Assembly Elections 2021: ಅಸ್ಸಾಂ-ಬಂಗಾಳದಲ್ಲಿ ಇಂದು ಮೂರನೇ ಹಂತದ ಮತದಾನ, ಕೇರಳ-ತಮಿಳುನಾಡು, ಪುದುಚೇರಿಯಲ್ಲಿ ಮತದಾನಕ್ಕೆ ಭಾರೀ ಬಿಗಿ ಭದ್ರತೆ

Assembly Elections 2021: ತಮಿಳುನಾಡು, ಕೇರಳ ಮತ್ತು ಪುದುಚೇರಿಯಲ್ಲಿ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೂ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮತ್ತೊಂದೆಡೆ, ಅಸ್ಸಾಂನಲ್ಲಿ ಮೂರನೇ ಮತ್ತು ಕೊನೆಯ ಹಂತದ ಮತದಾನ ಮಂಗಳವಾರ ನಡೆಯಲಿದೆ.    

Written by - Yashaswini V | Last Updated : Apr 6, 2021, 08:12 AM IST
  • ತಮಿಳುನಾಡು, ಕೇರಳ ಮತ್ತು ಪುದುಚೇರಿಯಲ್ಲಿ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೂ ಒಂದೇ ಹಂತದಲ್ಲಿ ಮತದಾನ
  • ಅಸ್ಸಾಂನಲ್ಲಿ ಇಂದು ಮೂರನೇ ಹಾಗೂ ಕೊನೆ ಹಂತದ ಮತದಾನ
  • ಪಶ್ಚಿಮ ಬಂಗಾಳವು ಎಂಟು ಹಂತಗಳಲ್ಲಿ ಮತದಾನ ನಡೆಯುವ ಏಕೈಕ ರಾಜ್ಯವಾಗಿದೆ
Assembly Elections 2021: ಅಸ್ಸಾಂ-ಬಂಗಾಳದಲ್ಲಿ ಇಂದು ಮೂರನೇ ಹಂತದ ಮತದಾನ, ಕೇರಳ-ತಮಿಳುನಾಡು, ಪುದುಚೇರಿಯಲ್ಲಿ ಮತದಾನಕ್ಕೆ ಭಾರೀ ಬಿಗಿ ಭದ್ರತೆ title=
Five states elections today (Image courtesy: ANI)

ನವದೆಹಲಿ : ಮಾರ್ಚ್ 27 ರಂದು ಪ್ರಾರಂಭವಾದ 5 ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಮೂರನೇ ಹಂತದ ಮತದಾನ ಇಂದು ನಡೆಯಲಿದೆ.  ಅಸ್ಸಾಂ (Assam)ನಲ್ಲಿ ಇಂದು ಮೂರನೇ ಹಾಗೂ ಕೊನೆ ಹಂತದ ಮತದಾನ ನಡೆಯಲಿದ್ದು, ಪಶ್ಚಿಮ ಬಂಗಾಳ (West Bengal)ದಲ್ಲಿ  ಮೂರನೇ ಹಂತದ ಮತದಾನ ನಡೆಯಲಿದೆ. ಇದಲ್ಲದೆ ತಮಿಳುನಾಡು, ಕೇರಳ ಮತ್ತು ಪುದುಚೇರಿಯಲ್ಲೂ ಮತದಾನ ನಡೆಯಲಿದೆ. ಈ ಮೂರು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿ, ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಗಮನಾರ್ಹವಾಗಿ ಪಂಚ ರಾಜ್ಯಗಳ ಚುನಾವಣೆಯಲ್ಲಿ ಎಂಟು ಹಂತಗಳಲ್ಲಿ ಚುನಾವಣಾ ಎದುರಿಸುತ್ತಿರುವ ಏಕೈಕ ರಾಜ್ಯ ಪಶ್ಚಿಮ ಬಂಗಾಳ.  ಈ ಐದು ರಾಜ್ಯಗಳ ಚುನಾವಣಾ ಫಲಿತಾಂಶಗಳು ಮೇ 2 ರಂದು ಹೊರಬೀಳಲಿದೆ. ಮತದಾನದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ನಿಗಾ ವಹಿಸಲು ಭಾರೀ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. 

ಪಶ್ಚಿಮ ಬಂಗಾಳದಲ್ಲಿ 8 ಹಂತಗಳಲ್ಲಿ ಮತದಾನ:
ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆ (West Bengal Assembly Election 2021) ಬಗ್ಗೆ ಹೇಳುವುದಾದರೆ ಇಲ್ಲಿ 94 ವಿಧಾನಸಭಾ ಸ್ಥಾನಗಳಿಗೆ 8 ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 27, ಏಪ್ರಿಲ್ 1ರಂದು ಮೊದಲ ಮತ್ತು ಎರಡನೇ ಹಂತದಲ್ಲಿ 30-30 ಸ್ಥಾನಗಳಲ್ಲಿ ಎರಡು ಹಂತಗಳ ಮತದಾನ ಪೂರ್ಣಗೊಂಡಿದ್ದು ಇಂದು (ಏಪ್ರಿಲ್ 6) ಮೂರನೇ ಹಂತದಲ್ಲಿ 31 ಸ್ಥಾನಗಳಲ್ಲಿ ಮತದಾನ ನಡೆಯಲಿದೆ. ಇವುಗಳಲ್ಲಿ ಹೂಗ್ಲಿ (8), ಹೌರಾ (7), ದಕ್ಷಿಣ 24 ಪರಗಣ (16) ಸ್ಥಾನಗಳಿಗೆ ಮತದಾನ ನಡೆಯಲಿದೆ. ಈ ಹಂತದಲ್ಲಿ 205 ಅಭ್ಯರ್ಥಿಗಳು ಕಣದಲ್ಲಿದ್ದಾರೆ.  ಚುನಾವಣೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದ್ದು ಇಡೀ ರಾಜ್ಯದಲ್ಲಿ ಸೆಕ್ಷನ್ 144 ವಿಧಿಸಲಾಗಿದೆ. ಈ ಭಾಗದಲ್ಲಿ ಯಾವುದೇ ತೊಂದರೆ ಇಲ್ಲದೆ ಮತದಾನ ನಡೆಸುವ ಉದ್ದೇಶದಿಂದ ಕೇಂದ್ರ ಭದ್ರತಾ ಪಡೆಗಳ 832 ಕಂಪನಿಗಳನ್ನು ಭದ್ರತಾ ಉದ್ದೇಶಗಳಿಗಾಗಿ ನಿಯೋಜಿಸಲಾಗಿದೆ. ಈ ಪೈಕಿ 214 ಕ್ವಿಕ್ ರೆಸ್ಪಾನ್ಸ್ ತಂಡಗಳು ಸೇರಿವೆ. 

ಇದನ್ನೂ ಓದಿ - ಬಿಜೆಪಿ, ಟಿಎಂಸಿ ಕಾರ್ಯಕರ್ತರ ನಡುವೆ ಘರ್ಷಣೆ, ರಾಜ್ಯಪಾಲರಿಗೆ ಕರೆ ಮಾಡಿದ ದೀದಿ

ಪಶ್ಚಿಮ ಬಂಗಾಳದಲ್ಲಿ ಇನ್ನೂ ಐದು ಹಂತಗಳ ಮತದಾನ ಬಾಕಿ ಇದ್ದು ಏಪ್ರಿಲ್ 10 ರಂದು ನಾಲ್ಕನೇ ಹಂತದಲ್ಲಿ 44 ಸ್ಥಾನಗಳಲ್ಲಿ, ಏಪ್ರಿಲ್ 17ರಂದು ಐದನೇ ಹಂತದಲ್ಲಿ 45 ಸ್ಥಾನಗಳಲ್ಲಿ, ಏಪ್ರಿಲ್ 22 ರಂದು ಆರನೇ ಹಂತದಲ್ಲಿ 43 ಸ್ಥಾನಗಳಲ್ಲಿ, ಏಪ್ರಿಲ್ 26 ರಂದು ಏಳನೇ ಹಂತದಲ್ಲಿ 36 ಸ್ಥಾನಗಳಿಗೆ ಮತ್ತು ಏಪ್ರಿಲ್ 29 ರಂದು  ಎಂಟನೇ ಹಂತದಲ್ಲಿ 35 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ನಡೆಯಲಿದೆ.

ಅಸ್ಸಾಂ ವಿಧಾನಸಭಾ ಚುನಾವಣೆ: 
ಅದೇ ಸಮಯದಲ್ಲಿ, ಅಸ್ಸಾಂ (Assam)ನಲ್ಲಿ ಇಂದು ಕೊನೆಯ ಹಂತದ ಮತದಾನ ನಡೆಯಲಿದೆ. 40 ವಿಧಾನಸಭಾ ಸ್ಥಾನಗಳಲ್ಲಿ ಒಟ್ಟು 337 ಅಭ್ಯರ್ಥಿಗಳು ತಮ್ಮ ಅದೃಷ್ಟವನ್ನು ಪ್ರಯತ್ನಿಸುತ್ತಿದ್ದಾರೆ. ಈ ಸ್ಥಾನಗಳು ರಾಜ್ಯದ 12 ಜಿಲ್ಲೆಗಳಲ್ಲಿ ಬರುತ್ತವೆ. ಈ ಹಂತದಲ್ಲಿ, ಈಶಾನ್ಯದಲ್ಲಿ ಬಿಜೆಪಿಯ ಚಾಣಕ್ಯ ಎಂದು ಕರೆಯಲ್ಪಡುವ ಹೇಮಂತ್ ಬಿಸ್ವಾ ಶರ್ಮಾ ಅವರ ಭವಿಷ್ಯವನ್ನು ಸಹ ನಿರ್ಧರಿಸಲಾಗುತ್ತದೆ. ಅವರು ಜಲುಕ್ಬಾದಿ ವಿಧಾನಸಭಾ ಕ್ಷೇತ್ರದಿಂದ ತಮ್ಮ ಅದೃಷ್ಟ ಪರೀಕ್ಷಿಸುತ್ತಿದ್ದಾರೆ. ಗುವಾಹಟಿ ವಿಧಾನಸಭಾ ಸ್ಥಾನದಲ್ಲಿ ಗರಿಷ್ಠ 15 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಇದನ್ನೂ ಓದಿ - Assam Election 2021: ಬಿಜೆಪಿ ಶಾಸಕರ ಕಾರಿನೊಳಗೆ ಇವಿಎಂ, 4 ಅಧಿಕಾರಿಗಳು ಸಸ್ಪೆಂಡ್

ಕೇರಳ, ತಮಿಳುನಾಡು ಮತ್ತು ಪುದುಚೇರಿ ವಿಧಾನಸಭಾ ಚುನಾವಣೆ: 
ಇದಲ್ಲದೆ ಕೇರಳದ 140 ವಿಧಾನಸಭಾ ಕ್ಷೇತ್ರಗಳು, ತಮಿಳುನಾಡಿನಲ್ಲಿ 234 ವಿಧಾನಸಭಾ ಕ್ಷೇತ್ರಗಳು ಮತ್ತು ಪುದುಚೇರಿಯಲ್ಲಿ 30 ಸ್ಥಾನಗಳಲ್ಲಿ ಇಂದು ಮತದಾನ ನಡೆಯಲಿದೆ. ಈ ಎಲ್ಲ ರಾಜ್ಯಗಳಲ್ಲಿ ಕೇಂದ್ರ ಭದ್ರತಾ ಪಡೆಗಳ ಭಾರಿ ನಿಯೋಜನೆ ಮಾಡಲಾಗಿದೆ.

ತಮಿಳುನಾಡಿನಲ್ಲಿ 2021ರ ವಿಧಾನಸಭಾ ಚುನಾವಣೆ ಇತಿಹಾಸದಲ್ಲೇ ಬಹಳ ಮಹತ್ವದ ಚುನಾವಣೆ (Election) ಎಂದು ಹೇಳಲಾಗುತ್ತಿದೆ. ಏಕೆಂದರೆ ತಮಿಳುನಾಡಿನ ಬಲಿಷ್ಠ ರಾಜಕೀಯ ನಾಯಕರಾದ ಡಿಎಂಕೆ ನಾಯಕ ಎಂ ಕರುಣಾನಿಧಿ (M Karunanidhi) ಮತ್ತು ಎಐಎಡಿಎಂಕೆ ನಾಯಕಿ ಜೆ ಜಯಲಲಿತಾ (J Jayalalita) ಅವರ ಅನುಪಸ್ಥಿತಿಯಲ್ಲಿ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ. ರಾಜ್ಯದಲ್ಲಿ ಇಂದು ಒಂದೇ ಹಂತದಲ್ಲಿ 234 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.  ತಮಿಳುನಾಡಿನಲ್ಲಿ ಪುರುಷರಿಗಿಂತ (3,09,23,651) ಮಹಿಳೆಯರೇ (3,19,39,112) ಅಧಿಕ ಸಂಖ್ಯೆಯಲ್ಲಿದ್ದಾರೆ. 7,192 ತೃತೀಯ ಲಿಂಗ ಜನರನ್ನು ಒಳಗೊಂಡಂತೆ 6.28 ಕೋಟಿ ಮತದಾರರು 3,998 ಅಭ್ಯರ್ಥಿಗಳಲ್ಲಿ ತಮ್ಮ ನಾಯಕನನ್ನು ಆರಿಸಲಿದ್ದಾರೆ.

ರಾಜ್ಯದಲ್ಲಿ ಒಟ್ಟು 88,937 ಮತದಾನ ಕೇಂದ್ರಗಳು 1,29,165 ಮತದಾನ ಘಟಕಗಳು, 91,180 ನಿಯಂತ್ರಣ ಘಟಕಗಳು (ಅವು ಎಲೆಕ್ಟ್ರಾನಿಕ್ ಮತದಾನ ಯಂತ್ರವನ್ನು ಒಳಗೊಂಡಿವೆ) ಮತ್ತು ಸಮಾನ ಸಂಖ್ಯೆಯ ವಿವಿಪಿಎಟಿ ಘಟಕಗಳನ್ನು ಹೊಂದಿವೆ. 4,17,521 ಮತಗಟ್ಟೆಗಳು ಕರ್ತವ್ಯದಲ್ಲಿದ್ದು, ರಾಜ್ಯ ಪೊಲೀಸರು, ಕೇಂದ್ರ ಸಶಸ್ತ್ರ ಪೊಲೀಸ್ ಪಡೆ, ಮತ್ತು ಗೃಹರಕ್ಷಕರು ಸೇರಿದಂತೆ 1.50 ಲಕ್ಷಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಇದನ್ನೂ ಓದಿ - Kerala Assembly Election: ಜೀವನೋಪಾಯಕ್ಕಾಗಿ ಹಾಲು ಮಾರುವ 27 ವರ್ಷದ ಅರಿಥಾ ಬಾಬುಗೆ ಕಾಂಗ್ರೆಸ್ ಟಿಕೆಟ್

ಕೇರಳ ವಿಧಾನಸಭಾ ಚುನಾವಣೆ: 
ಕೇರಳದಲ್ಲಿ, ಎಲ್ಲಾ 140 ವಿಧಾನಸಭಾ ಕ್ಷೇತ್ರಗಳ (Kerala Assembly Election 2021) ಮತದಾನಕ್ಕಾಗಿ ಒಟ್ಟು 40,771 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ರಾಜ್ಯದ ಒಟ್ಟು ಮತದಾರರ ಸಂಖ್ಯೆ 2,74,46,039, ಇದರಲ್ಲಿ 1,32,83,724 ಪುರುಷರು, 1,41,62,025 ಮಹಿಳೆಯರು ಮತ್ತು 290 ತೃತೀಯ ಲಿಂಗದವರು ಸೇರಿದ್ದಾರೆ. ಈ ಬಾರಿ ಒಟ್ಟು 957 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕೇರಳದ ಪಾಲಕ್ಕಾಡ್ ಕ್ಷೇತ್ರವು ಒಂದು ಪ್ರಮುಖ ಕ್ಷೇತ್ರವಾಗಿದೆ, ಏಕೆಂದರೆ ಈ ಚುನಾವಣಾ ಯುದ್ಧದಲ್ಲಿ 'ಮೆಟ್ರೋ ಮ್ಯಾನ್' (Metro Man) ಇ.ಶ್ರೀಧರನ್ ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.

ಪುದುಚೇರಿ ವಿಧಾನಸಭಾ ಚುನಾವಣೆ: 
ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಕೂಡ ಇಂದು ಮತದಾನ ನಡೆಯಲಿದೆ. ಇಲ್ಲಿ ಮತದಾನಕ್ಕಾಗಿ 1,558 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಯುಟಿಯಾದ್ಯಂತ ಒಟ್ಟು 30 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, ಇದರಲ್ಲಿ 324 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಪುದುಚೇರಿಯ 30 ಕ್ಷೇತ್ರಗಳಲ್ಲಿ 324 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲು ಒಟ್ಟು 10,04,507 ಮತದಾರರು ತಮ್ಮ ಮತದಾನದ ಹಕ್ಕು ಚಲಾಯಿಸಲಿದ್ದಾರೆ.

ಫೆಬ್ರವರಿ 26 ರಂದು 5 ರಾಜ್ಯಗಳಲ್ಲಿ ಚುನಾವಣಾ ದಿನಾಂಕವನ್ನು ಘೋಷಿಸುವಾಗ ಕರೋನಾ ಶಿಷ್ಟಾಚಾರವನ್ನು ಅನುಸರಿಸಲು ಬೂತ್‌ಗಳ ಸಂಖ್ಯೆಯನ್ನು ಹೆಚ್ಚಿಸಿರುವುದಾಗಿ ಉಲ್ಲೇಖಿಸಿದ್ದ ಚುನಾವಣಾ ಆಯೋಗವು ಸದ್ಯ ದೇಶಾದ್ಯಂತ ಹೆಚ್ಚುತ್ತಿರುವ ಕರೋನಾವೈರಸ್ (Coronavirus) ಮಧ್ಯೆ ಮಂಗಳವಾರ ಮತದಾನ ನಡೆಸಲು ವಿಶೇಷ ವ್ಯವಸ್ಥೆ ಕೈಗೊಂಡಿರುವುದು ಗಮನಾರ್ಹವಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

 

 

Trending News