ನವದೆಹಲಿ: ಛತ್ತೀಸ್ಗಢ ವಿಧಾನಸಭಾ ಚುನಾವಣೆಯಲ್ಲಿ ರಮಣ್ ಸಿಂಗ್ ನೇತೃತ್ವದ ಬಿಜೆಪಿ ಸರ್ಕಾರ ಭಾರೀ ಮುಖಭಂಗ ಅನುಭವಿಸಿದೆ. ಸತತ 15 ವರ್ಷ ಛತ್ತೀಸ್ಗಢದ ಮುಖ್ಯಮಂತ್ರಿಯಾಗಿದ್ದ ಬಿಜೆಪಿಯ ರಮಣ್ ಸಿಂಗ್ ಈ ಬಾರಿ ಅಧಿಕಾರ ಕಳೆದುಕೊಳ್ಳುತ್ತಿದ್ದಾರೆ. ಛತ್ತೀಸ್ಗಢದಲ್ಲಿ ಪ್ರತಿಷ್ಠಿತ ರಾಜಕೀಯ ನಾಯಕನ ನೇತೃತ್ವದಲ್ಲಿ ಪಕ್ಷ ಅಧಿಕಾರಕ್ಕೆ ಬರುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದರು. ಆದರೆ ಬಿಜೆಪಿಯ ಭದ್ರಕೋಟೆಯಾಗಿದ್ದ ಛತ್ತೀಸ್ಗಢದಲ್ಲಿ ಪಕ್ಷ ಹೀನಾಯ ಸೋಲು ಕಂಡಿದೆ.
ಛತ್ತೀಸ್ಗಢದ ಕಳೆದ ಚುನಾವಣೆಯಲ್ಲಿ ಬಿಜೆಪಿಯು 49 ಸ್ಥಾನಗಳಲ್ಲಿ ಗೆದ್ದು ಸರ್ಕಾರ ರಚಿಸಿತ್ತು. ಕಾಂಗ್ರೆಸ್ ಪಕ್ಷವು 39 ಸ್ಥಾನಗಳಲ್ಲಿ ಗೆದ್ದಿತ್ತು. ಕಳೆದ ಬಾರಿ ಚುನಾವಣೆಯಲ್ಲಿ ಬಿಜೆಪಿಗಿಂತಲೂ ಹೆಚ್ಚು ಸ್ಥಾನಗಳನ್ನು ಗೆಲ್ಲುವತ್ತ ಕಾಂಗ್ರೆಸ್ ಹೆಜ್ಜೆ ಇಟ್ಟಿದೆ.
ದೀರ್ಘಕಾಲದವರೆಗೆ ಬಿಜೆಪಿ ಮುಖ್ಯಮಂತ್ರಿಯಾಗಿದ್ದ ರಮಣ್ ಸಿಂಗ್ ಈ ಬಾರಿ ಚುನಾವಣೆಯಲ್ಲಿ ಕಠಿಣ ಹೋರಾಟ ನಡೆಸುತ್ತಿದ್ದಾರೆ. ಸ್ವತಃ ರಮಣ್ ಸಿಂಗ್ ಅವರು ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದ್ದು, ಸೋಲುವ ಭೀತಿ ಎದುರಿಸುತ್ತಿದ್ದಾರೆ. ಅಲ್ಲದೆ ಪಕ್ಷದ ಚುನಾವಣೆಯಲ್ಲಿ ಹೀನಾಯ ಸೋಲಿನ ಜವಾಬ್ದಾರಿ ಹೊರಬೇಕಾಗಿದೆ. ಛತ್ತೀಸ್ಗಢದಲ್ಲಿ ಅಜಿತ್ ಜೋಗಿ ನೇತೃತ್ವದ ಜನತಾ ಕಾಂಗ್ರೆಸ್ ಮತ್ತು ಬಿಎಸ್ಪಿ ಮೈತ್ರಿ ಮಾಡಿಕೊಂಡಿದ್ದವು. ರಮಣ್ ಸಿಂಗ್ ಜನಪ್ರಿಯ ನಾಯಕರಾಗಿದ್ದರು. ಆದರೆ ಪಕ್ಷದಲ್ಲಿನ ಕೆಲವು ಒಡಕುಗಳು ಪರಿಣಾಮದಿಂದಾಗಿ ಭದ್ರಕೋಟೆ ಕುಸಿಯಲು ಕಾರಣವಾಗಿದೆ.
2003ರಿಂದದ ಅಧಿಕಾರದಲ್ಲಿದ್ದ ಬಿಜೆಪಿ ಪಕ್ಷ ಛತ್ತೀಸ್ಗಢದಲ್ಲಿ ಈ ಬಾರಿ ಅಧಿಕಾರ ಕಳೆದುಕೊಳ್ಳುತ್ತಿದೆ. ಛತ್ತೀಸ್ಗಢದಲ್ಲಿ ಕಾಂಗ್ರೆಸ್ ಮುನ್ನಡೆ ಹೆಚ್ಚುತ್ತಲೇ ಇದ್ದು , ಬಿಜೆಪಿ ಕುಸಿಯುತ್ತಲೇ ಸಾಗಿದೆ. ರಾಜ್ಯದಲ್ಲಿ 15 ವರ್ಷಗಳಿಂದ ಅಧಿಕಾರದಲ್ಲಿರುವ ಬಿಜೆಪಿಗೆ ಆಘಾತ ಎದುರಾಗಿದೆ. ಆಡಳಿತ ವಿರೋಧಿ ಅಲೆಯಲ್ಲಿ ಬಿಜೆಪಿ ಹಿನ್ನಡೆ ಕಂಡಿದೆ. ಸದ್ಯ ಕೈ 64 ಸ್ಥಾನದಲ್ಲಿ ಮುಂದಿದ್ದು, ಬಿಜೆಪಿ 18ಕ್ಕೆ ಕುಸಿದಿದೆ. ಬಿಎಸ್ಪಿ 8 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ರಾಜಧಾನಿಯಲ್ಲಿರುವ ಭಾರತೀಯ ಜನತಾ ಪಕ್ಷದ ಕಚೇರಿ ಬಿಕೋ ಎನ್ನುತ್ತಿದೆ.
ಮೊದಲ ಎರಡು ಚುನಾವಣೆಗಳಲ್ಲಿ ಗೆಲುವು ಸಾಧಿಸಿದ್ದ ರಮಣ್ ಸಿಂಗ್ ಮೂರನೇ ಚುನಾವನೆಯಲಿಲ್ ಸೋತಿದ್ದರು ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಆದರೆ ಬಳಿಕ ಭವಿಷ್ಯದಲ್ಲಿ ಅವರು ಛತ್ತೀಸ್ಗಢದ ಪ್ರಮುಖ ನಾಯಕರಾಗಿ ಬೆಳೆದರು. ಅವರ ರಾಜಕೀಯ ಪ್ರಯಾಣ ಮುಂದುವರೆಯಿತು.
ರಮಣ್ ಸಿಂಗ್ ನಡೆದು ಬಂದ ಹಾದಿ:
ರಮಣ್ ಸಿಂಗ್ 1952 ರ ಅಕ್ಟೋಬರ್ 15 ರಂದು ಕವರ್ಧಾಮದ (ಈಗ ಕಬೀರ್ಧಾಮ್ ಜಿಲ್ಲೆಯ) ಥಟ್ಟಪುರ ಜಿಲ್ಲೆಯಲ್ಲಿ ರೈತರ ಕುಟುಂಬದಲ್ಲಿ ಜನಿಸಿದರು. ತಮ್ಮ ಆರಂಭಿಕ ರಾಜಕೀಯ ಜೀವನದಿಂದಲೂ ರಮಣ್ ಸಿಂಗ್ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜೊತೆ ನಿಖಟ ಸಂಬಂಧ ಹೊಂದಿದ್ದರು. ತಮ್ಮ ಶಾಲಾ ದಿನಗಳಲ್ಲಿ ಜನಸಂಘದಲ್ಲಿ ಸೇರಿದ್ದ ಅವರು BAMS(ಬ್ಯಾಚುಲರ್ ಆಫ್ ಆಯುರ್ವೇದಿಕ್ ಮೆಡಿಸಿನ್) ಪದವಿ ಪಡೆದರು. ರಮಣ್ ಸಿಂಗ್ ವೀಣಾ ಸಿಂಗ್ ಅವರನ್ನು ವಿವಾಹವಾದರು. ಅವರಿಗೆ ಅಭಿಷೇಕ್ ಸಿಂಗ್ ಮತ್ತು ಅಶ್ಮಿತ ಸಿಂಗ್ ಎಂಬ ಇಬ್ಬರು ಮಕ್ಕಳಿದ್ದಾರೆ.
1990 ರಲ್ಲಿ ಅವರು ಮಧ್ಯಪ್ರದೇಶ ವಿಧಾನಸಭೆಗೆ ಆಯ್ಕೆಯಾದರು. 1993 ರಲ್ಲಿ ಅವರು ಮತ್ತೆ ಆಯ್ಕೆಯಾದರು. ಆದರೆ ಅವರು 1998 ರಲ್ಲಿ ಅವಿಭಜಿತ ಎಂಪಿ ಚುನಾವಣೆಯಲ್ಲಿ ಸೋತರು. ಆರು ತಿಂಗಳ ನಂತರ ಲೋಕಸಭಾ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ನೀಡಲಾಯಿತು. 1999 ರಲ್ಲಿ ಮೊದಲ ಬಾರಿಗೆ ಅವರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದರು. ಈ ಚುನಾವಣೆಯಲ್ಲಿ ಅವರು ಮೋತಿಲಾಲ್ ವೊರಾ ಅವರಂತಹ ಪ್ರಸಿದ್ಧ ಕಾಂಗ್ರೆಸ್ಸಿಗರನ್ನು ಸೋಲಿಸಿದರು. ಬಳಿಕ ರಾಷ್ಟ್ರ ರಾಜಕಾರಣಕ್ಕೆ ಕಾಲಿಟ್ಟ ಇವರು ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ 1999 ರಿಂದ 2003 ರವರೆಗೂ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾಗಿ ಸೇವೆ ಸಲ್ಲಿಸಿದರು. ಮೂರನೇ ಚುನಾವಣೆಯಲ್ಲಿ ರಮಣ್ ಸಿಂಗ್ ಸೋಲದೆ ಇದ್ದಿದ್ದರೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರಲಿಲ್ಲ, ವಾಜಪೇಯಿ ಮಂತ್ರಿಮಂಡಲದಲ್ಲಿ ಸಚಿವರೂ ಆಗುತ್ತಿರಲಿಲ್ಲ. ಅಲ್ಲದೆ ಛತ್ತೀಸ್ಗಢದ ಮುಖ್ಯಮಂತ್ರಿಯೂ ಆಗುತ್ತಿರಲಿಲ್ಲ. ಅವರು ಸೋತ ಆ ಚುನಾವಣೆ ರಾಜಕೀಯದಲ್ಲಿ ಅವರಿಗೆ ದೊಡ್ಡ ತಿರುವು ಎಂದೇ ಹೇಳಬಹುದು.
ಛತ್ತೀಸ್ಗಢದಲ್ಲಿ 2003 ರಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಿತು. ಆದರೆ ದಿಲೀಪ್ ಸಿಂಗ್ ಜೂಡೋ ಮುಖ್ಯಮಂತ್ರಿ ಸ್ಪರ್ಧೆಯಿಂದ ಹೊರಬಂದ ಬಳಿಕ, ಮುಂಚೂಣಿಯಲ್ಲಿ ಕೇಳಿ ಬಂದ ಹೆಸರು ರಮಣ್ ಸಿಂಗ್. ಅಂದು ಛತ್ತೀಸ್ಗಢದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ 56 ವರ್ಷದ ಆಯುರ್ವೇದ ವೈದ್ಯರಾದ ರಮಣ್ ಸಿಂಗ್ ಹಿಂದಿರುಗಿ ನೋಡಿದ್ದೇ ಇಲ್ಲ. 2004ರಲ್ಲಿ ಅವರು ಛತ್ತೀಸ್ಗಢ ವಿಧಾನಸಭಾ ಸದಸ್ಯರಾಗಿ ಆಯ್ಕೆಯಾದರು. 2008 ರಲ್ಲಿ ರಾಜನಂದಾಗಾವ್ ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.