ತಿರುವನಂತಪುರಂ : ಕಳೆದ ನವೆಂಬರ್ ತಿಂಗಳಲ್ಲಿ ದೇಶದ ದಕ್ಷಿಣ ಭಾಗದ ಕೇರಳ, ತಮಿಳುನಾಡು ರಾಜ್ಯಗಳಲ್ಲಿ ತೀವ್ರ ಹಾನಿ ಉಂಟುಮಾಡಿದ್ದ ಓಕಿ ಚಂಡಮಾರುತದಿಂದಾಗಿ ಕೇರಳದ 141 ಮೀನುಗಾರರು ಕಣ್ಮರೆಯಾಗಿರುವುದರ ಬಗ್ಗೆ ಇಲ್ಲಿನ ಅಧಿಕಾರಿಗಳು ಅಂಕಿ ಅಂಶಗಳನ್ನು ಬುಧವಾರ ಬಿಡುಗಡೆ ಮಾಡಿದ್ದಾರೆ.
ಇತರ ರಾಜ್ಯಗಳಿಂದ ಕೇರಳ ಕರಾವಳಿ ಭಾಗಕ್ಕೆ ಮಿನುಗಾರಿಕೆಗಾಗಿ ತೆರಳಿದ್ದ 79 ಮೀನುಗಾರರು ಇದುವರೆಗೂ ಪತ್ತೆಯಾಗಿಲ್ಲ. ಅದರೊಂದಿಗೆ ಕೇರಳದ ಒಟ್ಟು 79 ಮೀನುಗಾರರು ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ದೃಢಪಡಿಸಿದ್ದಾರೆ.
ಕೋಜಿಕೋಡ್ ಮೆಡಿಕಲ್ ಕಾಲೇಜಿನಲ್ಲಿರುವ ಗುರುತಿಸಲಾಗದ 13 ಶವಗಳನ್ನೂ ಒಳಗೊಂಡಂತೆ ಕೇರಳದ ವಿವಿಧ ಆಸ್ಪತ್ರೆಗಳಲ್ಲಿ ಒಟ್ಟು 33 ಮೃತದೇಹಗಳಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಅಲ್ಲದೆ, ಕೇರಳ ಮುಖ್ಯಮಂತ್ರಿ ಪಿನರಾಯಿ ವಿಜಯನ್ 25 ಮೃತ ಮೀನುಗಾರರ ಕುಟುಂಬಗಳಿಗೆ ಒಟ್ಟು 2.2 ಮಿಲಿಯನ್ ರೂ.ಗಳ ಪರಿಹಾರದ ಚೆಕ್ ಅನ್ನು ಸೋಮವಾರ ವಿತರಿಸಿದ್ದಾರೆ.