ನಟನೆಗೂ ಸೈ ನಿರ್ದೇಶನಕ್ಕೂ ಸೈ ಅನ್ನೋ ಕಲಾವಿದರಿವರು..!

ಕನ್ನಡ ಚಿತ್ರರಂಗದಲ್ಲಿ ಬಹುಮುಖ ಕಲಾವಿದರಿರುವುದು ಆಶ್ಚರ್ಯವೇನಲ್ಲ, ಎಲ್ಲ ನಟರು ತಮ್ಮ ಛಾಪನ್ನು ಮೂಡಿಸುತ್ತಲೇ ಬಂದಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಕಲಾವಿದರು ನಟನೆಯ ಜೊತೆಗೆ ನಿರ್ದೇಶನವನ್ನು ಮಾಡುತ್ತಿರುವುದು ವಿಶೇಷವೇ. ಅಂತಹ ಕಲಾವಿದರು ಹಿಂದಿನಿಂಲೂ ನಮ್ಮ ಕನ್ನಡ ಸಿನಿರಂಗದಲ್ಲಿ ಅಚ್ಚಾಗಿ ಉಳಿದಿದ್ದಾರೆ. 

Written by - Zee Kannada News Desk | Last Updated : Mar 3, 2023, 02:15 PM IST
  • ವಿಭಿನ್ನವಾಗಿ ನಡೆಯುವ ಶೈಲಿ, ಆಕರ್ಷಕ ನೋಟಗಳಿಂದ ಗಮನ ಸೆಳೆದಿದ್ದ ಶಂಕರ್ ನಾಗ್ ನಿರ್ದೇಶನದ ಮೊದಲ ಸಿನಿಮಾ ಮಿಂಚಿನ ಓಟ.
  • ಚಿತ್ರ ನಿರ್ಮಾಣದಲ್ಲಿ ತಮ್ಮ ಪ್ರತಿಭೆ ತೋರಿ ಕನ್ನಡದ ವಿಶಿಷ್ಟ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ.
  • ಕಾಂತಾರಾ ಸಿನಿಮಾ ಮೂಲಕ ರಿಷಬ್ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದ್ದಾರೆ.
ನಟನೆಗೂ ಸೈ ನಿರ್ದೇಶನಕ್ಕೂ ಸೈ ಅನ್ನೋ ಕಲಾವಿದರಿವರು..!   title=

ಮೊದಮೊದಲು ಕನ್ನಡ ಚಿತ್ರರಂಗ ಇಷ್ಟು ಪ್ರಗತಿಯಲ್ಲಿರಲಿಲ್ಲ, ಆದರೆ ಇದೀಗ ಈ ರೀತಿಯ ಪ್ರತಿಭಾನ್ವಿತ ನಟರು ಹಾಗೂ  ಡೈರೆಕ್ಟರ್ಗಳಿರುವುದರಿಂದ ಕನ್ನಡ ಚಿತ್ರರಂಗದ ಕಂಪು ಎಲ್ಲೆಡೆಯು ಪಸರಿಸುತ್ತಿದೆ. ಬಹುಮುಖ ಪ್ರತಿಭೆಗಳು ನಮ್ಮ ಕನ್ನಡ ಸಿರಂಗದಲ್ಲಿ ಛಾಪನ್ನು ಮೂಡಿಸುತ್ತಿವೆ. 

ಉಪೇಂದ್ರ
ಕನ್ನಡದ ಹೆಸರಾಂತ ನಿರ್ದೇಶಕ  ಕಾಶಿನಾಥ್ ಅವರ ಬಳಿ ಸಹಾಯ ನಿರ್ದೇಶಕರಾಗಿ ಕೆಲಸ ಮಾಡಿದ್ದ ನಟ ಉಪೇಂದ್ರ ಅವರು,1992ರಲ್ಲಿ ತೆರೆಗೆ ಬಂದ ತರ್ಲೆ ನನ್ಮಗ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾದರು. 1993ರಲ್ಲಿ 'ಶ್' ಎಂಬ ಹಾರರ್ ಚಿತ್ರ ನಿರ್ದೇಶಿಸಿದರು. 1995ರಲ್ಲಿ ಬಿಡುಗಡೆಯಾದ ಉಪ್ಪಿ ನಿರ್ದೇಶನದ 'ಓಂ' ಚಿತ್ರ ಇಡೀ ಭಾರತ ಚಿತ್ರರಂಗದಲ್ಲಿಯೇ ಹೊಸ ಸಂಚಲನ ಸೃಷ್ಟಿಸಿತು. ಈ ಚಿತ್ರದಲ್ಲಿ ನಿಜವಾದ ರೌಡಿಗಳು ತಮ್ಮ ಪಾತ್ರಗಳಲ್ಲಿ ಸ್ವತಃ ತಾವೇ ಅಭಿನಯಿಸಿರುವುದು ವಿಶೇಷ. ನಂತರ ಆಪರೇಷನ್ ಅಂತ, ಸ್ವಸ್ತಿಕ್ ಚಿತ್ರಗಳನ್ನು ನಿರ್ದೇಶಿಸಿದರು.1998ರಲ್ಲಿ ತೆರೆಗೆ ಬಂದ 'ಎ' ಚಿತ್ರವನ್ನು ನಿರ್ದೇಶಿಸಿ ಸ್ವತಃ ತಾವೇ ನಟಿಸಿ, ನಾಯಕನಾಗಿಯೂ ಕನ್ನಡ ಚಿತ್ರರಂಗದಲ್ಲಿ ಪರಿಚಿತರಾದರು. ಇದಾದ ಬಳಿಕ ಬಂದ ಉಪೇಂದ್ರ ಚಿತ್ರವು ಹಲವಾರು ದಾಖಲೆಗಳನ್ನು ಬರೆಯಿತು. ಇವೆರಡು ಚಿತ್ರಗಳು ಕನ್ನಡದಲ್ಲಿ ಮಾತ್ರವಲ್ಲದೇ, ತೆಲುಗು ಚಿತ್ರರಂಗದಲ್ಲಿಯೂ ಶತದಿನ ಪೂರೈಸಿದವು. ಇಲ್ಲಿಂದ ಮುಂದೆ 10 ವರ್ಷಗಳ ಕಾಲ ನಿರ್ದೇಶನವನ್ನು ಬದಿಗಿಟ್ಟ ಉಪ್ಪಿ, ಹಲವಾರು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದರು. ಮುಂದೆ ಇವರು 2010ರಲ್ಲಿ ನಿರ್ದೇಶಿಸಿದ 'ಸೂಪರ್' ಮತ್ತು 2015ರಲ್ಲಿ ನಿರ್ದೇಶಿಸಿದ 'ಉಪ್ಪಿ 2' ಚಿತ್ರಗಳು ಶತದಿನ ಪೂರೈಸಿದವು.

ರಿ‍ಷಭ್ ಶೆಟ್ಟಿ
ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಿರ್ದೇಶಕ, ನಟ ಮತ್ತು ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ರಿ‍ಷಭ್ ಶೆಟ್ಟಿ, ರಿಕ್ಕಿ ಚಿತ್ರದಿಂದ ಸಿನಿಮಾ ನಿರ್ದೇಶನಕ್ಕೆ ಇಳಿದರು. ಆದರೆ, ಈ ಸಿನಿಮಾ ಅಷ್ಟೇನೂ ಯಶಸ್ಸು ಕಾಣಲಿಲ್ಲ. ಇದಾದ ಬಳಿಕ ಕಿರಿಕ್ ಪಾರ್ಟಿ ಸಿನಿಮಾವನ್ನು ನಿರ್ದೇಶನ ಮಾಡಿದರು. ಈ ಸಿನಿಮಾ ಸೂಪರ್ ಹಿಟ್ ಆಯಿತು. ಈ ಸಿನಿಮಾ ಸಾಕಷ್ಟು ಯಶಸ್ಸು ತಂದು ಕೊಟ್ಟಿತು. ಇದಾದ ಬಳಿಕ  ಕೇರಳದ ಕಾಸರಗೋಡುವಿನಲ್ಲಿ ಕನ್ನಡ ಶಾಲೆಗಳ ಪರಿಸ್ಥಿತಿ ಕುರಿತು ಇವರು ನಿರ್ದೇಶಿಸಿದ ಚಿತ್ರ `ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಚಿತ್ರ ಪ್ರೇಕ್ಷಕ ಮತ್ತು ವಿಮರ್ಶಕರಿಂದ ವ್ಯಾಪಕ ಮನ್ನಣೆ ಪಡೆಯಿತು. ಈ ಸಿನಿಮಾಗೆ ಅತ್ಯುತ್ತಮ ಮಕ್ಕಳ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿ ಲಭಿಸಿತ್ತು. ನಂತರ ಬೆಲ್ ಬಾಟಮ್ ಸಿನಿಮಾ ಮೂಲಕ ನಾಯಕನಾಗಿಯೂ ಯಶಸ್ಸು ಗಳಿಸಿದರು. ಇದೀಗ ಕಾಂತಾರಾ ಸಿನಿಮಾ ಮೂಲಕ ರಿಷಬ್ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆಯುತ್ತಿರುವ ಕಾಂತಾರದಲ್ಲಿ ಪ್ರಶಸ್ತಿಗೆ ಅರ್ಹರು ಎಂಬಷ್ಟು ಚೆನ್ನಾಗಿ ರಿಷಬ್ ಅಭಿನಯಿಸಿದ್ದಾರೆ.  

ಇದನ್ನೂ ಓದಿ-ಎಲ್ಲೆಯನ್ನು ಮೀರಿ ಕನ್ನಡ ಭಾಷೆಯ ಕಂಪನ್ನು ಪಸರಿಸಿದ ಸ್ಯಾಂಡಲ್‌ವುಡ್‌ ಸ್ಟಾರ್‌ ನಟರಿವರು...!

ರಕ್ಷಿತ್ ಶೆಟ್ಟಿ
ರಕ್ಷಿತ್ ಶೆಟ್ಟಿ 2010ರಲ್ಲಿ ತೆರೆಕಂಡ `ನಮ್ ಏರಿಯಾದಲ್ಲೊಂದು ದಿನ' ಚಿತ್ರದ ಮೂಲಕ ಸಿನಿಪ್ರವೇಶ ಮಾಡಿದರು. ಆದರೆ, ರಕ್ಷಿತ್ ಗೆ ಬ್ರೇಕ್ ನೀಡಿದ ಚಿತ್ರ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ. ಕಡಿಮೆ ಬಜೆಟ್ಟಿನಲ್ಲಿ ಉತ್ತಮ ಕತೆಯೊಂದಿಗೆ ತಯಾರಾದ ಈ ಚಿತ್ರ ರಕ್ಷಿತ್ ಸಿನಿಜೀವನಕ್ಕೆ ಉತ್ತಮ ಅಡಿಪಾಯ ಹಾಕಿತು. ನಂತರ ಇವರು `ಉಳಿದವರು ಕಂಡಂತೆ ಚಿತ್ರದ ಮೂಲಕ ನಿರ್ದೇಶಕರಾದರು. ಅದುವರೆಗೆ ಕೇವಲ ಎಂಡು ಚಿತ್ರಗಳಲ್ಲಿ ನಟಿಸಿದ್ದರೂ ತಮ್ಮ ವಿಶಿಷ್ಟ ಚಿತ್ರಗಳ ಮೂಲಕ ರಕ್ಷಿತ್ ಕನ್ನಡದ ಭರವಸೆಯ ನಟ ಮತ್ತು ನಿರ್ದೇಶಕರಾಗಿ ಹೊರಹೊಮ್ಮಿದ್ದರು. ರಕ್ಷಿತ್ ಶೆಟ್ಟಿ ಕಿರಿಕ್ ಪಾರ್ಟಿ, `ಹಂಬಲ್ ಪೊಲಿಟಿಶನ್ ನೊಗರಾಜ್', 777 ಚಾರ್ಲಿ ಚಿತ್ರಗಳನ್ನು ನಿರ್ಮಿಸಿದ್ದಾರೆ. ಇತ್ತೀಚಿಗೆ ತೆರೆಕಂಡ ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಸಿನಿಮಾ ಉತ್ತಮ ಯಶಸ್ಸು ಗಳಿಸಿದೆ. 

ರವಿಚಂದ್ರನ್
ಕನ್ನಡ ಚಿತ್ರರಂಗಕ್ಕೆ ರವಿಂಚಂದ್ರನ್ ಅವರ ಕೊಡುಗೆ ಅಪಾರವಾಗಿದೆ. ರವಿಚಂದ್ರನ್ ಅವರದು ಬಹುಮುಖ ಪ್ರತಿಭೆ. ನಟನೆ, ನಿರ್ಮಾಣ, ನಿರ್ದೇಶನ, ಸಾಹಿತ್ಯ, ಸಂಗೀತ, ಸಂಕಲನ ಮುಂತಾದ ಚಿತ್ರರಂಗದ ವಿವಿಧ ಪ್ರಕಾರಗಳಲ್ಲಿ ಕೆಲಸ ಮಾಡಿದ್ದಾರೆ. ರವಿಚಂದ್ರನ್ ನಾಯಕನಾಗಿ ನಟಿಸಿದ ಮೊದಲ ಸಿನಿಮಾ ಖದೀಮ ಕಳ್ಳರು. ನಂತರ ಹಲವಾರು ಸಿನಿಮಾಗಳಲ್ಲಿ ನಟಿಸಿದ ರವಿಚಂದ್ರನ್, 1987ರಲ್ಲಿ ಮೊದಲ ಬಾರಿಗೆ ಪ್ರೇಮಲೋಕ ಸಿನಿಮಾವನ್ನು ನಿರ್ದೇಶಿಸಿದರು. ಈ ಸಿನಿಮಾ ಸೂಪರ್ ಹಿಟ್ ಆಯಿತು. ನಂತರ  ರಣಧೀರ, ಕಿಂದರಜೋಗಿ, ಶಾಂತಿ ಕ್ರಾಂತಿ, ಹಳ್ಳಿ ಮೇಷ್ಟ್ರು, ಮನೆ ದೇವ್ರು, ಗೋಪಿ ಕೃಷ್ಣ, ಪುಟ್ನಂಜ ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ದೇಶಿಸಿದರು. ಕನ್ನಡ ಇಂಡಸ್ಟ್ರಿಯಲ್ಲಿ ಇದುವರೆಗೆ ನಿರ್ಮಾಣವಾದ ಅತ್ಯಂತ ದುಬಾರಿ ಚಿತ್ರದಲ್ಲಿ ಶಾಂತಿ ಕ್ರಾಂತಿ ಕೂಡ ಒಂದು. ತಾಂತ್ರಿಕತೆಯ ಪರಿಪೂರ್ಣ ಜ್ಞಾನ ಹೊಂದಿರುವ ಹಾಗೂ ತಂತ್ರಜ್ಞಾನದ ವಿನೂತನ ರೀತಿಯ ಪ್ರಯೋಗಗಳನ್ನು ರವಿಚಂದ್ರನ್ ನಿರ್ದೇಶನದ ಚಿತ್ರಗಳಲ್ಲಿ ಕಾಣಬಹುದು. ಇನ್ನೊಂದು ಇವರ ಚಿತ್ರಗಳಲ್ಲಿ ಕಂಡುಬರುವ ಪ್ರಮುಖ ಅಂಶವೆಂದರೆ ಪ್ರತಿಯೊಂದು ಚಿತ್ರದಲ್ಲಿ ಸಂಗೀತ  ಹೊಸತು. ಇವರು ನಟಿಸಿ, ನಿರ್ದೇಶಿಸಿರುವ ಎಲ್ಲ ಸಿನಿಮಾಗಳ ಹಾಡು ಕೂಡ ಸೂಪರ್ ಹಿಟ್ ಆಗಿವೆ. ರವಿಚಂದ್ರನ್ ನಟಿಸಿದ ಈಶ್ವರ, ಅಭಿಮಾನಿ, ಕನಸುಗಾರ, ಏಕಾಂಗಿ,ಮಲ್ಲ, ಮನೆದೇವ್ರು,ರಾಮಾಚಾರಿ,ಸ್ವಾಭಿಮಾನಿ, ಯುಗಪುರುಷ, ಯುದ್ದಕಾಂಡ, ಸ್ವಾಭಿಮಾನ, ಶಾಂತಿಕ್ರಾಂತಿ, ರಣಧೀರ, ಅಂಜದ ಗಂಡು ಪ್ರೇಮಲೋಕ ಮುಂತಾದ ಚಿತ್ರಗಳು ಅಪಾರ ಯಶಸ್ಸು ಕಂಡಿವೆ.

ಸಾಧು ಕೋಕಿಲ
ಸಾಧು ಕೋಕಿಲ ಅವರು ಕನ್ನಡ ಚಿತ್ರರಂಗದ ಜನಪ್ರಿಯ ಹಾಸ್ಯನಟ, ಸಂಗೀತಗಾರ ಮತ್ತು ನಿರ್ದೇಶಕ. ಇವರು ಕನ್ನಡ ಚಿತ್ರರಂಗದಲ್ಲಿ ಲೆಜೆಂಡರಿ ಕಾಮಿಡಿಯನ್ ಆಗಿದ್ದಲ್ಲದೆ, ಕನ್ನಡ ಇಂಡಸ್ಟ್ರಿಗೆ ಎರಡು ಬ್ಲಾಕ್‌ಬಸ್ಟರ್‌ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಸಾಧು ಕೋಕಿಲ ನಿರ್ದೇಶನದ ಮೊದಲ ಸಿನಿಮಾ ಉಪೇಂದ್ರ ನಟನೆಯ ರಕ್ತ ಕಣ್ಣೀರು. ಈ ಸಿನಿಮಾ ಸೂಪರ್ ಹಿಟ್ ಆಯಿತು. ನಂತರ ರಾಕ್ಷಸ, ಸುಂಟರಗಾಳಿ, ಅನಾಥರು, ಶೌರ್ಯ, ಮಿಸ್ಟರ್ ತೀರ್ಥ ಸೇರಿದಂತೆ ಅನೇಕ ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದಾರೆ.  

ಇದನ್ನೂ ಓದಿ-D Boss: ದರ್ಶನ್  ಮಗ  ಹಠ ಮಾಡಿ ತಂದೆಯನ್ನ ಸ್ಕೂಲ್ ಗೆ ಕರ್ಕೊಂಡು ಹೋಗಿದ್ದು ಯಾಕೆ...?‌ 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News