ನವದೆಹಲಿ: ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ ಮತ್ತು ಮಾಜಿ ಕೇಂದ್ರ ಸಚಿವರಾದ ಸತ್ಯ ಪಾಲ್ ಸಿಂಗ್ ಮತ್ತು ಜಯಂತ್ ಸಿನ್ಹಾ ಅವರು ಲೋಕಸಭೆಯಿಂದ ಸಾರ್ವಜನಿಕ ಲೆಕ್ಕಪತ್ರ ಸಮಿತಿ (PAC) ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಇವರೊಂದಿಗೆ ಟಿಆರ್ ಬಾಲು (ಡಿಎಂಕೆ), ಬಿಜೆಪಿಯ ಸುಭಾಷ್ ಚಂದ್ರ ಬಹೇರಿಯಾ, ಸುಧೀರ್ ಗುಪ್ತಾ, ದರ್ಶನಾ ವಿಕ್ರಮ್ ಜರ್ದೋಶ್, ಅಜಯ್ ಮಿಶ್ರಾ, ಜಗದಾಂಬಿಕಾ ಪಾಲ್, ವಿಷ್ಣು ದಯಾಳ್ ರಾಮ್, ರಾಮ್ ಕೃಪಾಲ್ ಯಾದವ್, ಮಹತಾಬ್ (ಬಿಜೆಡಿ), ರಾಹುಲ್ ರಮೇಶ್ ಶೆವಾಲೆ (ಶಿವಸೇನೆ), ರಾಜೀವ್ ರಂಜನ್ ಸಿಂಗ್ (ಜೆಡಿಯು) ಮತ್ತು ಬಾಲಶೌರಿ ವಲ್ಲಭನೇನಿ (ವೈಎಸ್ಆರ್ಸಿ ಪಕ್ಷ) ಅವರು ಲೋಕಸಭೆಯಿಂದ ಸಮಿತಿಗೆ ಆಯ್ಕೆಯಾಗಿದ್ದಾರೆ.
ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಲೋಕಸಭೆಯಿಂದ 15 ಮತ್ತು ರಾಜ್ಯಸಭೆಯಿಂದ 7 ಸದಸ್ಯರನ್ನು ಹೊಂದಿದ್ದು, ರಾಜ್ಯಸಭೆಯು ತನ್ನ ಸದಸ್ಯರ ಹೆಸರನ್ನು ಕಳುಹಿಸಿದ ಬಳಿಕ ಔಪಚಾರಿಕವಾಗಿ ಈ ಸಮಿತಿ ರಚಿಸಲಾಗುತ್ತದೆ. ಸಾಮಾನ್ಯವಾಗಿ ಈ ಸಮಿತಿಯು ಪ್ರತಿಪಕ್ಷದ ಸದಸ್ಯರ ನೇತೃತ್ವದಲ್ಲಿರುತ್ತದೆ.
1967 ರಲ್ಲಿ ವಿರೋಧ ಪಕ್ಷದ ಸದಸ್ಯರನ್ನು ಮೊದಲ ಬಾರಿಗೆ ಈ ಸಮಿತಿಯ ಅಧ್ಯಕ್ಷರನ್ನಾಗಿ ಅಂದಿನ ಲೋಕಸಭಾ ಸ್ಪೀಕರ್ ನೇಮಕ ಮಾಡಿದ್ದರು. ಇಂದಿಗೂ ಸಹ ಅದೇ ಅಭ್ಯಾಸ ಮುಂದುವರೆದಿದೆ.
ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರಾಗಿರುವ ಚೌಧರಿ ಅವರು ಸದನದಿಂದ ಪಿಎಸಿಯಲ್ಲಿ ಸ್ಥಾನ ಪಡೆದ ಪಕ್ಷದ ಏಕೈಕ ಸದಸ್ಯರಾಗಿದ್ದಾರೆ. ಈ ಸಮಿತಿಯ ಸದಸ್ಯರ ಅಧಿಕಾರಾವಧಿ ಒಂದು ವರ್ಷವಾಗಿದ್ದು, ಕಳೆದ ವರ್ಷ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಪಿಎಸಿ ಅಧ್ಯಕ್ಷರಾಗಿದ್ದರು.