ಇತ್ತೀಚಿಗೆ ಹವಾಮಾನದಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಾಣುತ್ತಿದ್ದೇವೆ. ಹಗಲಿನಲ್ಲಿ ಸುಡು ಬಿಸಿಲಿನಿಂದ ಬಳಲಿದರೆ, ರಾತ್ರಿಯಲ್ಲಿ ನಡುಗುವ ಚಳಿಯ ಅನುಭವ. ಕೆಲವೊಮ್ಮೆ ವರುಣನ ಆರ್ಭಟ. ಮಳೆಗಾಲದಲ್ಲಿ ಉಂಟಾಗುವ ಸೋಂಕುಗಳು ಬಹಳ ಹಾನಿಕಾರಕವಾಗಿವೆ.
ಧಾರಾಕಾರವಾಗಿ ಮಳೆ ಸುರಿಯುತ್ತಿರುವಾಗ ದೇಹದ ಜೀರ್ಣಶಕ್ತಿ, ರೋಗ ನಿರೋಧಕ ಶಕ್ತಿ ಕುಗ್ಗುತ್ತದೆ. ಜೊತೆಗೆ ವಾತಾವರಣದ ಬದಲಾವಣೆಗಳಿಂದ ಜೀವಾಣು ವೈರಾಣುಗಳು ಹೆಚ್ಚುತ್ತವೆ. ಆದ್ದರಿಂದ ಮಳೆಗಾಲದಲ್ಲಿ ಆರೋಗ್ಯ ರಕ್ಷಣೆಗೆ ವಿಶೇಷ ಮುತುವರ್ಜಿ ಅವಶ್ಯ.
ಹವಾಮಾನ ಬದಲಾವಣೆಯಿಂದ ದೇಹಕ್ಕಿಂತ ನಮ್ಮ ದೇಹದ ಅತ್ಯಂತ ಸೂಕ್ಷ್ಮವಾದ ಭಾಗ 'ಕಣ್ಣಿ'ಗೆ ಹೆಚ್ಚು ತೊಂದರೆ ಉಂಟಾಗುತ್ತದೆ. ಹಾಗಾಗಿ ಕಣ್ಣಿನ ಬಗ್ಗೆ ಸರಿಯಾದ ಕಾಳಜಿ ವಹಿಸುವುದು ಅತ್ಯವಶ್ಯಕ.
ಈ ಬದಲಾವಣೆಯ ಋತುವಿನಲ್ಲಿ ನಾವು ನಮ್ಮ ಕಣ್ಣುಗಳನ್ನು ಹೇಗೆ ಸಂರಕ್ಷಿಸಬೇಕು ಎಂದು ತಿಳಿಯೋಣ.
ಯಾವಾಗಲೂ ನಿಮ್ಮ ಕಣ್ಣುಗಳನ್ನು ಒರೆಸುವ ಬಟ್ಟೆ ಮತ್ತು ನಿಮ್ಮ ಕೈಗಳನ್ನು ಸ್ವಚ್ಛವಾಗಿರಿಸಿಕೊಳ್ಳಿ. ಟವೆಲ್, ಕನ್ನಡಕ, ಕಾಂಟ್ಯಾಕ್ಟ್ ಲೆನ್ಸ್ ಮುಂತಾದ ನಿಮ್ಮ ವೈಯಕ್ತಿಕ ವಸ್ತುಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ನೀವು ಮನೆಯಿಂದ ಹೊರಗೆ ಹೋದಾಗ ಸನ್ ಗ್ಲಾಸ್ ಅಥವಾ ಕನ್ನಡಕವನ್ನು ಧರಿಸಿ. ಯಾವುದೇ ರೀತಿಯ ದೂಳು ನಿಮ್ಮ ಕಣ್ಣುಗಳನ್ನು ಪ್ರವೇಶಿಸುವುದನ್ನು ಇದು ತಡೆಯುತ್ತದೆ.
ನಿಮ್ಮ ಕಣ್ಣುಗಳನ್ನು ಜಾಗರೂಕತೆಯಿಂದ ನೋಡಿಕೊಳ್ಳಿ:
ಪ್ರತಿ ನಿತ್ಯ ತಣ್ಣನೆಯ ನೀರಿನಿಂದ ನಿಮ್ಮ ಕಣ್ಣುಗಳನ್ನು ತೊಳೆಯಿರಿ. ಕಾಂಟಾಕ್ಟ್ ಲೆನ್ಸ್ ಗಳನ್ನು ತೆಗೆದ ಬಳಿಕ ಯಾವುದೇ ಕಾರಣಕ್ಕೂ ನಿಮ್ಮ ಕಣ್ಣುಗಳನ್ನು ಉಜ್ಜಬೇಡಿ. ಏಕೆಂದರೆ ಇದು ಕಣ್ಣನ್ನು ಶಾಶ್ವತವಾಗಿ ಹಾನಿಗೊಳಿಸುತ್ತದೆ. ಸದಾ ನಿಮ್ಮ ಕಣ್ಣುಗಳನ್ನು ಜಾಗರೂಕತೆಯಿಂದ ನೋಡಿಕೊಳ್ಳಿ.
ಸಮತೋಲನ ಆಹಾರ:
ಯಾವುದೇ ಸೋಂಕನ್ನು ಎದುರಿಸಲು, ನಿಮ್ಮ ದೇಹವನ್ನು ಆರೋಗ್ಯಕರವಾಗಿರಿಸಿಕೊಳ್ಳುವುದು ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಮುಖ್ಯ. ಅದಕ್ಕಾಗಿ ಸದಾ ಸಮತೋಲಿತ ಮತ್ತು ಆರೋಗ್ಯಕರ ಆಹಾರವನ್ನು ತೆಗೆದುಕೊಳ್ಳಿ.
ಕೆಂಗಣ್ಣು ಅಥವಾ ಕಂಜಕ್ಟವೈಟಿಸ್ ಮಳೆಗಾಲದಲ್ಲಿ ಸಾಮಾನ್ಯವಾಗಿ ಕಂಡುಬರುವ ತೊಂದರೆ. ತಣ್ಣೀರಿನಲ್ಲಿ ಅದ್ದಿದ ಶುದ್ಧ ಹತ್ತಿಯ ಉಂಡೆಗಳನ್ನು ಮುಚ್ಚಿದ ಕಣ್ಣುಗಳ ಮೇಲೆ ಇರಿಸಿ ಕಣ್ಣುಗಳನ್ನು ಶುದ್ಧ ಮಾಡಬೇಕು.