ನವದೆಹಲಿ: ದಿವಂಗತ ಬಾಲಿವುಡ್ ನಟ ಸುಶಾಂತ್ ಸಿಂಗ್ ರಾಜ್ಪುತ್ (Sushant Singh Rajput) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಪ್ರಕರಣದ ಕೇಂದ್ರಬಿಂದುವಾಗಿರುವ ರಿಯಾ ಚಕ್ರವರ್ತಿ ವತಿಯಿಂದ ಭಾವನಾತ್ಮಕ ಹೇಳಿಕೆ ಪ್ರಕಟಗೊಂಡಿದೆ. ಈ ಕುರಿತು ವಿಡಿಯೋ ಸಂದೇಶವೊಂದನ್ನು ಜಾರಿಗೊಳಿಸಿರುವ ರಿಯಾ ಚಕ್ರವರ್ತಿ, "ನನಗೆ ನಮ್ಮ ನ್ಯಾಯ ವ್ಯವಸ್ಥೆಯ ಮೇಲೆ ಸಂಪೂರ್ಣ ನಂಬಿಕೆ ಇದೇ. ನನಗೆ ನ್ಯಾಯ ಸಿಗುವ ಸಂಪೂರ್ಣ ವಿಶ್ವಾಸವಿದೆ. ಪ್ರಸ್ತುತ ಪ್ರಕರಣ ಕೋರ್ಟ್ ನಲ್ಲಿದ್ದು, ಈ ಕುರಿತು ನಾನು ಹೆಚ್ಚಿಗೆ ಏನನ್ನು ಹೇಳಲು ಬಯಸುವುದಿಲ್ಲ. ನನ್ನ ಬಗ್ಗೆ ಇಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಸಾಕಷ್ಟು ಸಂಗತಿಗಳನ್ನು ಹೇಳಲಾಗುತ್ತಿದ್ದು, ನಾನು ನನ್ನ ವಕೀಲರ ಸಲಹೆಯ ಮೇರೆಗೆ ಹೆಚ್ಚಿಗೆ ಏನನ್ನು ಮಾತನಾಡಲು ಬಯಸುವುದಿಲ್ಲ. ಸತ್ಯವೇ ಕೊನೆಗೆ ಉಳಿಯಲಿದೆ, ಸತ್ಯಮೇವ ಜಯತೆ" ಎಂದು ಹೇಳಿದ್ದಾರೆ.
ಇದಕ್ಕೂ ಮೊದಲು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪ್ರಕರಣದಲ್ಲಿ ರಿಯಾ ಚಕ್ರವರ್ತಿ ಹಾಗೂ ಅವರ ಸಹೋದರ ಶೋವಿಕ್ ಚಕ್ರವರ್ತಿ ವಿರುದ್ಧ ಅಕ್ರಮ ಹಣ ವರ್ಗಾವಣೆ ಕಾಯ್ದೆಯ ಅಡಿ ಪ್ರಕರಣ ದಾಖಲಿಸಿದ್ದಾರೆ. ಇನ್ನೊಂದೆಡೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಯಾ ಚಕ್ರವರ್ತಿ ಸುಪ್ರೀಂ ಕೋರ್ಟ್ ಕದತಟ್ಟಿದ್ದು, ಸರ್ವೋಚ್ಚ ನ್ಯಾಯಾಲಯ ಅವರ ಅರ್ಜಿಯ ವಿಚಾರಣೆಯನ್ನು ಆಗಸ್ಟ್ 5ರಂದು ನಡೆಸಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಸುಶಾಂತ್ ಸಿಂಗ್ ರಾಜ್ಪುತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಪ್ರತಿಕ್ರಿಯೆ ನೀಡಿದ್ದ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್, ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರ ಸರ್ಕಾರ ಮತ್ತು ಮಹಾರಾಷ್ಟ್ರ ಸರ್ಕಾರದ ಮಧ್ಯೆ ಮಾತುಕತೆ ಮುಂದುವರೆದಿದೆ ಎಂದಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ರಾಜಕೀಯ ಮುಖಂಡರು CBI ತನಿಖೆಗೆ ಆಗ್ರಹಿಸುತ್ತಿದ್ದಾರೆ. ಪ್ರಕರಣದಲ್ಲಿ ಇದುವರೆಗೆ ಮುಂಬೈ ಪೊಲೀಸರಿಂದ ಯಾವುದೇ FIR ದಾಖಲಿಸಲಾಗಿಲ್ಲ.