ನವದೆಹಲಿ: ಅಯೋಧ್ಯೆ ಹಿಂದೂಗಳಿಗೆ ಪ್ರಮುಖ ಪವಿತ್ರ ತಾಣವಾಗಿದೆ ಅದು ಮುಸ್ಲಿಮರಿಗಲ್ಲ ಅವರಿಗೆ ಮೆಕ್ಕಾ ಪವಿತ್ರ ಸ್ಥಳ ಎಂದು ಕೇಂದ್ರ ಸಚಿವೆ ಉಮಾ ಭಾರತಿ ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಅಯೋಧ್ಯಾ ವಿವಾದದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಉಮಾಭಾರತಿ "ಇದು ಧಾರ್ಮಿಕ ವಿವಾದದ ವಿಷಯವಲ್ಲ, ಅಯೋಧ್ಯಾ ಹಿಂದೂಗಳಿಗೆ ಒಂದು ಪ್ರಮುಖ ಧಾರ್ಮಿಕ ಸ್ಥಳವಾಗಿದೆ ಏಕೆಂದರೆ ಇದು ರಾಮನ ಜನ್ಮಭೂಮಿ.ಆದರೆ ಮುಸ್ಲಿಮರಿಗೆ ಇದು ಧಾರ್ಮಿಕ ಸ್ಥಳವಲ್ಲ, ಅವರಿಗೆ ಇದು ಮೆಕ್ಕಾ ಇದೆ ಎಂದು ತಿಳಿಸಿದರು.
ಅಯೋಧ್ಯೆಯ ದೇವಸ್ಥಾನ-ಮಸೀದಿ ವಿವಾದ ಪ್ರಕರಣದ ವಿಚಾರಣೆ ಅಕ್ಟೋಬರ್ 29 ರಿಂದಲೇ ನಡೆಯಲಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆ ಮೂಲಕ ರಾಮ ಮಂದಿರ ಕಟ್ಟುತ್ತೇವೆ ಎಂದು ಹೇಳಿದ್ದ ಬಿಜೆಪಿಗೆ ಕೋರ್ಟ್ ನ ತೀರ್ಪು ಪರವಾಗಿ ಬಂದಿದ್ದೆ ಆದಲ್ಲಿ ಮುಂಬರುವ 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಅದು ವರವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
16 ನೇ ಶತಮಾನದ ಬಾಬರಿ ಮಸೀದಿಯನ್ನು ಸಾವಿರಾರು ಹಿಂದೂ ಬಲಪಂಥೀಯ ಸ್ವಯಂಸೇವಕರು ನಾಶ ಮಾಡುವ ಮೊದಲು ವಿವಾದಾತ್ಮಕ ಭಾಷಣ ಮಾಡಿದವರಲ್ಲಿ ಉಮಾ ಭಾರತಿ ಕೂಡ ಒಬ್ಬರು, ಪುರಾತನ ಹಿಂದು ದೇವಾಲಯದ ಅವಶೇಷಗಳ ಮೇಲೆ ಈ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಅವರು ನಂಬಿದ್ದರು.