2 ವರ್ಷದ ಮಗುವಿನಿಂದ ಅಂಗಾಂಗ ದಾನ; ಉಳಿಯಿತು ಆರು ಮಂದಿ ಜೀವ

ಮಗುವಿನ ಹೃದಯವನ್ನು ಚೆನ್ನೈ ಅಪೋಲೋ ಆಸ್ಪತ್ರೆಗೆ, ಕಿಡ್ನಿಯನ್ನು ಗ್ಲೋಬಲ್ ಆಸ್ಪತ್ರೆಗೆ, ಲಿವರ್ ಅನ್ನು ಥಾಣೆಯಲ್ಲಿರುವ ಜೈಪುರ್ ಆಸ್ಪತ್ರೆಗೆ ಮತ್ತು ಕಣ್ಣುಗಳನ್ನು ಅಂಧೇರಿ ಐ ಬ್ಯಾಂಕ್'ಗೆ ಕಳುಹಿಸಲಾಗಿದೆ.

Last Updated : Feb 12, 2019, 02:00 PM IST
2 ವರ್ಷದ ಮಗುವಿನಿಂದ ಅಂಗಾಂಗ ದಾನ; ಉಳಿಯಿತು ಆರು ಮಂದಿ ಜೀವ title=
Photo: DNA

ಮುಂಬೈ: ದೇಶದ ಆರ್ಥಿಕ ರಾಜಧಾನಿ ಎಂದೇ ಹೆಸರಾಗಿರುವ ಮುಂಬೈನಲ್ಲಿ ಎರಡು ವರ್ಷದ ಮಗು ಮಾಡಿದ ಅಂಗಾಂಗ ದಾನದಿಂದಾಗಿ ಒಟ್ಟು 6 ಮಂದಿಯ ಜೀವ ಉಳಿದಂತಾಗಿದೆ. ಅಷ್ಟೇ ಅಲ್ಲದೆ, ಅತೀ ಚಿಕ್ಕ ವಯಸ್ಸಿನಲ್ಲಿಯೇ ಅಂಗಾಂಗ ದಾನ ಮಾಡಿದ ಮಗು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಮೆದುಳು ನಿಷ್ಕ್ರಿಯಗೊಂಡ ಸಾವನ್ನಪ್ಪಿದ ಎರಡು ವರ್ಷದ ಮಗುವಿನ ಅಂಗಾಂಗ ದಾನದಿಂದಾಗಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದ 6 ರೋಗಿಗಳ ಜೀವ ಉಳಿದಂತಾಗಿದೆ. ಮುಂಬೈನ ಬಾಂಬೆ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದ ಮಗು, ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೃತಪಟ್ಟಿತ್ತು. ಕೂಡಲೇ ಮಗುವಿನ ಪೋಷಕರು ಅದರ ಅಂಗಾಂಗ ದಾನ ಮಾಡಲು ನಿರ್ಧರಿಸಿದರು. ಅದರಂತೆ ಮಗುವಿನ ಹೃದಯ, ಕಿಡ್ನಿ, ಲಿವರ್ ಮತ್ತು ಕಣ್ಣುಗಳನ್ನು ದಾನ ಮಾಡಲಾಗಿದೆ. 

ಫೆಬ್ರವರಿ 4 ರಂದು ಚಿಕಿತ್ಸೆಗಾಗಿ ಬಾಂಬೆ ಆಸ್ಪತ್ರೆಗೆ ಮಗುವನ್ನು ದಾಖಲಿಸಲಾಗಿತ್ತು. ಆದರೆ ಮಗುವಿನ ಆರೋಗ್ಯ ಸ್ಥಿತಿ ಕ್ರಮೇಣ ಕ್ಷೀಣಿಸತೊಡಗಿತ್ತು. ಭಾನುವಾರ ಮಗುವಿನ ಮೆದುಳು ನಿಷ್ಕ್ರಿಯಗೊಂಡಿರುವುದಾಗಿ ವೈದ್ಯರು ದೃಢಪಡಿಸಿದ್ದರು. ಈ ನೋವಿನ ನಡುವೆಯೂ ಮಗುವಿನ ಪೋಷಕರು ಅಂಗಾಂಗ ದಾನಕ್ಕೆ ನಿರ್ಧರಿಸಿ ಇತರರ ಜೀವ ಉಳಿಸಲು ನೆರವಾಗಿದ್ದಾರೆ. ಇವರು ಪುಣೆ ಮೂಲದವರು ಎನ್ನಲಾಗಿದೆ. 

ಬಾಂಬೆ ಆಸ್ಪತ್ರೆ ನೀಡಿರುವ ಮಾಹಿತಿಯ ಪ್ರಕಾರ, ಮಗುವಿನ ಹೃದಯವನ್ನು ಚೆನ್ನೈ ಅಪೋಲೋ ಆಸ್ಪತ್ರೆಗೆ, ಕಿಡ್ನಿಯನ್ನು ಗ್ಲೋಬಲ್ ಆಸ್ಪತ್ರೆಗೆ, ಲಿವರ್ ಅನ್ನು ಥಾಣೆಯಲ್ಲಿರುವ ಜೈಪುರ್ ಆಸ್ಪತ್ರೆಗೆ ಮತ್ತು ಕಣ್ಣುಗಳನ್ನು ಅಂಧೇರಿ ಐ ಬ್ಯಾಂಕ್'ಗೆ ಕಳುಹಿಸಲಾಗಿದೆ. ತಮ್ಮ ಮಗುವಿನ ಸಾವಿನ ನೋವಿನ ನಡುವೆಯೂ ಇತರರ ಜೀವ ಉಳಿಸುವ ಬಗ್ಗೆ ಆಲೋಚಿಸುವುದು ನಿಜಕ್ಕೂ ಕಷ್ಟಕರ್. ಆದರೆ ಈ ಪೋಷಕರು ಮಾಡಿರುವ ನಿರ್ಧಾರ ನಿಜಕ್ಕೂ ಪ್ರಶಂಸನೀಯ ಎಂದು ಬಾಂಬೆ ಆಸ್ಪತ್ರೆಯ ಡಾ.ಅನಿಲ್ ಶರ್ಮಾ ಮತ್ತು ಹೃದ್ರೋಗ ತಜ್ಞ ಡಾ.ಗೌತಮ್ ಬನ್ಸಾಲಿ ಅವರು ಹೇಳಿದ್ದಾರೆ.
 

Trending News