ನವದೆಹಲಿ: ಇಂಡಿಗೊ ವಿಮಾನಯಾನ ಸಂಸ್ಥೆಯ ನಾಲ್ವರು ಹಿರಿಯ ಅಧಿಕಾರಿಗಳಿಗೆ ಸಿವಿಲ್ ಏವಿಯೇಷನ್ ವಾಚ್‌ಡಾಗ್ ಡಿಜಿಸಿಎ ಶುಕ್ರವಾರ ಶೋಕಾಸ್ ನೋಟಿಸ್‌ಗಳನ್ನು ನೀಡಿದೆ ಎಂದು ತಿಳಿದು ಬಂದಿದೆ.
ವಾಯುಯಾನ ನಿಯಂತ್ರಕದ ವಿಶೇಷ ಲೆಕ್ಕಪರಿಶೋಧನಾ ತಂಡವು ಸುರಕ್ಷತೆಯ ವೈಫಲ್ಯ ಕಂಡು ಬಂದ ಹಿನ್ನಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಜುಲೈ 8 ಮತ್ತು ಜುಲೈ 9 ರಂದು ಗುರಗಾಂವ್‌ನ ಇಂಡಿಗೊ ಕಚೇರಿಯಲ್ಲಿ ನಾಗರಿಕ ವಿಮಾನಯಾನ ನಿರ್ದೇಶನಾಲಯ ಅಥವಾ ಡಿಜಿಸಿಎ ಲೆಕ್ಕಪರಿಶೋಧನೆ ನಡೆಸಿದೆ ಎನ್ನಲಾಗಿದೆ.
'ಇಂಡಿಗೊದ ತರಬೇತಿ ಮುಖ್ಯಸ್ಥ ಕ್ಯಾಪ್ಟನ್ ಸಂಜೀವ್ ಭಲ್ಲಾ; ವಿಮಾನ ಸುರಕ್ಷತೆಯ ಮುಖ್ಯಸ್ಥ ಕ್ಯಾಪ್ಟನ್ ಹೇಮಂತ್ ಕುಮಾರ್; ಕಾರ್ಯಾಚರಣೆಯ ಹಿರಿಯ ಉಪಾಧ್ಯಕ್ಷ ಕ್ಯಾಪ್ಟನ್ ಆಶಿಮ್ ಮಿತ್ರ; ಕ್ಯಾಪ್ಟನ್ ರಾಕೇಶ್ ಶ್ರೀವಾಸ್ತವ, ಕ್ಯೂಎ (ಕ್ವಾಲಿಟಿ ಅಶ್ಯೂರೆನ್ಸ್) ಮತ್ತು ಓಪ್ಸ್ ಸೇಫ್ಟಿ - ಈ ನಾಲ್ಕು ಅಧಿಕಾರಿಗಳಿಗೆ ನೋಟಿಸ್‌ಗಳನ್ನು ನೀಡಲಾಗಿದೆ 'ಎಂದು ಮೂಲಗಳು ಪಿಟಿಐಗೆ ತಿಳಿಸಿವೆ.
ದೇಶಾದ್ಯಂತ ಅನೇಕ ಲ್ಯಾಂಡಿಂಗ್ ಘಟನೆಗಳ ಹಿನ್ನೆಲೆಯಲ್ಲಿ ಡಿಜಿಸಿಎ ಮಾನ್ಸೂನ್ ಪೀಡಿತ ಪ್ರದೇಶಗಳಲ್ಲಿರುವ ಎಲ್ಲಾ ವಿಮಾನಯಾನ ಮತ್ತು ವಿಮಾನ ನಿಲ್ದಾಣಗಳ ವಿಶೇಷ ಲೆಕ್ಕಪರಿಶೋಧನೆಯನ್ನು ನಡೆಸುತ್ತಿದೆ.