ಲಕ್ನೋ: ಲೋಕಸಭಾ ಚುನಾವಣೆಯ ಎಲ್ಲಾ ಹಂತಗಳ ಮತದಾನ ಭಾನುವಾರ ಪೂರ್ಣಗೊಂದು ಮತದಾನೋತ್ತರ ಸಮೀಕ್ಷೆಗಳು ಪ್ರಕಟವಾದ ಬೆನ್ನಲ್ಲೇ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ಅವರನ್ನು ಭೇಟಿಯಾಗಿ ಚುನಾವಣಾ ಫಲಿತಾಂಶದ ಬಗ್ಗೆ ಚರ್ಚೆ ನಡೆಸಿದ್ದಾರೆ.
ಮೂಲಗಳ ಪ್ರಕಾರ, ಅಖಿಲೇಶ್ ಮತ್ತು ಮಾಯಾವತಿ ಅರ್ಧ ಗಂಟೆಗಳಿಗೂ ಅಧಿಕ ಸಮಯ ಮಾತುಕತೆ ನಡೆಸಿದ್ದು, ಲೋಕಸಭಾ ಚುನಾವಣೆಯಲ್ಲಿ ಎಸ್ಪಿ-ಬಿಎಸ್ಪಿ-ಆರ್ಎಲ್ಡಿ ಪಕ್ಷಗಳು ಎಷ್ಟು ಸ್ಥಾನಗಳನ್ನು ಗಳಿಸಲಿವೆ ಎಂಬುದರ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಉತ್ತರ ಪ್ರದೇಶದ 80 ಲೋಕಸಭಾ ಸ್ಥಾನಗಳಲ್ಲಿ ಮೈತ್ರಿಕೂಟವು 55 ಸ್ಥಾನಗಳನ್ನು ಗೆಲ್ಲಲಿದೆ. ಮೇ 23 ರಂದು ಫಲಿತಾಂಶ ಘೋಷಣೆ ಬಳಿಕ ದೇಶ ನೂತನ ಪ್ರಧಾನಿಯನ್ನು ಪಡೆಯಲಿದೆ ಎಂದು ಎಂದು ಅಖಿಲೇಶ್ ಮತ್ತು ಮಾಯಾವತಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಷ್ಟೇ ಅಲ್ಲದೆ, ಫಲಿತಾಂಶ ಘೋಷಣೆಯ ಬಳಿಕ ವಿರೋಧ ಪಕ್ಷಗಳ ನಡೆ ಏನಿರಬಹುದು ಎಂಬುದರ ಬಗ್ಗೆಯೂ ಚರ್ಚಿಸಲಾಗಿದ್ದು, ಮೇ 23 ರಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಭೇಟಿ ಮಾಡಲು ಮಾಯಾವತಿ ನಿರ್ಧರಿಸಿದ್ದಾರೆ. ಅಖಿಲೇಶ್ ಮೇ 23 ರ ನಂತರ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ.