ಬೆಂಗಳೂರು: ಹಿರಿಯ ಖ್ಯಾತ ನಟ, ನಿರ್ದೇಶಕ ಕಾಶಿನಾಥ್ ಇಂದು ಬೆಳಿಗ್ಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಅನಾರೋಗ್ಯದಿಂದ ನರಳುತ್ತಿದ್ದ ಅವರು ಕಳೆದ ಎರಡು ದಿನಗಳಿಂದ ಶ್ರೀ ಶಂಕರ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ಇಹಲೋಕ ತ್ಯಜಿಸಿದ್ದಾರೆ. ಇವರು ಅಲೋಕ್ ಕಾಶಿನಾಥ್ ಮತ್ತು ಅಮೃತವರ್ಷಿಣಿ ಕಾಶಿನಾಥ್ ಎಂಬ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ತಮ್ಮ ನಟನೆ, ನಿರ್ದೇಶನ, ಸಂಗೀತ ನಿರ್ದೇಶನ ಹಾಗೂ ಚಿತ್ರ ನಿರ್ಮಾಣದಲ್ಲಿ ತಮ್ಮ ಕೈಚಳಕ ತೋರಿಸಿರುವ ಕಾಶಿನಾಥ್ ಕುಂದಾಪುರ ಸಮೀಪದ ಕೋಟೇಶ್ವರದಲ್ಲಿ ಮಧ್ಯಮ ವರ್ಗದ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು.
ಕನ್ನಡ ಚಲನಚಿತ್ರ ಉದ್ಯಮದಲ್ಲಿ ವಿಭಿನ್ನ ಶೈಲಿಯ ಚಿತ್ರಗಳನ್ನು ತರುತ್ತಿದ್ದ ಕಾಶಿನಾಥ್ ಯುವಕರಿಗೆ ಸಾಕಷ್ಟು ಅವಕಾಶ ನೀಡುತ್ತಿದ್ದರು. ಹೀಗೆ ಇವರ ಗರಡಿಯಿಂದ ಬಂದವರು ಇಂದು ಚಿತ್ರರಂಗದಲ್ಲಿ ಸಾಕಷ್ಟು ಜನಪ್ರಿಯರಾಗಿದ್ದಾರೆ. ಹೆಸರಾಂತ ನಟ, ನಿರ್ದೇಶಕ ಉಪೇಂದ್ರ, ಮನೋಹರ್, ಸುನಿಲ್ ಕುಮಾರ್ ದೇಸಾಯಿ ಹೀಗೆ ಹಲವರು ಇವರ ಗರಡಿಯಲ್ಲಿ ಪಳಗಿದವರು.
ಭಾರತೀಯ ಸಮಾಜದಲ್ಲಿ ನಿಷೇಧಾತ್ಮಕವಾಗಿ ಪರಿಗಣಿಸಲ್ಪಟ್ಟ ವಿಷಯಗಳನ್ನು ತೆಗೆದುಕೊಂಡು ನಿರ್ಮಿಸುತ್ತಿದ್ದ ಇವರ ಚಿತ್ರಗಳು ಎಲ್ಲರನ್ನೂ ಆಕರ್ಷಿಸುತ್ತಿದ್ದವು. ಟೀಕೆಗಳ ಹೊರತಾಗಿಯೂ, ಅವರ ಚಲನಚಿತ್ರಗಳು ಸಮಾಜ ಮತ್ತು ಉದ್ಯಮದ ಮೇಲೆ ಸಾಕಷ್ಟು ಪ್ರಭಾವ ಬೀರಿವೆ.
'ಚೌಕ' ಚಿತ್ರದಲ್ಲಿಯೂ ಸಹ ತಮ್ಮ ಅತ್ಯದ್ಭುತ ನಟನೆ ತೋರಿಸಿದ್ದ ಕಾಶಿನಾಥ್ ಅವರ 'ಅಪ್ಪ ಐ ಲವ್ ಯು' ಹಾಡು ಹೆಚ್ಚು ಜನಪ್ರಿಯವಾಗಿತ್ತು.