ಬಕ್ಸಾ: ಅಸ್ಸಾಂನಲ್ಲಿ ಸಂಭವಿಸಿರುವ ಭೀಕರ ಪ್ರವಾಹದಿಂದಾಗಿ ಕಾಜಿರಂಗಾ ರಾಷ್ಟ್ರೀಯ ಉದ್ಯಾನವನ ಮತ್ತು ಅದರ 95 ಶಿಬಿರಗಳು ಶೇ.70 ರಷ್ಟು ಜಲಾವೃತವಾಗಿವೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲು ಅರಣ್ಯ ಅಧಿಕಾರಿಗಳ ರಜೆಯನ್ನು ರದ್ದುಗೊಳಿಸಲಾಗಿದ್ದು ಕತ್ಯವ್ಯದಲ್ಲಿ ಹಾಜರಿರುವಂತೆ ಸೂಚನೆ ನೀಡಲಾಗಿದೆ.
ರಾಷ್ಟ್ರೀಯ ಉದ್ಯಾನವನದ ಮುಕ್ಕಾಲು ಭಾಗ ಜಲಾವೃತಗೊಂಡಿರುವ ಕಾರಣ ಪ್ರಾಣಿಗಳನ್ನು ಎತ್ತರದ ಪ್ರದೇಶಗಳಿಗೆ ಕರೆದೊಯ್ಯಲಾಗಿದ್ದು, ಬೇಟೆಗಾರರು ಪ್ರಾಣಿಗಳ ಬೇಟೆಯನ್ನು ತಪ್ಪಿಸುವ ಉದ್ದೇಶದಿಂದ ರಾಷ್ಟ್ರೀಯ ಹೆದ್ದಾರಿ 37ರಲ್ಲಿ ಅರಣ್ಯ ಇಲಾಖೆ ಸಂಪೂರ್ಣ ಎಚ್ಚರಿಕೆ ವಹಿಸಿದೆ. ರಾತ್ರಿ ವೇಳೆಯೂ ಸಹ ಅರಣ್ಯ ಕಾವಲುಗಾರರನ್ನು ಭದ್ರತೆಗೆ ನಿಯೋಜಿಸಲಾಗಿದೆ ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ.
ಏತನ್ಮಧ್ಯೆ, ಭಾರತೀಯ ಸೇನೆ, ಎಸ್‌ಡಿಆರ್‌ಎಫ್ ಮತ್ತು ಸಿವಿಲ್ ಅಡ್ಮಿನಿಸ್ಟ್ರೇಷನ್ ಪಡೆಗಳು ರಕ್ಷಣಾ ಕಾರ್ಯಾಚರಣೆ ನಡೆಸಿ ರಾಜ್ಯದ ಬಕ್ಸಾ ಜಿಲ್ಲೆಯ ಬಾಲಿಪುರ್ ಚಾರ್‌ನಲ್ಲಿ ಪ್ರವಾಹಕ್ಕೆ ಸಿಲುಕಿದ್ದ ಸುಮಾರು 150 ಗ್ರಾಮಸ್ಥರನ್ನು ರಕ್ಷಿಸಿ ಸ್ಥಳಾಂತರಿಸಿದೆ. ಇವರಲ್ಲಿ 55 ಮಹಿಳೆಯರು, 40 ಪುರುಷರು, 25 ಹಿರಿಯ ನಾಗರಿಕರು ಮತ್ತು 30 ಮಕ್ಕಳು ಸೇರಿದ್ದಾರೆ.