ನವದೆಹಲಿ: ಆಧಾರ್ ಸಿಂಧುತ್ವ ಕುರಿತಂತೆ ಸುಪ್ರೀಂ ಕೋರ್ಟಿನಲ್ಲಿ ಇಂದು ಮಹತ್ವದ ತೀರ್ಪು ಇಂದು ಹೊರಬಿದ್ದಿದ್ದು, ಆಧಾರ್ ಸಾಂವಿಧಾನಿಕ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.
ಸುಪ್ರೀಂ ಕೋರ್ಟ್ನ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ಎ.ಕೆ ಸಿಕ್ರಿ, ಎ.ಎಂ ಖಾನ್ವಿಲ್ಕರ್, ಡಿ.ವೈ ಚಂದ್ರಚೂಡ್ ಮತ್ತು ಅಶೋಕ್ ಭೂಷಣ್ ಅವರಿದ್ದ ನ್ಯಾಯಪೀಠವು ಬುಧವಾರ ಆಧಾರ್ನ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿ ಹಿಡಿಯುವ ಮೂಲಕ ಮಹತ್ವದ ತೀರ್ಪು ಪ್ರಕಟಿಸಿತು.
ಸುಪ್ರೀಂ ಕೋರ್ಟ್ ಪ್ರಕಟಿಸಿದ 'ಆಧಾರ್' ತೀರ್ಪಿನ 10 ಪ್ರಮುಖ ಅಂಶಗಳು ಇಲ್ಲಿವೆ:
1. ಬ್ಯಾಂಕಿಂಗ್, ಮೊಬೈಲ್ ಫೋನ್ ಸೇವೆಗಳಿಗೆ ಆಧಾರ್ ಕಡ್ಡಾಯವಲ್ಲ.
2. ಶಾಲಾ ಪ್ರವೇಶಕ್ಕೆ ಆಧಾರ್ ಕಡ್ಡಾಯವಲ್ಲ. ಅಂತೆಯೇ ಸಿಬಿಎಸ್ಇ, ಯುಜಿಸಿ ಮತ್ತು ಎನ್ಇಇಟಿ ಪರೀಕ್ಷೆಗೂ ಕೂಡ ಆಧಾರ್ ಅವಶ್ಯಕವಲ್ಲ.
3. ಆಧಾರ್ ಅನ್ನು ಪಾನ್ ಸಂಖ್ಯೆಯೊಂದಿಗೆ ಸಂಪರ್ಕಿಸುವುದು ಕಡ್ಡಾಯವಾಗಿದೆ.
4. ಅಕ್ರಮ ವಲಸಿಗರು ಆಧಾರ್ ಕಾರ್ಡ್ ಪಡೆಯುವಂತಿಲ್ಲ.
5. ಆಧಾರ್ ಸಾಂವಿಧಾನಿಕವಾಗಿ ಮಾನ್ಯವಾಗಿದೆ.
6. ಆಧಾರ್ ಮೇಲಿನ ದಾಳಿ ಸಂವಿಧಾನಕ್ಕೆ ವಿರುದ್ಧವಾದುದು. ಆಧಾರ್ ದತ್ತಾಂಶಗಳ ಸೋರಿಕೆ ಅಥವಾ ಅವುಗಳನ್ನು ಕದಿಯುವುದು ಸಂವಿಧಾನಕ್ಕೆ ವಿರುದ್ಧವಾದದ್ದು. ಆಧಾರ್ ಮಾಹಿತಿ ರಕ್ಷಣೆಗೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು.
7. ಆಧಾರ್ ಸಂಖ್ಯೆ ನೀಡಲು ಸಾಧ್ಯವಾದಷ್ಟು ಕಡಿಮೆ ದತ್ತಾಂಶ ಸಂಗ್ರಹಿಸಬೇಕು. ಜನರಿಗೆ ವಿಶಿಷ್ಟ ಗುರುತು ನೀಡುವುದಷ್ಟೇ ಇದರ ಉದ್ದೇಶವಾಗಿರಬೇಕು.
8. ಆಧಾರ್ ಕಾರ್ಡ್ ಮತ್ತು ಅಸ್ತಿತ್ವಕ್ಕೆ ಮೂಲಭೂತ ವ್ಯತ್ಯಾಸವಿದೆ. ಒಂದು ಬಾರಿ ಜೈವಿಕ ದತ್ತಾಂಶಗಳನ್ನು ಅಂದರೆ ಬಯೋಮೆಟ್ರಿಕ್ ಇನ್ಫರ್ಮೇಷನ್ ಅನ್ನು ಸಂಗ್ರಹಿಸಿದರೆ ಅದು ವ್ಯವಸ್ಥೆಯಲ್ಲಿ ಶಾಶ್ವತವಾಗಿ ಉಳಿಯುತ್ತದೆ.
9. ನ್ಯಾಯಾಲಯದ ಅನುಮತಿಯಿಲ್ಲದೆ ಬಯೋಮೆಟ್ರಿಕ್ ದತ್ತಾಂಶವನ್ನು ಯಾವುದೇ ಎಜೆನ್ಸಿಯೊಂದಿಗೆ ಹಂಚಿಕೊಳ್ಳಬಾರದು.
10. ಆಧಾರ್ ನಿಂದಾಗಿ ಸಾಮಾನ್ಯರ ಸಬಲೀಕರಣ ಸಾಧ್ಯ.