ನವದೆಹಲಿ: ವೇತನ ಮತ್ತು ಪಿಂಚಣಿ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಕೆಗೆ ಒತ್ತಾಯಿಸಿ ಬಿಎಸ್ಎನ್ಎಲ್ ನೌಕರರು ಇತ್ತೀಚೆಗೆ ದೇಶಾದ್ಯಂತ ನಡೆಸಿದ ಪ್ರತಿಭಟನೆಗೆ ಕೊನೆಗೂ ಫಲ ಸಿಕ್ಕಂತಾಗಿದೆ. ಕೇಂದ್ರ ಸರ್ಕಾರವು ತನ್ನ ಎಲ್ಲಾ ಬಿಎಸ್ಎನ್ಎಲ್ ನೌಕರರ ವೇತನ ಮತ್ತು ಪಿಂಚಣಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಹಲವು ನಿರ್ಧಾರಗಳನ್ನು ಕೈಗೊಂಡಿದ್ದು, ಡಿಸೆಂಬರ್ 13ರಂದು ಈ ಸಂಬಂಧ ಅಧಿಸೂಚನೆ ಹೊರಡಿಸಿದೆ.
ಅಧಿಸೂಚನೆಯ ಪ್ರಮುಖ ಅಂಶಗಳು
1. ಮೂಲ ವೇತನದ ಆಧಾರದ ಮೇಲೆ ಪಿಂಚಣಿ ಪಾಲು ಪಾವತಿ
ಮೂಲ ವೇತನದ ಆಧಾರದ ಮೇಲೆ ಪಿಂಚಣಿ ಪಾಲು ಪಾವತಿ, ಪಿಂಚಣಿ ಪರಿಷ್ಕರಣೆ, ಬಾಕಿ ಉಳಿದ ಪಾವತಿಗೆ ಕ್ರಮ, ವೇತನ ಪರಿಷ್ಕರಣೆ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದ್ದು, ನೂತನ ಶಿಫಾರಸುಗಳನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ ಎಂದು ಕೇಂದ್ರ ದೂರಸಂಪರ್ಕ ಇಲಾಖೆ ರಾಜ್ಯ ಸಚಿವ ಮನೋಜ್ ಸಿನ್ಹಾ ಹೇಳಿದ್ದಾರೆ.
2. ಬಿಎಸ್ಎನ್ಎಲ್ ನೌಕರರಿಗೆ ಪಿಂಚಣಿ ಪರಿಷ್ಕರಣೆ
ಬಿಎಸ್ಎನ್ಎಲ್ ನಿವೃತ್ತ ನೌಕರರ ಪಿಂಚಣಿ ಪರಿಷ್ಕರಣೆಗೆ ಸಂಬಂಧಿಸಿದಂತೆ, ಬಿಎಸ್ಎನ್ಎಲ್ ನಿವೃತ್ತ ನೌಕರರ ಪಿಂಚಣಿ ಪರಿಷ್ಕರಣೆಯಿಂದ ಸೇವೆ ಸಲ್ಲಿಸುತ್ತಿರುವ ಉದ್ಯೋಗಿಗಳ ವೇತನ ಪರಿಷ್ಕರಣೆಯನ್ನು ಪ್ರತ್ಯೇಕಿಸಲು ಡಿಒಟಿ ಒಪ್ಪಿಗೆ ನೀಡಿದ್ದು, ಈ ನಿರ್ಧಾರವನ್ನು ಅಂಗೀಕರಿಸಿದೆ. ಬಿಎಸ್ಎನ್ಎಲ್ ಉದ್ಯೋಗಿಗಳ ಬೇಡಿಕೆಯಂತೆ ಸಂಪೂರ್ಣ ಶೇ.15ರಷ್ಟು ಫಿಟ್ ಮೆಂಟ್ ನೊಂದಿಗೆ ವೇತನ ಪರಿಷ್ಕರಣೆ ಪ್ರಕ್ರಿಯೆಯನ್ನು ದೂರಸಂಪರ್ಕ ಇಲಾಖೆ ಆರಂಭಿಸಿದೆ.
3. ಬಿಎಸ್‌ಎನ್‌ಎಲ್ ಮೂರನೇ ವೇತನ ಪರಿಷ್ಕರಣೆ
ಬಿಎಸ್ಎನ್ಎಲ್ ಉದ್ಯೋಗಿಗಳ 3 ನೇ ವೇತನ ಪರಿಷ್ಕರಣೆಗೆ ಸಂಬಂಧಪಟ್ಟಂತೆ, ಯಾವುದೇ ಅಂತಿಮ ಒಪ್ಪಂದಕ್ಕೆ ತಲುಪಿಲ್ಲ. ಆದರೆ, ಈ ವಿಷಯದಲ್ಲಿ ಗಮನಾರ್ಹ ಸುಧಾರಣೆಯಾಗಿದ್ದು, 03.12.2018 ರಂದು ನಡೆದ ಸಭೆಯಲ್ಲಿ ಸಿನ್ಹಾ ಮತ್ತು ಟೆಲಿಕಾಂ ಅಧಿಕಾರಿಗಳು 3 ನೇ ವೇತನ ಪರಿಷ್ಕರಣೆಗೆ ಪರಿಹಾರ ನೀಡುವ ಬಗ್ಗೆ ಧನಾತ್ಮಕವಾಗಿ ಪ್ರತಿಕ್ರಿಯಿದ್ದಾರೆ. ಹಾಗಾಗಿ ಶೇ.15 ಫಿಟ್ ಮೆಂಟ್ ಕೊಡುವ ಸಾಧ್ಯತೆ ಕಡಿಮೆ ಇದೆ.
4. ಬಿಎಸ್‌ಎನ್‌ಎಲ್ ಗೆ 4 ಜಿ ಸ್ಪೆಕ್ಟ್ರಮ್ ಹಂಚಿಕೆ
4 ಜಿ ಸ್ಪೆಕ್ಟ್ರಮ್ ಅನ್ನು ಬಿಎಸ್ಎನ್ಎಲ್ ಗೆ ವಹಿಸುವ ಬಗ್ಗೆ ದೂರಸಂಪರ್ಕ ಇಲಾಖೆ ಈಗಾಗಲೇ ಕ್ಯಾಬಿನೆಟ್ ನೋಟ್ ಅನ್ನು ಸಿದ್ಧಪಡಿಸಿದೆ. ಬಿಎಸ್ಎನ್ಎಲ್ ನೌಕರರು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ ಬೆನ್ನಲ್ಲೇ ಅದನ್ನು ಅಂತರ-ಸಚಿವಾಲಯ ಸಮಾಲೋಚನೆಗೆ ಕಳುಹಿಸಲಾಗಿದೆ. ಈ ಪ್ರಕ್ರಿಯೆ ಪೂರ್ಣಗೊಂಡ ಕೂಡಲೇ ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ಮಂಡಿಸಿ, ಒಪ್ಪಿಗೆ ಪಡೆಯಲಾಗುವುದು ಎಂದು ಸಿನ್ಹಾ ಹೇಳಿದ್ದಾರೆ.