ಇಂದು ರೈತರು- ಕೇಂದ್ರ ‌ಸರ್ಕಾರದ ನಡುವೆ ಮತ್ತೊಂದು ಸುತ್ತಿನ ಮಾತುಕತೆ, ಮುಂದುವರೆದಿರುವ ಪ್ರತಿಭಟನೆ

ರೈತರ ಪಾಲಿಗೆ ಮರಣಶಾಸನವಾಗಿರುವ ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ಸಂಪೂರ್ಣವಾಗಿ ಹಿಂಪಡೆಯಬೇಕು.‌ ರೈತ ಬೆಳೆಯುವ ಎಲ್ಲಾ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆ ಕಾನೂನು ಜಾರಿಗೊಳಿಸಬೇಕು. ರೈತರಿಗೆ ಪೂರಕವಾಗಿಲ್ಲದ ವಿದ್ಯುತ್ ಕಾಯಿದೆಯನ್ನು ಹಿಂಪಡೆಯಬೇಕು ಎಂಬ ರೈತರ ಹಕ್ಕೊತ್ತಾಯವನ್ನು ಕೇಂದ್ರ ಸರ್ಕಾರ ಒಪ್ಪಿಕೊಳ್ಳಲಿಲ್ಲ. 

Written by - Yashaswini V | Last Updated : Dec 3, 2020, 07:35 AM IST
  • ದೆಹಲಿ ಗಡಿಯಲ್ಲಿ ರೈತರು ನಡೆಸುತ್ತಿದ್ದ ಅನಿರ್ದಿಷ್ಟವಾಧಿ ಧರಣಿ 8ನೇ ದಿನಕ್ಕೆ ಕಾಲಿಟ್ಟಿದೆ.
  • ಇಂದು ರೈತರು ಮತ್ತು ಕೇಂದ್ರ ‌ಸರ್ಕಾರದ ನಡುವೆ ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ.
ಇಂದು ರೈತರು- ಕೇಂದ್ರ ‌ಸರ್ಕಾರದ ನಡುವೆ ಮತ್ತೊಂದು ಸುತ್ತಿನ ಮಾತುಕತೆ, ಮುಂದುವರೆದಿರುವ ಪ್ರತಿಭಟನೆ title=

ನವದೆಹಲಿ: ರೈತರು ಹಾಗೂ ಕೇಂದ್ರ ಸರ್ಕಾರದ ನಡುವೆ ನಿನ್ನೆ ನಡೆದ ಮಾತುಕತೆ ವಿಫಲವಾಗಿದ್ದು, ದೆಹಲಿ ಗಡಿಯಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿರುವ ರೈತರು ತಮ್ಮ ಪ್ರತಿಭಟನೆಯನ್ನು ಮುಂದುವರೆಸಲು ನಿರ್ಧರಿಸಿದ್ದಾರೆ. ಇದರಿಂದ ದೆಹಲಿ ಗಡಿಯಲ್ಲಿ ರೈತರು ನಡೆಸುತ್ತಿದ್ದ ಅನಿರ್ದಿಷ್ಟವಾಧಿ ಧರಣಿ 8ನೇ ದಿನಕ್ಕೆ ಕಾಲಿಟ್ಟಿದೆ. ಇನ್ನೊಂದೆಡೆ ಇಂದು ರೈತರು ಮತ್ತು ಕೇಂದ್ರ ‌ಸರ್ಕಾರದ ನಡುವೆ ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ.

ಮೊನ್ನೆ (ಡಿಸೆಂಬರ್ 1) ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ (Narendra Singh Tomar), ಪಿಯೂಷ್ ಗೋಯಲ್, ಕಿರಿಯ ಕೈಗಾರಿಕಾ ಸಚಿವ ಸೋಮ್ ಪ್ರಕಾಶ್ ಹಾಗೂ ರೈತ ಸಂಘಟನೆಗಳ 35 ಮಂದಿ ಪ್ರತಿನಿಧಿಗಳ‌ ನಡುವೆ ದೆಹಲಿಯ ವಿಜ್ಞಾನ ಭವನದಲ್ಲಿ ಸಭೆ ನಡೆದಿತ್ತು. ಆದರೆ ಆ ಸಭೆಯಲ್ಲಿ ನಡೆದ ಮಾತುಕತೆ ಯಶಸ್ವಿಯಾಗಿರಲಿಲ್ಲ. ರೈತರು ಇನ್ನಷ್ಟು ತೀವ್ರವಾಗಿ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಕೇಂದ್ರ ಸರ್ಕಾರ ಮತ್ತೊಂದು ಸುತ್ತಿನ ಸಭೆ ಕರೆದಿದೆ.

ರೈತರ ಪ್ರತಿಭಟನೆಗೆ ಸಾರಿಗೆ ಬೆಂಬಲ, ಡಿಸೆಂಬರ್ 8ರಿಂದ ನಿಲ್ಲಲಿದೆ ಈ ಸೇವೆ

ರೈತರ ಪಾಲಿಗೆ ಮರಣಶಾಸನವಾಗಿರುವ ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ಸಂಪೂರ್ಣವಾಗಿ ಹಿಂಪಡೆಯಬೇಕು.‌ ರೈತ ಬೆಳೆಯುವ ಎಲ್ಲಾ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆ ಕಾನೂನು ಜಾರಿಗೊಳಿಸಬೇಕು. ರೈತರಿಗೆ ಪೂರಕವಾಗಿಲ್ಲದ ವಿದ್ಯುತ್ ಕಾಯಿದೆಯನ್ನು ಹಿಂಪಡೆಯಬೇಕು ಎಂಬ ರೈತರ ಹಕ್ಕೊತ್ತಾಯವನ್ನು ಕೇಂದ್ರ ಸರ್ಕಾರ ಒಪ್ಪಿಕೊಳ್ಳಲಿಲ್ಲ. ಇನ್ನೊಂದೆಡೆ ಕೃಷಿ ಕಾನೂನುಗಳಲ್ಲಿನ ಭಿನ್ನಾಭಿಪ್ರಾಯಗಳನ್ನು ವಿಂಗಡಿಸಿ ಚರ್ಚಿಸಲು ಸಮಿತಿಯೊಂದನ್ನು ರಚಿಸುವ ಸಚಿವತ್ರಯರ ಪ್ರಸ್ತಾಪವನ್ನು ರೈತರು ಒಪ್ಪಿಕೊಳ್ಳಲಿಲ್ಲ. ಅದರಿಂದಾಗಿ ಮೊನ್ನೆಯ ಮಾತುಕತೆ ಮುರಿದುಬಿದ್ದಿತ್ತು.

ಕೃಷಿ ಕಾನೂನುಗಳಲ್ಲಿನ ಭಿನ್ನಾಭಿಪ್ರಾಯಗಳನ್ನು ವಿಂಗಡಿಸಿ ಚರ್ಚಿಸಲು ಸಮಿತಿಯೊಂದನ್ನು ರಚಿಸುವ  ಜೊತೆಗೆ ಕನಿಷ್ಠ ಬೆಂಬಲ ಬೆಲೆ (MSP) ಮತ್ತು ಎಪಿಎಂಸಿ ಮಂಡಿಗಳ ಬಗೆಗಿನ ಕಳವಳವನ್ನು ಹೋಗಲಾಡಿಸಲು ಪ್ರಯತ್ನಿಸುವುದಾಗಿ ಕೇಂದ್ರ ಸರ್ಕಾರದ ಪರವಾಗಿ ಸಚಿವರು ಭರವಸೆ ನೀಡಿದರು. ಆದರೆ ರೈತರ ಪ್ರತಿನಿಧಿಗಳು ರೈತರ ಪಾಲಿಗೆ ಮರಣಶಾಸನವಾಗಿರುವ ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ಸಂಪೂರ್ಣವಾಗಿ ಹಿಂಪಡೆಯಬೇಕು.‌ ಜೊತೆಗೆ ರೈತ ಬೆಳೆಯುವ ಎಲ್ಲಾ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆ ಕಾನೂನು ಜಾರಿಗೊಳಿಸಬೇಕು ಎಂಬ ಮೂಲ ಬೇಡಿಕೆ ಈಡೇರಿಸಲೇಬೇಕು ಎಂದು ಒತ್ತಾಯಿಸಿದರು ಎನ್ನಲಾಗಿದೆ.

ರೈತರನ್ನು ಉಗ್ರರು ಎಂದು ಕರೆಯುವ ಮೂಲಕ ಮೋದಿ ಸರ್ಕಾರ ರೈತ ಸಮುದಾಯಕ್ಕೆ ಅವಮಾನ ಮಾಡಿದೆ

ಮೊನ್ನೆ ನಡೆದ ಸಭೆಗೆ ದೆಹಲಿ ಚಲೋದ (Dilli Chalo) ಏಳು ಸದಸ್ಯರ ರೈತರ ಸಮಿತಿಯ ಭಾಗವಾಗಿದ್ದ ಸ್ವರಾಜ್ ಇಂಡಿಯಾ ಮುಖ್ಯಸ್ಥ ಯೋಗೇಂದ್ರ ಯಾದವ್ ಹಾಜರಾಗುವ ಬಗ್ಗೆ ಕೇಂದ್ರ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿತ್ತು. ಸಭೆಯಲ್ಲಿ ರಾಜಕೀಯ ಕಾರ್ಯಕರ್ತರು ಇರಬಾರದು ಎಂದು ಹೇಳಿತ್ತು. 'ನನ್ನಿಂದ ಮಾತುಕತೆಗೆ ಅಡ್ಡಿಯಾಗುವುದಾದರೆ   ತಾನು ಹಾಜರಾಗುವುದಿಲ್ಲ.‌ ಒಟ್ಟಿನಲ್ಲಿ ರೈತರು ಯಶಸ್ಸು ಕಾಣಬೇಕಷ್ಟೇ' ಎಂದು ಯೋಗೇಂದ್ರ ಯಾದವ್ ಹೇಳಿದ್ದರು.

ಸದ್ಯ ಸಿಂಘು, ಬುರಾರಿ ಮತ್ತಿತರ ಕಡೆ ಗಡಿಯಲ್ಲಿರುವ ರೈತರು ಪ್ರತಿಭಟನೆ (Farmers Protest) ಮುಂದುವರೆಸಿದ್ದು, ಇಂದು ಕೇಂದ್ರ ಸರ್ಕಾರ ಮತ್ತು ರೈತರ ನಡುವೆ ಮತ್ತೊಂದು ಸುತ್ತಿನ ಮಾತಕತೆ ನಡೆಯಲಿದೆ. ಈ ಸಭೆಯೂ ವಿಫಲವಾದರೆ ಮಹಾರಾಷ್ಟ್ರದಿಂದ ದೆಹಲಿಗೆ ರೈತರು ಮೆರವಣಿಗೆ ಪ್ರಾರಂಭಿಸುವುದಾಗಿ ಮಹಾರಾಷ್ಟ್ರ ರೈತ ಗುಂಪುಗಳು ಕೇಂದ್ರಕ್ಕೆ ಎಚ್ಚರಿಕೆ ನೀಡಿವೆ. ಇದರಿಂದ ಪ್ರತಿಭಟನೆ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.
 

Trending News