ಅಹ್ಮದಾಬಾದ್: ಗುಜರಾತಿನ ಪಂಚಮಹಲ್ ಕ್ಷೇತ್ರದ ಬಿಜೆಪಿ ಸಂಸದರಾಗಿರುವ ಪ್ರಭಾತ್ ಸಿಂಗ್ ಚೌಹಾಣ್ ಅವರಿಗೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಟಿಕೆಟ್ ನೀಡಿಲ್ಲ. ಇದರಿಂದ ಕುಪಿತಗೊಂಡಿರುವ ಪ್ರಭಾತ್ ಸಿಂಗ್ ಚೌಹಾಣ್, 'ಪಕ್ಷ ನನಗೆ ಟಿಕೆಟ್ ನೀಡಿಲ್ಲ, ಆದರೆ ನಾನು ಚುನಾವಣಾ ರಂಗದಿಂದ ದೂರ ಸರಿಯುವುದಿಲ್ಲ. ನಾನು ಚುನಾವಣೆಗೆ ನಿಂತು ಗೆದ್ದೇ ಗೆಲ್ಲುತ್ತೇನೆ' ಎಂದಿದ್ದಾರೆ.
ಈ ಬಾರಿ ಚುನಾವಣೆಯಲ್ಲಿ ನಾನು ಪಂಚಮಹಲ್ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ. ಇದೇ ಏಪ್ರಿಲ್ 1ರಂದು ನಾನು ನಾಮಪತ್ರ ಸಲ್ಲಿಸುತ್ತೇನೆ. ಚುನಾವಣೆಯಲ್ಲಿ ಗೆಲುವು ನನ್ನದೇ. ಇದಕ್ಕಿಂತ ಹೆಚ್ಚಿನದನ್ನು ನಾನು ಹೇಳಲಾರೆ ಎಂದು ಸಂಸದ ಪ್ರಭಾತ್ ಸಿಂಗ್ ಚೌಹಾಣ್ ಹೇಳಿದ್ದಾರೆ.
ಭವಿಷ್ಯದ ಯೋಜನೆ ಬಗ್ಗೆ ಹೇಳಲಾರೆ!
ಬೇರೆ ಪಕ್ಷಕ್ಕೆ ಸೇರಲಿದ್ದಾರೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತಸಲು ನಿರಾಕರಿಸಿದ 77ರ ಹರೆಯದ ಪ್ರಭಾತ್ ಸಿಂಗ್ ಚೌಹಾಣ್, ಭವಿಷ್ಯದ ಯೋಜನೆ ಬಗ್ಗೆ ಹೇಳಲಾರೆ ಎಂದು ತಿಳಿಸಿದ್ದಾರೆ. 2009 ರಿಂದ ಎರಡು ಬಾರಿ ಸಂಸತ್ ಸದಸ್ಯರಾಗಿದ್ದಾರೆ. ಎನ್ಸಿಪಿಯ ರಾಜ್ಯ ಘಟಕದ ಮುಖ್ಯಸ್ಥ ಜಯಂತ್ ಪಟೇಲ್ ಅವರನ್ನು ಭೇಟಿಯಾದ ಅವರು ತಮ್ಮ ಪಕ್ಷದೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಹೇಳಿದ್ದಾರೆ. ಈ ಬಾರಿ ಬಿಜೆಪಿ ಸ್ವತಂತ್ರ ಶಾಸಕ ರತನ್ ಸಿಂಗ್ ರಾಥೋಡ್ಗೆ ಟಿಕೆಟ್ ನೀಡಿದೆ.