ಕೊಲ್ಕತ್ತಾ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದಲ್ಲಿ ಏಕೈಕ ಸ್ಥಾನ ಗಳಿಸುವುದೂ ಬಿಜೆಪಿಗೆ ಸಾಧ್ಯವಿಲ್ಲ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ತೃಣಮೂಲ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಶನಿವಾರ ಹೇಳಿದ್ದಾರೆ.
ನಗರದ ಬ್ರಿಗೇಡ್ ಮೈದಾನದಲ್ಲಿ ನಡೆಯುತ್ತಿರುವ 'ಸಂಯುಕ್ತ ಭಾರತ ರ್ಯಾಲಿ'ಯನ್ನು ಉದ್ದೇಶಿಸಿ ಮಾತನಾಡಿದ ಅವರು, ಉತ್ತರಪ್ರದೇಶದಲ್ಲಿ ಬಿಜೆಪಿ ಏಕೈಕ ಸ್ಥಾನವನ್ನೂ ಗಳಿಸಲು ಸಾಧ್ಯವಿಲ್ಲ ಎಂಬ ಭರವಸೆ ನಮಗಿದೆ. ಅದರಂತೆ ಪಶ್ಚಿಮ ಬಂಗಾಳದಲ್ಲೂ ಬಿಜೆಪಿ ಸ್ಥಿತಿ ಶೂನ್ಯವಾಗಲಿದೆ ಎಂದು ಹೇಳಿದರು.
ಬಿಜೆಪಿಗೆ ಹಿನ್ನಡೆ
ಈಗಾಗಲೇ ಉತ್ತರಪ್ರದೇಶದಲ್ಲಿ ಲೋಕಸಭೆ ಚುನಾವಣೆ ಎದುರಿಸಲು ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷ ಮೈತ್ರಿ ಮಾಡಿಕೊಂಡಿರುವುದು ಬಿಜೆಪಿಗೆ ಹಿನ್ನಡೆಯಾಗಿದೆ. ಅದಕ್ಕಾಗಿ ಬಿಜೆಪಿ ಪಕ್ಷದ ನಾಯಕರೊಂದಿಗೆ ಕಾರ್ಯತಂತ್ರ ರೂಪಿಸಲು ಸಭೆ ನಡೆಸುತ್ತಿದೆ ಎಂದು ಅಖಿಲೇಶ್ ಯಾದವ್ ಟೀಕಿಸಿದರು.
ನಮ್ಮದು ಒಗ್ಗಟ್ಟಿನ ನಾಯಕತ್ವ
ಇದೇ ಸಂದರ್ಭದಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, ದೇಶದ 23 ಪಕ್ಷಗಳು ಪ್ರಸ್ತುತವಾಗಿ ಬಿಜೆಪಿಯ ವಿರುದ್ಧ ನಿಂತಿವೆ. ಈ ಸಮಾವೇಶಕ್ಕೆ ಬಾರದ ಕೆಲವು ಪಕ್ಷಗಳೂ ಸಹ ಬಿಜೆಪಿಗೆ ವಿರುದ್ಧ ಇವೆ. ನಮಗೆ ಯಾರು ಪ್ರಧಾನಿ ಆಗುತ್ತಾರೆ ಎನ್ನುವುದು ಬೇಡ. ಆದರೆ ಬಿಜೆಪಿಯಂತಹಾ ಸಂವಿಧಾನ ವಿರೋಧಿ ಪಕ್ಷವನ್ನು ಅಧಿಕಾರದಿಂದ ದೂರ ಇಡಬೇಕಾಗಿದೆ. ನಾವು ಐದು ವರ್ಷ ಗಟ್ಟಿ ಸರ್ಕಾರ ಕೊಡುವುದರಲ್ಲಿ ನನಗೆ ನಂಬಿಕೆ ಇದೆ. ಅವರಿಗೆ ನಾಯಕನೇ ಇಲ್ಲ ಎಂದು ಮೋದಿ ಹೇಳಿದ್ದಾರಂತೆ. ನಿಮಗೆ ಈಗ ನಾಯಕ ಇಲ್ಲ ಎಂದು ಕಾಣುತ್ತಿರಬಹುದು. ಆದರೆ ನಮ್ಮಲ್ಲಿ ಇರುವವರೆಲ್ಲಾ ನಾಯಕರೇ. ನಮ್ಮದು ಒಗ್ಗಟ್ಟಿನ ನಾಯಕತ್ವ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟಾಂಗ್ ನೀಡಿದರು.
ಮೋದಿ ಸರ್ಕಾರದ ಅವಧಿ ಮುಗಿದಿದೆ
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಉದ್ಯೋಗ ಸೃಷ್ಟಿಸುವುಡಾಗ್ ಭರವಸೆ ನೀಡಿತ್ತು. ಅಲ್ಲದೆ, ಜನರ ಖಾತೆಗೆ 15 ಲಕ್ಷ ಹಣ, ರೈತರಿಗೆ ಆದಾಯ ದ್ವಿಗುಣ ಸೇರಿದಂತೆ ಅನೇಕ ಭರವಸೆಗಳನ್ನು ನೀಡಿತ್ತು. ಆದರೆ ಅದಾವುದನ್ನೂ ಈಡೇರಿಸಲಿಲ್ಲ.ಕೇವಲ ಒಂದರಹಿಂದೊಂದರಂತೆ ಹಗರಣಗಳಲ್ಲಿಯೇ ಬಿಜೆಪಿ ಕಾಲ ಕಳೆಯಿತು. ಈಗ ಪ್ರಧಾನಿ ಮೋದಿ ಸರ್ಕಾರದ ಅವಧಿ ಮುಗಿದಿದೆ. ಪ್ರತಿಪಕ್ಷಗಳು ಒಗ್ಗಟ್ಟಾಗಿ ಕೆಲಸ ಮಾಡುವುದಾಗಿ ಪ್ರಮಾಣ ಮಾಡಿದ್ದು, ಲೋಕಸಭೆ ಚುನಾವಣೆ ನಂತರ ಪ್ರಧಾನಿ ಅಭ್ಯರ್ಥಿಯನ್ನು ನಿರ್ಧರಿಸಲಾಗುವುದು ಎಂದು ಮಮತಾ ಬ್ಯಾನರ್ಜಿ ಹೇಳಿದರು.