ಮತ್ತೆ ಇತಿಹಾಸ ನಿರ್ಮಿಸಿದ ಸಾಹಸಸಿಂಹ ವಿಷ್ಣುವರ್ಧನ್ ನಟನೆಯ 'ನಾಗರಹಾವು'

ಚಿತ್ರ ತೆರೆಕಂಡು 45 ವರ್ಷ ಕಳೆದರೂ, ಕಡಿಮೆಯಾಗದ ಪ್ರೇಕ್ಷಕರ ಪ್ರೀತಿ.

Written by - Yashaswini V | Last Updated : Jul 23, 2018, 11:22 AM IST
ಮತ್ತೆ ಇತಿಹಾಸ ನಿರ್ಮಿಸಿದ ಸಾಹಸಸಿಂಹ ವಿಷ್ಣುವರ್ಧನ್ ನಟನೆಯ 'ನಾಗರಹಾವು'  title=

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಹಾಗೂ ರೆಬೆಲ್ ಸ್ಟಾರ್ ಅಂಬರೀಶ್ ಅಭಿನಯದ ಎವರ್ ಗ್ರೀನ್ ಚಿತ್ರ ಎಂದೇ ಖ್ಯಾತಿಯಾಗಿರುವ 'ನಾಗರಹಾವು' ಚಿತ್ರ ಮತ್ತೊಮ್ಮೆ ಇತಿಹಾಸ ನಿರ್ಮಿಸಿದೆ.

ಸ್ಲೋ ಮೋಶನ್ ಕ್ಯಾಮರದಲ್ಲಿ ಚಿತ್ರೀಕರಣಗೊಂಡ ಮೊದಲ ಭಾರತೀಯ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ, ಬೆಂಗಳೂರಿನ 3 ಚಿತ್ರಮಂದಿರಗಳಲ್ಲಿ ಏಕ ಕಾಲಕ್ಕೆ ಶತದಿನೋತ್ಸವ ಆಚರಿಸಿದ ಮೊದಲ ಚಿತ್ರ. 1972ರಲ್ಲಿ ಬಿಡುಗಡೆಯಾಗಿ ಎಲ್ಲರ ಮನಗೆದ್ದಿದ್ದ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರು ಅಂದು 35ಎಂಎಂನಲ್ಲಿ ಬಿಡುಗಡೆಗೊಳಿಸಿದ್ದ 'ನಾಗರಹಾವು' ಚಿತ್ರ ಇದೀಗ ಹೊಸ ಡಿಜಿಟಲ್ ಮಾದರಿಯಲ್ಲಿ ಸಿನಿಮಾಸ್ಕೋಪ್ ಮೂಲಕ 7.1 ಡಿಟಿಎಸ್‌ ಸೌಂಡ್‌ ಎಫೆಕ್ಟ್‌ನೊಂದಿಗೆ ಜುಲೈ 20ರಂದು ಮತ್ತೆ ತೆರೆ ಕಂಡಿದ್ದು, ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. 

ಖ್ಯಾತ ನಟ ರವಿಚಂದ್ರನ್ ಸೋದರ ಎನ್ ಬಾಲಾಜಿ ಅವರು ಈಶ್ವರಿ ಪ್ರೊಡಕ್ಷನ್ ನಡಿ ಚಿತ್ರವನ್ನು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಮರು ಬಿಡುಗಡೆ ಮಾಡಿದ್ದಾರೆ. 

ರಾಜ್ಯಾದ್ಯಂತ ಚಿತ್ರವು ಒಟ್ಟು 180 ಚಿತ್ರಮಂದಿರಗಳಲ್ಲಿ ತೆರೆಕಂಡಿದ್ದು, ಹಲವು ಥಿಯೇಟರ್ ಗಳಲ್ಲಿ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಆಗಿದೆ. ಅಲ್ಲದೆ ಹಲವು ಥಿಯೆಟರ್ ಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವುದು ಚಿತ್ರ ತೆರೆಕಂಡು 45 ವರ್ಷ ಕಳೆದರೂ, ಚಿತ್ರದ ಮೇಲಿನ ಪ್ರೀತಿ ಪ್ರೇಕ್ಷಕರಿಗೆ ಕಡಿಮೆಯಾಗಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ. 

ಚಿತ್ರ ಪ್ರೇಮಿಗಳನ್ನು ಆಕರ್ಷಿಸಿದ್ದ ಚಾಮಯ್ಯ ಮೇಷ್ಟ್ರು(ಪಾತ್ರಧಾರಿ- ಕೆ.ಎಸ್. ಅಶ್ವತ್) ಮತ್ತು ವಿದ್ಯಾರ್ಥಿ(ಪಾತ್ರ ಧಾರಿ- ವಿಷ್ಣುವರ್ಧನ್) ನಡುವಿನ ಬಾಂಧವ್ಯ ಅದ್ಭುತವಾಗಿ ಮೂಡಿಬಂದಿತ್ತು. ಚಾಮಯ್ಯ ಮೇಷ್ಟ್ರ ನೆಚ್ಚಿನ ವಿದ್ಯಾರ್ಥಿ, ಯುವಕನ ಪಾತ್ರದಲ್ಲಿ ಪ್ರೇಕ್ಷಕರ ಮನಗೆದ್ದ ನಟ ವಿಷ್ಣುವರ್ಧನ್ ರಾತ್ರೋರಾತ್ರಿ ಸೂಪರ್ ಸ್ಟಾರ್ ಆದರು. ನಟ ಅಂಬರೀಶ್ ಈ ಚಿತ್ರದ ಮೂಲಕ ಖಳನಾಯಕನಾಗಿ ಚಿತ್ರರಂಗಕ್ಕೆ ಕಾಲಿಟ್ಟರು. ಅಂಬರೀಶ್ ಅವರ 'ಎ ಬುಲ್ ಬುಲ್ ಮಾತಾಡಕಿಲ್ವ...'  ಡೈಲಾಗ್ ಈಗಲೂ ಸಿನಿ ರಸಿಕರ ಮನಸಲ್ಲಿ ಅಚ್ಚಳಿಯದೆ ಉಳಿದಿದೆ.
 

Trending News