ನವದೆಹಲಿ: ನಟಿ ಶ್ರೀದೇವಿಯ ಪಾರ್ಥಿವ ಶರೀರವನ್ನು ಭಾರತಕ್ಕೆ ತರಲು ದುಬೈ ಪೊಲೀಸರು ಅನುಮತಿ ನೀಡಿದ್ದಾರೆ. ದುಬೈ ಪೋಲಿಸರು ನೀಡಿರುವ ಆದೇಶದ ಪತ್ರವನ್ನು ಭಾರತೀಯ ದೂತಾವಾಸಕ್ಕೆ ಸಲ್ಲಿಸಲಾಗಿದ್ದು, ಎನ್ಒಸಿಗೂ ಸಹ ನೀಡಲಾಗಿದೆ.
ಭಾರತೀಯ ದೂತಾವಾಸದ ಸಹಾಯದಿಂದ, ಶ್ರೀದೇವಿ ಅವರ ಮೃತದೇಹ ಕೆಡದಂತೆ ಶರೀರಕ್ಕೆ ರಾಸಾಯನಿಕ ಲೇಪನವನ್ನೂ ಮಾಡಲಾಗಿದೆ. ಪಾರ್ಥಿವ ಶರೀರದ ಜೊತೆಯಲ್ಲಿ, ಬೋನಿ ಕಪೂರ್ ಮತ್ತು ಅರ್ಜುನ್ ಕಪೂರ್ ಕೂಡಾ ಬರಲಿದ್ದಾರೆ ಎಂದು ಹೇಳಲಾಗುತ್ತಿದ್ದು, ರಾತ್ರಿ 9 ಗಂಟೆಯ ಹೊತ್ತಿಗೆ ಶ್ರೀ ದೇವಿ ಪಾರ್ಥಿವ ಶರೀರವು ಭಾರತಕ್ಕೆ ಆಗಮಿಸಲಿದೆ ಎಂದು ನಿರೀಕ್ಷಿಸಲಾಗಿದೆ.
ಅಪಘಾತದ ಕಾರಣದಿಂದ ಪೋಸ್ಟ್ ಮಾರ್ಟಮ್ ವರದಿಯಲ್ಲಿ ಆಕಸ್ಮಿಕ ಸಾವು ಎಂದು ಉಲ್ಲೇಖವಾಗಿದ್ದು, ವರದಿಯೊಂದಿಗೆ ಫೋರೆನ್ಸಿಕ್ ವರದಿಯ ಒಂದು ಪ್ರತಿಯನ್ನೂ ಲಗತ್ತಿಸಲಾಗಿದೆ. ಯುಎಇ ಆರೋಗ್ಯ ಸಚಿವಾಲಯ ಮತ್ತು ದುಬೈನ ಪ್ರಿವೆಂಟೀವ್ ಮೆಡಿಸಿನ್ ನಿರ್ದೇಶಕರ ಅನುಮೊದನೆಯು ದೊರೆತಿದೆ. ಸುದ್ದಿ ಸಂಸ್ಥೆಯ ವರದಿಯ ಪ್ರಕಾರ, ಶ್ರೀದೇವಿ ಅವರು ಮದ್ಯ ಕುಡಿದ ಮತ್ತಿನಲ್ಲಿ ಬಾತ್ ಟಬ್'ನಲ್ಲಿ ಬಿದ್ದು ಮುಳುಗಿದರು ಎಂದು ವರದಿಯಾಗಿದೆ. 54 ವರ್ಷದ ಶ್ರೀದೇವಿ ದುಬೈ ಹೋಟೆಲ್ನಲ್ಲಿ ಶನಿವಾರ ರಾತ್ರಿ ನಿಧನರಾದರು. ಅವರು ಸಂಬಂಧಿಕರ ವಿವಾಹ ಸಮಾರಂಭವೊಂದರಲ್ಲಿ ಭಾಗಿಯಾಗಲು ಕುಟುಂಬ ಸಮೇತ ಅಲ್ಲಿಗೆ ತೆರಳಿದ್ದರು.
ಪೊಲೀಸರ ತನಿಖೆ ಮುಂದುವರಿಕೆ
ಶ್ರೀದೇವಿಯ ಮರಣದ ಸಂದರ್ಭಗಳಲ್ಲಿ ತನಿಖೆ ನಡೆಸಿದ ಪೊಲೀಸರು ಶ್ರೀದೇವಿ ಅವರ ಸಾವಿಗೆ ಕಾರಣವನ್ನು ಪರಿಶೀಲಿಸಲು, ಹೊಟೇಲ್ ಜುಮಾರಾ ಎಮಿರೇಟ್ಸ್ ಟವರ್ನ 2201 ನೇ ಕೋಣೆಯಲ್ಲಿನ ಘಟನೆಗಳ ಅನುಕ್ರಮವನ್ನು ಮರು-ನಿರ್ಮಿಸಲು ಪ್ರಯತ್ನಿಸಿದರು. ಇದಲ್ಲದೆ ಶ್ರೀದೇವಿ ಅವರ ಕರೆ ವಿವರಗಳನ್ನು ಸಂಗ್ರಹಿಸಿರುವ ಪೊಲೀಸರು, ಹೋಟೆಲ್ ಸಿಬ್ಬಂದಿಯನ್ನೂ ವಿಚಾರಣೆ ನಡೆಸಿದ್ದಾರೆ. ಇದೇ ಸಮಯದಲ್ಲಿ ಶ್ರೀದೇವಿ ಅವರ ಕುಟುಂಬದ ಸದಸ್ಯರ ಹೇಳಿಕೆಗಳನ್ನೂ ಪಡೆದಿದ್ದಾರೆ ಎನ್ನಲಾಗಿದೆ.