ಶಾಹೀನ್ ಬಾಗ್ ಫೈರಿಂಗ್ ಕುರಿತು ಗಂಭೀರ ಹೇಳಿಕೆ ನೀಡಿದ ಸೋನಂ ಕಪೂರ್

ಶನಿವಾರ ನಡೆದ ಈ ಘಟನೆಯ ಬಳಿಕ ಧರಣಿ ನಡೆಸುತ್ತಿರುವವರಲ್ಲಿ ಆಕ್ರೋಶ ಭುಗಿಲೆದ್ದಿದ್ದು, ಜನರು ದೆಹಲಿ ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.  

Updated: Feb 2, 2020 , 05:41 PM IST
ಶಾಹೀನ್ ಬಾಗ್ ಫೈರಿಂಗ್ ಕುರಿತು ಗಂಭೀರ ಹೇಳಿಕೆ ನೀಡಿದ ಸೋನಂ ಕಪೂರ್

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ನಡೆಸಲಾಗುತ್ತಿರುವ ಪ್ರತಿಭಟನೆಗಳಿಗೆ ಕೇಂದ್ರ ಬಿಂದುವಾಗಿರುವ ಶಾಹೀನ್ ಬಾಗ್ ನಲ್ಲಿ ಶನಿವಾರ ಸಂಜೆ ಯುವಕನೋರ್ವ ಫೈರಿಂಗ್ ನಡೆಸಿದ್ದು, ಬಳಿಕ ಪರಿಸರದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಘಟನೆಯ ವೇಳೆ ಸ್ಥಳದಲ್ಲಿದ್ದ ಪೊಲೀಸರು ಆ ಯುವಕನನ್ನು ತಕ್ಷಣವೇ ಬಂಧನಕ್ಕೆ ಒಳಪಡಿಸಿದ್ದಾರೆ. ಶಾಹೀನ್ ಬಾಗ್ ಪರಿಸರದಲ್ಲಿ CAA ಅನ್ನು ವಿರೋಧಿಸಿ ಕಳೆದ ಒಂದೂವರೆ ತಿಂಗಳಿನಿಂದ ನಡೆಸಲಾಗುತ್ತಿರುವ ಪ್ರತಿಭಟನೆಯ ಸ್ಥಳದ ಹತ್ತಿರದಲ್ಲಿಯೇ ಈ ಘಟನೆ ಸಂಭವಿಸಿದೆ. ಶನಿವಾರ ನಡೆದ ಈ ಘಟನೆಯ ಬಳಿಕ ಧರಣಿ ನಡೆಸುತ್ತಿರುವವರಲ್ಲಿ ಆಕ್ರೋಶ ಭುಗಿಲೆದ್ದಿದ್ದು, ಜನರು ದೆಹಲಿ ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಇದೀಗ ಖ್ಯಾತ ಬಾಲಿವುಡ್ ನಟಿ ಸೋನಂ ಕಪೂರ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

ಭಾನುವಾರ ಘಟನೆಗೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಸೋನಂ " ಭಾರತದಲ್ಲಿ ಇಂತಹದೊಂದು ಘಟನೆ ನಡೆಯಬಹುದು ಎಂಬುದನ್ನು ನಾನು ಊಹಿಸಿರಲಿಲ್ಲ. ವಿಭಜಿಸುವ ಈ ರಾಜಕೀಯವನ್ನು ನಿಲ್ಲಿಸಿ. ಇದು ದ್ವೇಷಕ್ಕೆ ಕುಮ್ಮಕ್ಕು ನೀಡುತ್ತಿದೆ. ಒಂದು ವೇಳೆ ನೀವು ಹಿಂದೂ ಧರ್ಮವನ್ನು ಅನುಸರಿಸುತ್ತಿದ್ದರೆ,  ಹಿಂದೂ ಧರ್ಮ ಕರ್ಮ ಹಾಗೂ ಧರ್ಮದ ಕುರಿತು ಹೇಳುತ್ತದೆ ಮತ್ತು ಇದು ಎರಡಕ್ಕೂ ಸಂಬಂಧಿಸಿದ್ದಲ್ಲ" ಎಂದಿದ್ದಾರೆ.

ಸೋನಂ ಅವರ ವೃತ್ತಿ ಜೀವನದ ಕುರಿತು ಹೇಳುವುದಾದರೆ, ಸೋನಂ ಕೊನೆಯ ಬಾರಿಗೆ 'ದಿ ಜೊಯಾ ಫ್ಯಾಕ್ಟರ್'ನಲ್ಲಿ ಕಾಣಿಸಿಕೊಂಡಿದ್ದರು. ಬಾಕ್ಸ್ ಆಫೀಸ್ ನಲ್ಲಿ ಈ ಚಿತ್ರ ಅಷ್ಟೊಂದು ಉತ್ತಮ ಪ್ರದರ್ಶನ ಮಾಡಿರಲಿಲ್ಲ. ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ ಚಿತ್ರ 'ಸಾವರಿಯಾ' ಮೂಲಕ ಸೋನಂ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. 'ನೀರಜಾ' ಚಿತ್ರದಲ್ಲಿ ಸೋನಂ ಅಭಿನಯಿಸಿದ ಪಾತ್ರಕ್ಕೆ ವಿಮರ್ಶಕರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಸಲ್ಮಾನ್ ಖಾನ್ ಜೊತೆಗೆ ಅವರು 'ಪ್ರೇಮ್ ರತನ್ ಧನ್ ಪಾಯೋ' ಚಿತ್ರದಲ್ಲಿ ಅಭಿನಯಿಸಿದ್ದ ಸೋನಂ ಬಳಿಕ 'ವೀರ ದಿವೆಡ್ಡಿಂಗ್', 'ಪ್ಯಾಡ್ ಮ್ಯಾನ್', 'ರಾಂಝಣಾ' ಹಾಗೂ ಭಾಗ್ ಮಿಲ್ಕಾ ಭಾಗ್' ಚಿತ್ರಗಳಲಿಯೂ ಕೂಡ ನಟಿಸಿದ್ದಾರೆ.