ ಅವರನ್ನು ವಿಚಾರಣೆಗೊಳಪಡಿಸಿದ್ದರು. ಇಂದ್ರಜಿತ್ ಲಂಕೇಶ್ ಹೇಳಿರುವ ಆ 15 ಮಂದಿ ನಟ-ನಟಿಯರು ಯಾರು? ಅವರ ಪಾತ್ರ ಏನು? ಅವರ ಪ್ರತಿಕ್ರಿಯೆ ಏನು? ಈ ಪ್ರಕರಣ ಮತ್ಯಾವ ರೀತಿ ಮೊಗ್ಗಲು ಬದಲಿಸುತ್ತೆ ಎಂಬುದೇ ಸದ್ಯದ ಕುತೂಹಲ.