ಜಮ್ಮು-ಕಾಶ್ಮೀರದಲ್ಲಿ 273 ಭಯೋತ್ಪಾದಕರು ಸಕ್ರಿಯ, ದಾಳಿಗೆ ಸಂಚು: ಗುಪ್ತಚರ ಮಾಹಿತಿ

ಗುಪ್ತಚರ ಮೂಲಗಳ ಪ್ರಕಾರ, ಪ್ರಸ್ತುತ 273 ಭಯೋತ್ಪಾದಕರು ಕಣಿವೆಯಲ್ಲಿ ಸಕ್ರಿಯರಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಹಾಳುಮಾಡುವ ಸಂಚು ಇದಾಗಿದೆ.  

Last Updated : Sep 19, 2019, 04:18 PM IST
ಜಮ್ಮು-ಕಾಶ್ಮೀರದಲ್ಲಿ 273 ಭಯೋತ್ಪಾದಕರು ಸಕ್ರಿಯ, ದಾಳಿಗೆ ಸಂಚು: ಗುಪ್ತಚರ ಮಾಹಿತಿ title=
Pic courtesy: IANS

ನವದೆಹಲಿ: ಕಣಿವೆ ರಾಜ್ಯ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ಆರ್ಟಿಕಲ್ 370ನ್ನು ರದ್ದುಗೊಳಿಸಿದಾಗಿನಿಂದ ಭಾರತದ ವಿರುದ್ಧ ಕತ್ತಿ ಮಸೆಯುತ್ತಿರುವ ಪಾಕಿಸ್ತಾನ ರಾಜ್ಯದಲ್ಲಿ ಶಾಂತಿ ಕದಡುವ ಬಗ್ಗೆ ಪದೇ ಪದೇ ಪ್ರಯತ್ನಿಸುತ್ತಲೇ ಇದೆ.

ಗುಪ್ತಚರ ಮೂಲಗಳ ಪ್ರಕಾರ, ಪ್ರಸ್ತುತ 273 ಭಯೋತ್ಪಾದಕರು ಕಣಿವೆಯಲ್ಲಿ ಸಕ್ರಿಯರಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಹಾಳುಮಾಡುವ ಉದ್ದೇಶದಿಂದ ಸಂಚು ರೂಪಿಸಲಾಗುತ್ತಿದೆ ಎನ್ನಲಾಗಿದೆ.

ಈ ಭಯೋತ್ಪಾದಕರು ಮುಂದಿನ ದಿನಗಳಲ್ಲಿ ಕಣಿವೆ ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಭಯೋತ್ಪಾದಕ ದಾಳಿ ನಡೆಸಲು ಯೋಜಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮೂಲಗಳಿಂದ ಲಭಿಸಿರುವ ಮಾಹಿತಿ ಪ್ರಕಾರ, ಕಾಶ್ಮೀರದಲ್ಲಿ ಮಾತ್ರ, ಕನಿಷ್ಠ 273 ಭಯೋತ್ಪಾದಕರು, ವಿವಿಧ ಭಯೋತ್ಪಾದಕ ಗುಂಪುಗಳೊಂದಿಗೆ ಸಂಪರ್ಕ ಹೊಂದಿದ್ದಾರೆ. ಈ ಪೈಕಿ ದಕ್ಷಿಣ ಕಾಶ್ಮೀರದಲ್ಲಿ ಕನಿಷ್ಠ 158, ಉತ್ತರ ಕಾಶ್ಮೀರದಲ್ಲಿ 96 ಮತ್ತು ಮಧ್ಯ ಕಾಶ್ಮೀರದಲ್ಲಿ 19 ಭಯೋತ್ಪಾದಕರು ಸಕ್ರಿಯರಾಗಿದ್ದಾರೆ.

ಏಜೆನ್ಸಿಯು ಕನಿಷ್ಠ 166 ಭಯೋತ್ಪಾದಕರನ್ನು ಸ್ಥಳೀಯರೆಂದು ಗುರುತಿಸಿದ್ದು, 107 ಮಂದಿ ವಿದೇಶಿಯರು ಎಂದು ಗುರುತಿಸಲಾಗಿದೆ. ಈ ಪೈಕಿ 112 ಭಯೋತ್ಪಾದಕರು ಪಾಕಿಸ್ತಾನ ಮೂಲದ ಲಷ್ಕರ್-ಎ-ತೋಯಿಬಾ, 100 ಹಿಜ್ಬುಲ್ ಮುಜಾಹಿದ್ದೀನ್, 59 ಜೈಶ್-ಎ-ಮೊಹಮ್ಮದ್ ಮತ್ತು ಮೂವರು ಇಸ್ಲಾಮಿಕ್ ಉಗ್ರಗಾಮಿ ಗುಂಪು ಅಲ್-ಬದ್ರ್ ಗುಂಪಿಗೆ ಸೇರಿದವರಾಗಿದ್ದಾರೆ ಎಂದು ಹೇಳಲಾಗಿದೆ.

2019ರ ಆಗಸ್ಟ್ 5 ರಂದು ಭಾರತ ಸರ್ಕಾರ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿತು. ಭಾರತದ ಈ ಕ್ರಮಕ್ಕೆ ಪ್ರತಿಕ್ರಿಯಿಸಿದ ಪಾಕಿಸ್ತಾನ, ನವದೆಹಲಿಯೊಂದಿಗಿನ ರಾಜತಾಂತ್ರಿಕ ಸಂಬಂಧವನ್ನು ಕೆಳಮಟ್ಟಕ್ಕಿಳಿಸಿತು ಮತ್ತು ಭಾರತೀಯ ಹೈಕಮಿಷನರ್ ರನ್ನು ಪಾಕಿಸ್ತಾನದಿಂದ ಹೊರಹಾಕಿತು. ಕಾಶ್ಮೀರ ಸಮಸ್ಯೆಯನ್ನು ಅಂತರರಾಷ್ಟ್ರೀಕರಿಸಲು ಪಾಕಿಸ್ತಾನ ತೀವ್ರವಾಗಿ ಪ್ರಯತ್ನಿಸುತ್ತಿದೆ. ಆದರೆ 'ಕಾಶ್ಮೀರದಲ್ಲಿ 370 ನೇ ವಿಧಿಯನ್ನು ರದ್ದುಪಡಿಸುವುದು ಭಾರತದ ಆಂತರಿಕ ವಿಷಯ. ಇಸ್ಲಾಮಾಬಾದ್ ವಾಸ್ತವವನ್ನು ಒಪ್ಪಿಕೊಳ್ಳಬೇಕು ಮತ್ತು ಭಾರತ ವಿರೋಧಿ ವಾಕ್ಚಾತುರ್ಯವನ್ನು ನಿಲ್ಲಿಸಬೇಕು' ಎಂದು ಭಾರತ ಪ್ರತಿಪಾದಿಸಿದೆ.

ಕರೆನ್, ಗುರೆಜ್ ಮತ್ತು ಗುಲ್ಮಾರ್ಗ್ ಪ್ರದೇಶಗಳಿಗೆ ಉಗ್ರರನ್ನು ಒಳನುಸುಳಲು ಪಾಕಿಸ್ತಾನವು ನಿಯಂತ್ರಣ ರೇಖೆಯ ಉದ್ದಕ್ಕೂ 30 ಲಾಂಚ್ ಪ್ಯಾಡ್‌ಗಳನ್ನು ನಿರ್ಮಿಸಿದೆ ಎಂದು ಸೆಪ್ಟೆಂಬರ್ 11 ರಂದು ಎಎನ್‌ಐ ವರದಿ ಮಾಡಿತ್ತು. ಕಾಶ್ಮೀರ ಮತ್ತು ಇತರ ಭಾಗಗಳಲ್ಲಿ ಭಯೋತ್ಪಾದಕ ದಾಳಿ ನಡೆಸುವ ಉದ್ದೇಶದಿಂದ ಪಾಕಿಸ್ತಾನ ಸೇನೆ ಮತ್ತು ಐಎಸ್‌ಐ (ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್) ಲಷ್ಕರ್-ಎ-ತೈಬಾ ಮತ್ತು ಜೈಶ್-ಎ-ಮೊಹಮ್ಮದ್ ಅವರ ಭಯೋತ್ಪಾದಕರನ್ನು ಈ ಲಾಂಚ್ ಪ್ಯಾಡ್‌ಗಳಿಗೆ ಸ್ಥಳಾಂತರಿಸುತ್ತಿದೆ ಎಂದು ಗುಪ್ತಚರ ಮೂಲಗಳನ್ನು ಉಲ್ಲೇಖಿಸಿ ಎಎನ್‌ಐ ತಿಳಿಸಿದೆ.

Trending News