ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ನೇಮಕ ಸಾಧ್ಯತೆ..?

ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಲು ಬದ್ದರಾಗಿರುವ ಹಿನ್ನಲೆಯಲ್ಲಿ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ನೇಮಕ ಮಾಡುವ  ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

Last Updated : Jun 23, 2019, 11:08 AM IST
 ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ನೇಮಕ ಸಾಧ್ಯತೆ..?  title=
Photo courtesy: Facebook

ನವದೆಹಲಿ: ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಲು ಬದ್ದರಾಗಿರುವ ಹಿನ್ನಲೆಯಲ್ಲಿ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ನೇಮಕ ಮಾಡುವ  ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ದೆಹಲಿಯಲ್ಲಿನ ಪಕ್ಷದ ಮೂಲಗಳು ತಿಳಿಸಿರುವಂತೆ ಕಾಂಗ್ರೆಸ್ ಪಕ್ಷದಲ್ಲಿ ಈಗ ಬಹುತೇಕರು ರಾಹುಲ್ ಗಾಂಧಿಯವರ ಸ್ಥಾನದಲ್ಲಿ ಗೆಹ್ಲೋಟ್ ಅವರನ್ನು ಅಧ್ಯಕ್ಷ ಪದವಿಗೆ ನೇಮಕ ಮಾಡಲು ಬಯಸಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ಅಧ್ಯಕ್ಷ ಪದವಿ ಹುದ್ದೆಯ ಜೊತೆಗೆ ಅವರು ರಾಜಸ್ಥಾನದ ಮುಖ್ಯಮಂತ್ರಿಯಾಗಿ ಮುಂದುವರೆಯುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಒಡಿಶಾ ಸಿಎಂ ನವೀನ್ ಪಟ್ನಾಯಕ್, ಉತ್ತರ ಪ್ರದೇಶದ ಮಾಜಿ ಸಿಎಂಗಳಾದ ಅಖಿಲೇಶ್ ಯಾದವ್ ಮತ್ತು ಮಾಯಾವತಿ ಅವರು ಮುಖ್ಯಮಂತ್ರಿಯಾಗಿದ್ದುಕೊಂಡೆ ಪಕ್ಷವನ್ನು ಮುನ್ನಡೆಸಿರುವ ಬಗ್ಗೆ ಈ ವೇಳೆ ಉಲ್ಲೇಖಿಸಲಾಗಿದೆ. ಆದ್ದರಿಂದ ಗೆಹ್ಲೋಟ್ ಅವರು ಸಿಎಂ ಸ್ಥಾನದ ಜೊತೆಗೆ ಪಕ್ಷದ ನಾಯಕತ್ವವನ್ನು ವಹಿಸಿಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಮೂಲಗಳು ತಿಳಿಸಿವೆ.

ಲೋಕಸಭಾ ಚುನಾವಣಾ ಫಲಿತಾಂಶದ ನಂತರ ಸೋಲಿನ ಜವಾಬ್ದಾರಿ ಹೊತ್ತ ರಾಹುಲ್ ಗಾಂಧಿ ಪಕ್ಷದ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದರು.ಆದರೆ ಪಕ್ಷದ ಹಿರಿಯ ನಾಯಕರು ಅವರ ರಾಜೀನಾಮೆ ಪತ್ರವನ್ನು ತಿರಸ್ಕರಿಸಿದ್ದರು. ಇದಾದ ನಂತರ ರಾಹುಲ್ ಗಾಂಧಿ ಮಾತ್ರ ತಮ್ಮ ರಾಜೀನಾಮೆಗೆ ಕಟಿ ಬದ್ಧರಾಗಿರುವ ಹಿನ್ನಲೆಯಲ್ಲಿ ಈಗ ಪಕ್ಷದ ಹಿರಿಯ ನಾಯಕರು ಅನಿವಾರ್ಯವಾಗಿ ಪಕ್ಷವನ್ನು ಮುನ್ನಡೆಸಲು ಸೂಕ್ತ ವ್ಯಕ್ತಿಯನ್ನು ಹುಡುಕಬೇಕಾದ ಸ್ಥಿತಿಯಲ್ಲಿದ್ದಾರೆ.

ಇನ್ನೊಂದೆಡೆ ಅಶೋಕ್ ಗೆಹ್ಲೋಟ್ ಪಕ್ಷದ ಅಧ್ಯಕ್ಷರಾಗಿ ನೇಮಕ ಮಾಡಲು ಗಾಂಧಿ ಕುಟುಂಬ ಹಾಗೂ ಹಿರಿಯ ನಾಯಕರು ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

Trending News